ದಿನಕರ ದೇಸಾಯಿ ನಾಡು ಕಂಡ ಅಸಾಧಾರಣ ವ್ಯಕ್ತಿ
ಹಾವೇರಿ: ದಿನಕರ ದೇಸಾಯಿ ಕನ್ನಡ ನಾಡು ನುಡಿ ಕಂಡ ಅಸಾಧಾರಣ ವ್ಯಕ್ತಿ. ಜನ ಸೇವೆಯೇ ಜನಾರ್ದನ ಸೇವೆಯೆಂದು ನಂಬಿಕೊಂಡವರು. ಜನಹಿತಕ್ಕಾಗಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ಅವರು ಅಸಾಧಾರಣ ಪ್ರತಿಭೆ ಹೊಂದಿದ್ದರು ಎಂದು ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ ಹೇಳಿದರು.
ಕನ್ನಡ ರಾಜ್ಯೋತ್ಸವ ಆಚರಣಾ ಕಾರ್ಯಕ್ರಮದ ನೆನಪಿಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ನವೋದಯ ಕವಿ-ಕಾವ್ಯ, ಗಾಯನ ಚಿಂತನ ಮಾಲೆ ಕಾರ್ಯಕ್ರಮದಲ್ಲಿ ನವೋದಯ ಕವಿ ದಿನಕರ ದೇಸಾಯಿಯವರ ಬದುಕು-ಬರಹ ಕುರಿತು ಅವರು ಮಾತನಾಡಿದರು.
ದೇಸಾಯಿಯವರು ಜನಸೇವಕ ಪತ್ರಿಕೆ ಆರಂಭಿಸಿ, ಜನಪರವಾದ ಸಾಹಿತ್ಯವನ್ನು ಜನರಿಗೆ ಅರ್ಥವಾಗುವಂತೆ ಬರೆದವರು. ನಿಷ್ಠೆ, ಪ್ರಾಮಾಣಿಕತೆ, ಆದರ್ಶಕ್ಕೆ ಬದ್ಧರಾಗಿದ್ದವರು. ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು ಎನ್ನುವ ಗಾದೆ ಮಾತು ರೂಢಿಯಲ್ಲಿದೆ. ಆದರೆ, ದೇಸಾಯಿಯವರು ಹತ್ತು ಕಟ್ಟುವಲ್ಲಿ ಒಂದು ಮುತ್ತಿನ ಬದಲು ಹತ್ತು ಮುತ್ತುಗಳನ್ನು ಕಟ್ಟಿದವರು. ಈ ಮೂಲಕ ತಮ್ಮ ಆಗಾಧ ವ್ಯಕ್ತಿತ್ವದ ಸಾಧ್ಯತೆಯನ್ನು ತೆರೆದು ತೋರಿದರು. ಅಸಾಧಾರಣಾ ಪತ್ರಿಭೆ ಮತ್ತು ಅದ್ಭುತ ಸಂಘಟನಾ ಶಕ್ತಿಯನ್ನು ಅವರು ಹೊಂದಿದ್ದರು ಎಂದರು.
ಕಾವ್ಯ ಜನರಿಗೆ ತಲುಪಬೇಕು. ದಂತ ಗೋಪುರದಲ್ಲಿ ಕುಳಿತು ಕಾವ್ಯ ಬರೆಯುವ ಕಾಲ ಇದಲ್ಲ. ಸಮಕಾಲೀನತೆ ಹಾಗೂ ವರ್ತಮಾನದ ತುರ್ತುಗಳಿಗೆ ಸ್ಪಂದಿಸದಿದ್ದರೆ ಅಂತಹ ಕಾವ್ಯದಿಂದ ದೊರಕುವ ಕೀರ್ತಿಯು ಸುಡಲಿ ಎಂದು ನಂಬಿದವರು ದೇಸಾಯಿ. ದೇಸಾಯಿಯವರು ಚುಟುಕು ಕವಿ ಅಷ್ಟೆ ಅಲ್ಲ, ಗಂಭೀರ ಚಿಂತನೆಗಳಿಂದ ಕೂಡಿದ ವಿಚಾರ ಪ್ರಚೋದಕ ಕವನಗಳನ್ನು ಬರೆದಿದ್ದಾರೆ. ಸರ್ವಜ್ಞನ ವಚನಗಳಂತೆ, ಡಿವಿಜಿ ಅವರ ಮಂಕು ತಿಮ್ಮನ ಕಗ್ಗನಂತೆ ಅವರ ಚೌಪದಿಗಳು ಕನ್ನಡದ ಮನೆ-ಮನಗಳನ್ನು ತಲುಪಿವೆ. ವ್ಯಂಗ್ಯ, ವಿಡಂಬನೆಗಳೊಂದಿಗೆ ಅತ್ಯಂತ ಸಮರ್ಥವಾಗಿ ಪ್ರಾಸಗಳನ್ನು ತಮ್ಮ ಅಭಿವ್ಯಕ್ತಿಗೆ ದುಡಿಸಿಕೊಂಡವರು ಎಂದರು.
ದೇಸಾಯಿಯವರ ಕವನ ಓದುವುದರ ಮೂಲಕ ಕಾರ್ಯಕ್ರಮವನ್ನು ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಉದ್ಘಾಟಿಸಿದರು.
ಸುಸ್ವರ ಸಂಗೀತ ಶಾಲೆಯ ವಾಣಿ ಸುರೇಶ ಕಣೇಕಲ್ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುಶಾಂತಪ್ಪ ಜಿ. ಮಾಸಣಗಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಕಸಾಪ ಅಧ್ಯಕ್ಷ ಲಿಂಗರಾಜ ಪಾಟೀಲ ಇದ್ದರು. ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಸತೀಶ ಕುಲಕರ್ಣಿ, ವಿರೂಪಾಕ್ಷಪ್ಪ ಪಡಿಗೋದಿ, ಪ್ರಕಾಶ ಜೈನ, ಪ್ರೊ. ಹೇಮಂತ ಗಂಟೇರ, ಲಿಂಗರಾಜ ಸೊಟ್ಟಪ್ಪನವರ, ಎಸ್.ಆರ್. ಹಿರೇಮಠ, ಎಸ್.ಎನ್. ದೊಡ್ಡಗೌಡರ, ಸಂಗಾಪುರ, ಶಾಂತಗಿರಿ, ಗುಡ್ಡಳ್ಳಿ, ಹೊನ್ನಗಂಗಾಧರಯ್ಯ, ಬಸಮ್ಮ ಹಳಕೊಪ್ಪ, ಪರಿಮಳಾ ಜೈನ್, ರೇಣುಕಾ ಗುಡಿಮನಿ ಇತರರು ಇದ್ದರು.
ಪ್ರಭು ಹಲಗೇರಿ ಸ್ವಾಗತಿಸಿದರು. ನಾಗರಾಜ ದೇಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಾವಿತ್ರಮ್ಮ ಮಲ್ಲನಗೌಡ್ರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

