ಹಾವೇರಿ

ಪೈಕಾ ಕ್ರೀಡಾಕೂಟಕ್ಕೆ ಹೈಕ್ಲಾಸ್ ಸಿದ್ಧತೆ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ನ. 26
ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ನಡೆಯುತ್ತಿರುವ ರಾಷ್ಟ್ರಮಟ್ಟದ ಮಹಿಳಾ ಪೈಕಾ ಕ್ರೀಡಾಕೂಟ ನ. 27ರಿಂದ ಆರಂಭವಾಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿವಿಧ ರಾಜ್ಯಗಳಿಂದ ಬರುವ ಕ್ರೀಡಾಪಟುಗಳಿಗೆ ಅಗತ್ಯ ವಸತಿ, ಊಟ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದರು.
ಕ್ರೀಡಾಕೂಟದ ಸಿದ್ಧತೆ ಕುರಿತು ಮಂಗಳವಾರ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹಾಗೂ ಇತರ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕ್ರೀಡಾಕೂಟದಲ್ಲಿ ಕಬಡ್ಡಿ, ಖೋಖೋ ಹಾಗೂ ವಾಲಿಬಾಲ್ ಪಂದ್ಯಗಳು ನಡೆಯಲಿವೆ. ಕ್ರೀಡಾಂಗಣ ತಯಾರಿ ಕಾರ್ಯ ಪೂರ್ಣಗೊಳಿಸಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗಿದೆ. ಪಂದ್ಯ ವೀಕ್ಷಣೆಗೂ ಅನುಕೂಲ ಕಲ್ಪಿಸಲಾಗಿದೆ. ಪ್ರತಿ ಕ್ರೀಡೆಗೆ ಮೂರರಂತೆ 9 ಅಂಕಣಗಳು ಕ್ರೀಡಾಂಗಣದಲ್ಲಿ ಸಿದ್ಧಗೊಂಡಿವೆ. ಹೊನಲು ಬೆಳಕಿನಲ್ಲಿ ಪಂದ್ಯಾಟ ನಡೆಸಲು ಒಂದೊಂದು ಅಂಕಣಕ್ಕೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕ್ರೀಡಾಪುಟುಗಳು, ತರಬೇತುದಾರರು, ತಾಂತ್ರಿಕ ವರ್ಗದವರು ಹಾಗೂ ಅಧಿಕಾರಿಗಳ ವಸತಿಗೆ ನಗರದ ಕಾಲೇಜು, ವಸತಿನಿಲಯ ಹಾಗೂ ಖಾಸಗಿ ವಸತಿಗೃಹಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ನಗರದ ಹುಕ್ಕೇರಿಮಠ, ಸಿಂಧಗಿ ಶಾಂತವೀರ ಆಯುರ್ವೇದ ಕಾಲೇಜು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಸತಿ ನಿಲಯ, ಜಿಲ್ಲಾ ಕ್ರೀಡಾ ವಸತಿ ನಿಲಯ, ಜಿಲಾ ತರಬೇತಿ ಕೇಂದ್ರ, ದೇವಿಹೊಸೂರಿನ ಕೃಷಿ ವಸತಿ ನಿಲಯ, ಕೆರಿಮತ್ತಿಹಳ್ಳಿಯ ಕರ್ನಾಟಕ ಎಣ್ಣೆ ನಿಗಮದ ವಸತಿ ನಿಲಯ, ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಕ್ರೀಡಾಪಟುಗಳಿಗೆ, ಅಶೋಕ ಹೋಟೆಲ್, ಪರಿವೀಕ್ಷಣಾ ಮಂದಿರ, ಮೈತ್ರಿ ಹೋಟೆಲ್, ಶಿವಶಕ್ತಿ ಪ್ಯಾಲೇಸ್‌ಗಳಲ್ಲಿ ಅಧಿಕಾರಿಗಳಿಗಾಗಿ ವಸತಿ ವ್ಯವಸ್ಥೆ ಮಾಡಲಾಗಿದೆ. ವಸತಿ ಸ್ಥಳದಿಂದ ಕ್ರೀಡಾಂಗಣಕ್ಕೆ ಕರೆದೊಯ್ಯಲು 20 ಮಿನಿಬಸ್ ವ್ಯವಸ್ಥೆಯಿದೆ. ಜಿಲ್ಲಾ ಕ್ರೀಡಾಂಗಣದ ವಸತಿ ನಿಲಯದಲ್ಲಿ ಕ್ರೀಡಾಪಟುಗಳಿಗೆ ಹಾಗೂ ಅಧಿಕಾರಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿಶೇಷ ಭದ್ರತೆ
ಕ್ರೀಡಾಕೂಟದಲ್ಲಿ 16ರಿಂದ 25 ವಯೋವಾನದ ಬಾಲಕಿಯರು, ಯುವತಿಯರು ಭಾಗವಹಿಸುವುದರಿಂದ ಭದ್ರತೆಗಾಗಿ ವಿಶೇಷ ಕಾಳಜಿ ವಹಿಸಲಾಗಿದೆ. ವಸತಿ ಹಾಗೂ ಕ್ರೀಡಾಂಗಣದ ಸುತ್ತ ಪೊಲೀಸ್ ಬಂದೋಬಸ್ತ್‌ಗೆ ಸೂಚಿಸಲಾಗಿದೆ. ಇಬ್ಬರು ಪೊಲೀಸ್ ಉಪಾಧೀಕ್ಷಕರು, ಇಬ್ಬರು ಸಿಪಿಐ, ಐವರು ಪಿಎಸ್‌ಐ, ಆರು ಜನ ಸಹಾಯಕ ಎಎಸ್‌ಐ, 21 ಪೊಲೀಸರು, 13 ಮಹಿಳಾ ಪೊಲೀಸರು, ಜಿಲ್ಲಾ ಮೀಸಲು ಪಡೆಯ ಎರಡು ತುಕಡಿ ಕ್ರೀಡಾಕೂಟ ನಡೆಯುವ ನಾಲ್ಕು ದಿನವೂ ಭದ್ರತೆ ಒದಗಿಸಲಿವೆ. ನೋಡಲ್ ಅಧಿಕಾರಿಗಳು, ಮಹಿಳಾ ಅಧಿಕಾರಿಗಳೂ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ವಿವಿಧ ಸಮಿತಿಗಳು
ಕ್ರೀಡಾಕೂಟ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಲು ಅನುಕೂಲವಾಗುವಂತೆ ನಾಗರಿಕರ ಸಹಕಾರದಲ್ಲಿ ರಕ್ಷಣೆ ಹಾಗೂ ಭದ್ರತಾ ಸಮಿತಿ, ಮೆರವಣಿಗೆ ಸಮಿತಿ, ಸಂಘಟನಾ ಸಮಿತಿ, ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ, ಸಾಂಸ್ಕೃತಿಕ ಮತ್ತು ಮನರಂಜನೆ ಸಮಿತಿ, ಕ್ರೀಡಾಂಗಣ ಸಮಿತಿ, ಪ್ರಚಾರ ಸಮಿತಿಗಳನ್ನು ರಚಿಸಲಾಗಿದೆ.
ಪರಿಶೀಲನೆ ವೇಳೆ ಪೈಕಾ ತಾಂತ್ರಿಕ ಸಲಹೆಗಾರ ಎಂ.ಆರ್. ಮೋಹಿತೆ, ಪೈಕಾ ಕ್ರೀಡಾಕೂಟದ ಉಪನಿರ್ದೇಶಕ ಬೆಂಗಳೂರಿನ ಎಂ.ಸಿ. ರಮೇಶ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಸಹಾಯಕ ಆಯುಕ್ತ ಜುಬೇರ್, ತಹಸೀಲ್ದಾರ್ ಪಂಪನಗೌಡ ಮೇಲುಸೀಮೆ, ಎಎಸ್ಪಿ ಡಿ.ಎಸ್. ಜಗಮೈನವರ, ಪ್ರಚಾರ ಸಮಿತಿ ಸದಸ್ಯ ಎಂ.ಎಸ್. ಕೋರಿಶೆಟ್ಟರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.