ಬಿಜೆಪಿ ಗುಂಡು, ಕಾಂಗ್ರೆಸ್ ವಿಷ...!
ಕನ್ನಡಪ್ರಭ ವಾರ್ತೆ, ಹಾವೇರಿ, ನ. 27
ಗೊಬ್ಬರ ಕೇಳಿದ ರೈತರ ಮೇಲೆ ಆಗ ಬಿಜೆಪಿ ಸರ್ಕಾರ ಗೋಲಿಬಾರ್ ನಡೆಸಿ ಇಬ್ಬರು ರೈತರ ಸಾವಿಗೆ ಕಾರಣವಾದರೆ, ಈಗಿನ ಕಾಂಗ್ರೆಸ್ ಸರ್ಕಾರ ಕಬ್ಬಿಗೆ ನ್ಯಾಯಯುತ ದರ ಕೇಳಿದ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ. ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿರುವ ಪರಿಯೇ ಇದಕ್ಕೆಲ್ಲ ಕಾಣವಾಗಿದೆ.
ಬೆಳಗಾವಿ ಸುವರ್ಣಸೌಧದ ಎದುರು ಕಬ್ಬಿಗೆ ಯೋಗ್ಯ ದರ ನಿಗದಿ ಮಾಡುವಂತೆ ಎರಡು ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿದ್ದರೆ ಇಂದು ರೈತ ವಿಠ್ಠಲ ಅರಬಾವಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಆದರೆ ರೈತರು ಪ್ರತಿ ಟನ್ ಕಬ್ಬಿಗೆ ರು. 3000 ದರ ನಿಗದಿಪಡಿಸುವಂತೆ ನಡೆಸುತ್ತಿರುವ ಹೋರಾಟವನ್ನು ನಿರ್ಲಕ್ಷ್ಯ ಮಾಡಿದ್ದೇ ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು.
ಅಂದು ರೈತರ ಮೇಲೆ ಗುಂಡೇಟು: 2008, ಜೂ. 10ರಂದು ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಆಗಿನ ಬಿಜೆಪಿ ಸರ್ಕಾರ ಗೋಲಿಬಾರ್ ನಡೆಸಿತು. ಘಟನೆಯಲ್ಲಿ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಎಂಬ ಇಬ್ಬರು ರೈತರು ಮೃತಪಟ್ಟರು. ಮೃತಪಟ್ಟವರು ರೈತರೇ ಅಲ್ಲ ಎಂಬ ಹೇಳಿಕೆಗಳೂ ಆಮೇಲೆ ಬಿಜೆಪಿ ಸರ್ಕಾರದಿಂದ ಕೇಳಿಬಂದವು. ಆಗ ರಸಗೊಬ್ಬರ ವಿತರಣೆ ಸರಿಯಾಗಿ ಮಾಡಿದ್ದರೆ ಗೋಲಿಬಾರ್ನಂಥ ಘಟನೆಗೆ ಆಸ್ಪದವೇ ಇರುತ್ತಿರಲಿಲ್ಲ. ಸತ್ತವರು ರೈತರಲ್ಲ ಎಂದು ಬಿಜೆಪಿ ವಾದಿಸಿದರೂ ರೈತರನ್ನು ಕೊಂದ ಸರ್ಕಾರ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಸಾಧ್ಯವಾಗಲಿಲ್ಲ. ಬಿಜೆಪಿ ಸರ್ಕಾರದ 5 ವರ್ಷಗಳ ಕಾಲವೂ ವಿಪಕ್ಷವಾಗಿದ್ದ ಕಾಂಗ್ರೆಸ್ ಹಾವೇರಿ ಗೋಲಿಬಾರ್ ಘಟನೆಯನ್ನೇ ಪ್ರಸ್ತಾಪಿಸಿ, ತಾನು ಮಾತ್ರ ರೈತರ ಪರ ಎಂಬ ಪೋಸ್ ನೀಡಿತು. ಆದರೆ ವಿಪರ್ಯಾಸ ಎಂದರೆ ಈಗ ಅದೇ ಕಾಂಗ್ರೆಸ್ ಸರ್ಕಾರ ಕಬ್ಬು ಬೆಳೆದ ರೈತನ ಸಾವಿಗೆ ಕಾರಣವಾಗಿದೆ.
ಇಂದು ವಿಷ: ಪ್ರತಿ ಟನ್ ಕಬ್ಬಿಗೆ ಇಳುವರಿ ಆಧಾರದಲ್ಲಿ ರು. 3000 ನಿಗದಿಗೊಳಿಸಬೇಕು. ಸರ್ಕಾರ ನಿಗದಿಪಡಿಸಿದ ರು. 2500ನ್ನು ಸಕ್ಕರೆ ಕಾರ್ಖಾನೆಯವರು ಪಾವತಿಸದ ಕಾರಣ ಸರ್ಕಾರವೇ ಮಧ್ಯಸ್ಥಿಕೆ ವಹಿಸಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸುವರ್ಣಸೌಧದಲ್ಲಿ ಆರಂಭವಾಗಿರುವ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆಗೆ ರೈತರು ಧುಮುಕಿದ್ದರು. ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರು ಮೂರು ದಿನಗಳಿಂದ ಅನ್ನಾಹಾರವಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಗಮನ ನೀಡಲಿಲ್ಲ. ಇದರ ಪರಿಣಾಮವಾಗಿ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಬಿಜೆಪಿ ವಿರುದ್ಧ ರೈತರನ್ನು ಕೊಂದ ಸರ್ಕಾರ ಎಂದು ಹೇಳುತ್ತಲೇ ಅಧಿಕಾರ ಹಿಡಿದ ಕಾಂಗ್ರೆಸ್ ಕೂಡ ರೈತರ ಪರವಾಗಿಲ್ಲ ಎಂಬುದು ಐದೇ ತಿಂಗಳಲ್ಲಿ ಬಯಲಾಗಿದೆ.
ರೈತರ ಕೂಗಿಗೆ ಬೆಲೆಯಿಲ್ಲ: ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ, ಅಗತ್ಯ ಸೌಲಭ್ಯ ಸೇರಿದಂತೆ ರೈತರ ಸಮಸ್ಯೆಗಳಿಗೆ ಯಾವ ಸರ್ಕಾರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಇದರ ಪರಿಣಾಮವಾಗಿ ರೈತ ಆತ್ಮಹತ್ಯೆಯಂಥ ಕೃತ್ಯಕ್ಕೆ ಮುಂದಾಗಿದ್ದಾನೆ. ಬೆಳೆ ವಿಮೆ, ಸಾಲ ಮನ್ನಾ ಯಾವುದೂ ರೈತರಿಗೆ ಸಕಾಲಕ್ಕೆ ತಲುಪುತ್ತಿಲ್ಲ. ಕಬ್ಬು ಬೆಳೆದು ಕಟಾವಿಗೆ ಬಂದಿದ್ದರೂ ಸರ್ಕಾರ ದರ ನಿಗದಿಗೊಳಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿ ಅನಗತ್ಯವಾಗಿ ರೈತರನ್ನು ಪ್ರತಿಭಟನೆಗೆ ಧುಮುಕುವಂತೆ ಮಾಡಿತು. ಪ್ರತಿಭಟನಾ ನಿರತ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಯಾವ ಸರ್ಕಾರವೂ ರೈತಪರವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇನ್ನಾದರೂ ರೈತರ ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ರೈತ ಸತ್ತ ಮೇಲೆ ಕಣ್ಣೀರಿಟ್ಟು, ಪರಿಹಾರ ನೀಡಿದರೂ ಆತನನ್ನು ಕೊಂದ ಪಾಪ ಹೋಗಲಾರದು.
ಸಿಎಂ ದುರ್ವರ್ತನೆ ಕಾರಣ
ರೈತರ ಕೂಗಿಗೆ ಕಾಂಗ್ರೆಸ್ ಸರ್ಕಾರ ಬೆಲೆ ಕೊಡುತ್ತಿಲ್ಲ. ರೈತರ ಆತ್ಮಹತ್ಯೆಗೆ ಸಿಎಂ ಸಿದ್ದರಾಮಯ್ಯನವರ ದುರ್ವರ್ತನೆಯೇ ಕಾರಣ. ಪ್ರತಿಭಟನೆ ನಡೆಸುತ್ತಿದ್ದ ರೈತರ ಸಮಸ್ಯೆ ಆಲಿಸಲೂ ಅವರಿಗೆ ಸಮಯ ಇರಲಿಲ್ಲ. ಆದ್ದರಿಂದ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಹಾವೇರಿ ಘಟನೆಗೂ, ಇಂದಿನ ಘಟನೆಗೂ ತಾಳೆ ಮಾಡುವುದು ಸರಿಯಲ್ಲ.
-ನೆಹರು ಓಲೇಕಾರ, ಮಾಜಿ ಶಾಸಕ
- ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

