ಹಾವೇರಿ

ವಾರದ 6 ದಿನವೂ ಕ್ಷೀರಭಾಗ್ಯ: ಜಿ.ಎಸ್.ಪಾಟೀಲ

Published On :

ಮುಂಡರಗಿ:  ರಾಜ್ಯ ಸರ್ಕಾರ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆಯನ್ನು ಪ್ರಾರಂಭದಲ್ಲಿ ವಾರದಲ್ಲಿ 3 ದಿನ ಮಾತ್ರ ನೀಡಲಾಗುತ್ತಿತ್ತು. ಇದೀಗ ಈ ಯೋಜನೆಯನ್ನು ಭಾನುವಾರ ಹೊರತುಪಡಿಸಿ ವಾರದ 6 ದಿನಗಳ ವಿಸ್ತರಿಸಲಾಗಿದೆ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು. ಶನಿವಾರ ಮುಂಡರಗಿ ಪಟ್ಟಣದ 8ನೇ ತರಗತಿ ವಿದ್ಯಾರ್ಥಿಗಳಿಗೆ 2013-14ನೇ ಸಾಲಿನ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ದಶರಥಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಹೇಮಗಿರಶ ಹಾವಿನಾಳ, ಕಸ್ತೂರೆವ್ವ ಪಾಟೀಲ, ತಾಪಂ ಅಧ್ಯಕ್ಷೆ ತಾರೂಬಾಯಿ ಚೌಹಾಣ್, ಉಪಾಧ್ಯಕ್ಷೆ ಅಕ್ಕಮಹಾದೇವಿ ಹಾರೋಗೇರಿ, ಹೇಮಂತಗೌಡ ಪಾಟೀಲ,ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ, ವೀರೇಶ ಸಜ್ಜನರ ಮತ್ತಿತರರು ಇದ್ದರು.

ಶಾಸಕ ಸಂಭಾಜಿರಾಜ್ಯದಿಂದ ಹೊರಹಾಕಿ
ನರಗುಂದ: ರಾಜ್ಯದ ಕನ್ನಡಿಗರೆಲ್ಲ ಐಕ್ಯತಾ ಮನೋಭಾವದಿಂದ ಜೀವನ ಸಾಗಿಸುತ್ತಿದ್ದೇವೆ. ಆದರೆ, ಬೆಳಗಾವಿಯ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಕನ್ನಡ ವಿರೋಧಿ ಹೇಳಿಕೆ ನೀಡಿ ಕನ್ನಡಿಗರಿಗೆ ಅವಮಾನ ಮಾಡಿದ್ದು, ಇಂತಹ ಶಾಸಕನನ್ನು ಈ ಕೂಡಲೇ ರಾಜ್ಯದಿಂದ ಹೊರಹಾಕುವ ಮೂಲಕ ಸೂಕ್ತ ಶಿಕ್ಷೆ ವಿಧಿಸಬೇಕು. ಇಲ್ಲದೇ ಹೋದಲ್ಲಿ ಕರವೇ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ಹನುಮಂತ ಮಜ್ಜಿಗುಡ್ಡ ಹೇಳಿದರು. ಪಟ್ಟಣದ ವೀರ ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಪಟ್ಟಣದ ಶಿವಾಜಿ ವೃತ್ತದಲ್ಲಿ ರಸ್ತೆ ತಡೆ ಹಾಗೂ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಪ್ರತಿಕೃತಿ ದಹಿಸಿ ಮಾತನಾಡಿದರು.

ಶೈಕ್ಷಣಿಕ ಸಂಘಟನೆಗಳಿಂದ ಡಿಸಿಗೆ ಮನವಿ ಅರ್ಪಣೆ
ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಶೈಕ್ಷಣಿಕ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಕೊಟಗಿ ಮಾತನಾಡಿ, ಶೈಕ್ಷಣಿಕ ರಂಗದ ಜ್ವಲಂತ ಸಮಸ್ಯೆಗಳನ್ನು ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಲಕಾಲಕ್ಕೆ ಅಲಕ್ಷಿಸುತ್ತಾ ಬಂದಿರುವುದರಿಂದ ಇಂದಿನ ಈ ಹೋರಾಟಕ್ಕೆ ಈಗಲಾದರೂ ಸರ್ಕಾರ ಕಣ್ತೆರೆದು ಬೇಡಿಕೆ ಈಡೇರಿಸಬೇಕೆಂದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಕಾಂಗ್ರೆಸ್ ಆಡಳಿತದ ವೈಫಲ್ಯದ ಜಾಗೃತಿ ಮೂಡಿಸಿ
ಗದಗ: ಕಾಂಗ್ರೆಸ್ ಆಡಳಿತದ ವೈಫಲ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಮಾಜಿ ಶಾಸಕಿ ಸೀಮಾ ಮಸೂತಿ ಹೇಳಿದರು. ಶನಿವಾರ ನಗರದ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು. ಹಲವಾರು ಗೊಂದಲದ ಯೋಜನೆಗಳ ಸೃಷ್ಟಿ ಹಾಗೂ ಜನವಿರೋಧಿ ಕಾರ್ಯಕ್ರಮಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಸರ್ಕಾರಗಳ ದುರಾಡಳಿತದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಮಹಿಳೆಯರು ಕಂಕಣಬದ್ಧರಾಗಬೇಕಿದೆ. ಮಹಿಳಾ ಕಾರ್ಯಕರ್ತೆಯರಿಗೆ ಬಿಜೆಪಿ ಹೆಚ್ಚಿನ ಪ್ರಾಮುಖ್ಯತೆ ನೀಡಿ ಸಮಾನ ಹಕ್ಕು ಒದಗಿಸಲು ಶ್ರಮಿಸುತ್ತಿದೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ ಮಾತನಾಡಿದರು. ಜಯಶ್ರೀ ಉಗಲಾಟದ, ಗೀತಾ ಧನಂಜಯ, ವಂದನಾ ವರ್ಣೇಕರ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ ಮತ್ತಿತರರಿದ್ದರು.

ಶಾಲೆ ದೇವಾಲಯವಿದ್ದಂತೆ: ಶಾಸಕ ದೊಡ್ಡಮನಿ
ಲಕ್ಷ್ಮೇಶ್ವರ: ಶಿಕ್ಷಣಕ್ಕೆ ಇಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವವಿದ್ದು ಶಿಕ್ಷಣವಿಲ್ಲದವನಿಗೆ ಗೌರವ ಇಲ್ಲವಾಗಿದೆ. ಅದಕ್ಕಾಗಿ ನಿಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯಪಟ್ಟರು. ಅವರು ಸಮೀಪದ ಗೊಜನೂರ ಪ್ರೌಢಶಾಲೆಯಲ್ಲಿ ಶನಿವಾರ ಅಕ್ಷರ ದಾಸೋಹ ಯೋಜನೆ ಅಡಿ ನೂತನವಾಗಿ ನಿರ್ಮಿಸಿರುವ ಅಡುಗೆ ಮನೆ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಅಕ್ಷರ ದಾಸೋಹದ ಅಧಿಕಾರಿ ಮಂಗಳಾ ತಾಪಸ್ಕರ್, ಬಿಇಓ ಆರ್.ಎಸ್. ಬುರುಡಿ ಹಾಗೂ ಲಕ್ಷ್ಮೇಶ್ವರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಪಿ. ಪಾಟೀಲ ಮಾತನಾಡಿದರು. ಹರಳಕ್ಕ ಕರೆಣ್ಣವರ ಮತ್ತಿತರರು ಇದ್ದರು.

ಗ್ರಾಮೀಣರಿಗೆ ರಾಜೀವ್‌ಗಾಂಧಿ ಚೈತನ್ಯ ಯೋಜನೆ
ಹಾವೇರಿ: ಗ್ರಾಮೀಣ ಯುವಜನತೆ ಕೃಷಿಯಿಂದ ದೂರ ಸರಿಯುತ್ತಿದ್ದು, ಕೃಷಿ ಅವಲಂಬಿತ ಕುಟುಂಬದ ಅಗತ್ಯ ಪೂರೈಸಲು ಸಾಕಷ್ಟು ಜಮೀನೂ ದೊರೆಯುತ್ತಿಲ್ಲ. ನಿರುದ್ಯೋಗಿ ಯುವಕರು ಕೃಷಿ ಆಧಾರಿತ ಉತ್ಪಾದನಾ ಹಾಗೂ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ರಾಜೀವ ಗಾಂಧಿ ಚೈತನ್ಯ ಯೋಜನೆಯಡಿ ಪರ್ಯಾಯ ಆದಾಯ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಕನಿಷ್ಠ 8ನೇ ತರಗತಿ ಪಾಸಾದ, 18ರಿಂದ 35 ವಯೋವುತಿಯ ಅಭ್ಯರ್ಥಿಗಳು ಅರ್ಹರಾಗಿದ್ದು, ಸರ್ಕಾರದ ಮೀಸಲಾತಿ ಪ್ರಕಾರ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ಉತ್ತಮ ಚಾರಿತ್ರ್ಯ ಹೊಂದಿರಬೇಕು. ಸ್ವ -ಉದ್ಯೋಗ ಕೈಗೊಳ್ಳಲು ಆಸಕ್ತಿಯಿರಬೇಕು. ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಗಳಲ್ಲಿ ಅಂತಿಮಗೊಳಿಸಲಾಗುವುದು. ಮಾಹಿತಿಗೆ ಗ್ರಾಪಂ ಅಥವಾ ಜಿಪಂ ಕಚೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಕ್ಷೌರಿಕರಿಗೆ ಪ್ರತ್ಯೇಕ ಅಂಗಡಿ, ಸೂರು ಒದಗಿಸಿ
ಗದಗ: ಬಡ ಕ್ಷೌರಿಕರಿಗೆ ಸಲಕರಣೆಗಳ ಜೊತೆಗೆ ಕ್ಯಾಬಿನ್ ಮಾದರಿ ಅಂಗಡಿ ಹಾಗೂ ಕ್ಷೌರಿಕ ವೃತ್ತಿಯಿಂದ ಬದುಕುತ್ತಿರುವ 200 ಕುಟುಂಬಗಳಿಗೆ ಪ್ರತ್ಯೇಕ ವಸತಿ ನಿರ್ಮಿಸಿಕೊಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ ಹೇಳಿದರು. ಇತ್ತೀಚಿಗೆ ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಂಡ 'ದುಡಿಯಲು ಅಂಗಡಿ; ಬದುಕಲು ಮನೆ ಕೊಡಿ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲಾ ಕಾರ್ಯಾಧ್ಯಕ್ಷ ಶಂಕರ ಮಾನೆ,  ಬಾಪು ಆರಟ್ಟಿ,  ಮಂಜುನಾಥ ಹಾದಿಮನಿ, ಬಸಯ್ಯ ನಂದಿಕೋಲಮಠ,  ಪರಶುರಾಮ ಕೋಟೇಕಲ್ ಮಾತನಾಡಿದರು.

ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ
ನರೇಗಲ್ಲ: ಪ್ರತಿಯೊಬ್ಬ ಮಗುವಿನಲ್ಲಿ ಹುದುಗಿರುವ ಕಲೆಯನ್ನು ಹೊರ ಸೂಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿವೆ ಎಂದು ಜಿಪಂ ಸದಸ್ಯ ಆರ್.ಬಿ. ಬಸವರಡ್ಡೇರ ಹೇಳಿದರು. ಅವರು ಈಚೆಗೆ ಸಮೀಪದ ಅಬ್ಬಿಗೇರಿ ಬಾಲಕರ ಮಾದರಿ ಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದ 2013-14ನೇ ಸಾಲಿನ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸಿ.ಕೆ. ಕೇಸರಿ, ಎಸ್.ಎಸ್. ಗುಜಮಾಗಡಿ ಮಾತನಾಡಿದರು. ಸಿ.ಎಚ್. ತಲ್ಲೂರ, ಐ.ಕೆ. ವಸ್ತ್ರದ, ರಫೀಕ್ ಗುಡಿಹಿಂದ್ಲದ, ಬಿ.ಆರ್. ರಂಗಣ್ಣವರ, ಎಸ್.ಎ. ಪಲ್ಲೇದ. ಶಿಕ್ಷಕಿ ಎ.ಪಿ. ಶೆಟ್ಟರ್ ಮುಂತಾದವರು ಭಾಗವಹಿಸಿದ್ದರು.  ಬಿ.ಆರ್. ಕೆರಿ ಸ್ವಾಗತಿಸಿದರು. ಆರ್.ವಿ. ಬೆಲ್ಲದ ನಿರೂಪಿಸಿದರು.

ಸಚಿವರ ಭರವಸೆ: ರೈತರ ಹೆದ್ದಾರಿ ತಡೆ ಮುಂದಕ್ಕೆ
ಬ್ಯಾಡಗಿ:  ಕಳಪೆ ಹತ್ತಿ ಬೀಜಕ್ಕೆ ಪರಿಹಾರ, ಮೆಕ್ಕೆಜೋಳ ಮತ್ತು ಹತ್ತಿಗೆ ಬೆಂಬಲ ಬೆಲೆಗಾಗಿ ರಾಜ್ಯ ರೈತ ಸಂಘ ತಾಲೂಕು ಘಟಕ ಡಿ. 2ರಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ ತಡಯನ್ನು ಮುಂದೂಡಿರುವುದಾಗಿ ರೈತ ಮುಖಂಡ ಗಂಗಣ್ಣ ಎಲಿ ತಿಳಿಸಿದ್ದಾರೆ. ಮಹಿಕೋ ಕಂಪನಿಯ ಕನಕ 7351, ಕಾವೇರಿಯ ಜಾಕ್‌ಪಾಟ್, ನಿಕ್ಕಿ, ನಿಕ್ಕಿ ಪ್ಲಸ್ ಹತ್ತಿಬೀಜ ಕಳಪೆಯಾಗಿದ್ದು, ಮೆಕ್ಕೆಜೋಳಕ್ಕೆ ರು. 2 ಸಾವಿರ, ಹತ್ತಿಗೆ ರು. 8 ಸಾವಿರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಡಿ. 2ರಂದು ಮೋಟೆಬೆನ್ನೂರಿಲ್ಲಿ ಹೆದ್ದಾರಿ ತಡೆ ನಡೆಸಲು ನಿರ್ಧರಿಸ್ಳಲಾಗಿತ್ತು. ಆದರೆ ಜಿಲ್ಲೆಯ ಶಾಸಕರಾದ ಕೆ.ಬಿ. ಕೋಳಿವಾಡ, ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮನೋಹರ ತಹಶೀಲ್ದಾರ, ಯು.ಬಿ. ಬಣಕಾರ ರೈತ ಮುಖಂಡರೊಂದಿಗೆ ಕೃಷಿ ಸಚಿವ ಭೈರೇಗೌಡರನ್ನು ಭೇಟಿಯಾದಾಗ ಶೀಘ್ರದಲ್ಲೇ ಪರಿಹಾರ ದೊರಕಿಸುವ ಭರವಸೆ ನೀಡಿದ್ದು, ಪ್ರತಿಭಟನೆ ಮುಂದೂಡಿದ್ದಾಗಿ ತಿಳಿಸಿದ್ದಾರೆ.

ಮತ್ತೊಮ್ಮೆ ಸರ್ವೇ ಬೆಳೆ ಮಾಡಿ ವರದಿ ನೀಡಿ
ಮುಂಡರಗಿ: ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಎರಡೂ ತಾಲೂಕುಗಳಲ್ಲಿ ಮತ್ತೊಮ್ಮೆ ಸರ್ವೇ ಮಾಡಿ ಮಾಹಿತಿ ನೀಡಬೇಕು. ಅಂದಾಗ ಈ ಎರಡೂ ತಾಲೂಕುಗಳನ್ನು ಬರಗಾಲ ತಾಲೂಕು ಎಂದು ಘೋಷಿಸಲು ಅನುಕೂಲವಾಗುತ್ತದೆ ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಶನಿವಾರ ಮುಂಡರಗಿ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ಕಳುಹಿಸಿದ ವರದಿ ಮೇಲೆ ಸರ್ಕಾರ ಬರಗಾಲ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ. ಆದ್ದರಿಂದ ತಹಸೀಲ್ದಾರ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಳೆ-ಬೆಳೆ ಮತ್ತು ರೈತರ ಪರಿಸ್ಥಿತಿ ಕುರಿತು ವಿಸ್ತೃತ ವರದಿಯನ್ನು ಕಳುಹಿಸಲು ಸೂಚಿಸಿದರು. ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿ ಕೆ.ಬಿ. ಗಂಜಹಾಳ ಅವರನ್ನು ತರಾಟೆಗೆ ತೆಗೆದುಕೊಂಡರು.

ಅನ್ಯಾಯ ಎದುರಿಸಿ: ಮಣ್ಣಣ್ಣವರ
ಶಿಗ್ಗಾಂವಿ: ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವ ಜತೆಗೆ ಅನ್ಯಾಯ ಎದುರಿಸುವ, ಅನ್ಯಾಯ ಎದುರಿಸುವ, ತಪ್ಪುಗಳನ್ನು ಪ್ರಶ್ನಿಸುವ ಸಾಮರ್ಥ್ಯ ಬೆಳೆಸಿದಾಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಹರ ಸಂಸ್ಥೆ ಅಧ್ಯಕ್ಷ ಮಂಜುನಾಥ ಮಣ್ಣಣ್ಣವರ ಹೇಳಿದರು. ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನೆಹರು ಯುವಕ ಕೇಂದ್ರ ಹಾಗೂ ಶ್ರೀ ಹರ ಗ್ರಾಮೀಣಾಭಿವೃದ್ಧಿ ವಿವಿಧೋದ್ದೇಶಗಳ ಸಂಸ್ಥೆ ಆಶ್ರಯದಲ್ಲಿ ಜರುಗಿದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ, ರಾಜಕೀಯ ಸಭೆಗಳಿಗೆ ಸೀಮಿತವಾಗಿರುವ ಜನಪ್ರತಿನಿಧಿಗಳು, ಯುವಶಕ್ತಿಗೆ ಉತ್ತೇಜನ ನೀಡುವತ್ತ ಅಸಡ್ಡೆ ತೋರುತ್ತಿದ್ದಾರೆ ಎಂದರು. ಮುಖ್ಯೋಪಾಧ್ಯಾಯ ಲಿಂಗೇಶ ಕೆ.ಎಚ್., ಗುತ್ತಿಗೆದಾರ ಸಂಘದ ಕಾರ್ಯದರ್ಶಿ ಎನ್.ಎಸ್. ಹಿರೇಮಠ, ಮರಿದ್ಯಾಮಣ್ಣವರ, ಸಾಕ್ಷರ ಸಂಯೋಜಕ ಎಸ್.ಕೆ. ಹೂಗಾರ, ಆದಿಶಕ್ತಿ ಸ್ತ್ರೀ ಸಂಘದ ಜಯಶ್ರೀ ಚಿಕ್ಕಮಠ, ಭಾರತಿ ಅಸುಂಡಿ, ಮಂಜುಳಾ ಭೀಮಕ್ಕನವರ, ಕಂಟೆಪ್ಪ ಚೆನ್ನದಾಸರ, ಶೇಖರಗೌಡ ಪಾಟೀಲ ಹಾಜರಿದ್ದರು.

ಎಲ್ಲ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್
ಶಿಗ್ಗಾಂವಿ:  ತಿಮ್ಮಾಪುರ ಶಾಲೆಯಲ್ಲಿ ದನಗಳು ಕುಡಿಯುವ ನೀರನ್ನು ವಿದ್ಯಾರ್ಥಿಗಳೂ ಸೇವಿಸುವ ಕುರಿತು 'ಕನ್ನಡಪ್ರಭ' ಪ್ರಕಟಿಸಿದ ವಿಶೇಷ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ನೀರಿನ ಫಿಲ್ಟರ್ ಒದಗಿಸುವ ನಿರ್ಣಯವನ್ನು ಶಿಗ್ಗಾಂವಿ ತಾಪಂ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಭೆಯಲ್ಲಿ  ಕುಡಿಯುವ ನೀರಿನ ಸಮಸ್ಯೆ ಕುರಿತು ಕನ್ನಡಪ್ರಭ ವರದಿ ಉಲ್ಲೇಖಿಸಿದ ಸದಸ್ಯ ತಿಪ್ಪಣ್ಣ ಸಾತಣ್ಣವರ, ಮುಖ್ಯೋಪಾಧ್ಯಾಯರ ಮೇಲೆ ಕ್ರಮ ಜರುಗಿಸಿದ್ದೀರಾ ಎಂದು ಪ್ರಶ್ನಿಸಿದರು. ಅಧ್ಯಕ್ಷೆ ಸುಜಾತಾ ಕಲಕಟ್ಟಿ, ಶಾಲೆಗಳಲ್ಲಿ ಊಟದ ಬಳಿಕ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ವಾಟರ್ ಫಿಲ್ಟರ್ ಪೂರೈಸಲು ನಿರ್ಣಯ ಕೈಗೊಂಡು, ಜಿಪಂ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದರು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಫಿಲ್ಟರ್ ಪೂರೈಸಲು ಪ್ರಸ್ತಾವನೆ ಸಲ್ಲಿಸುವುದಕ್ಕೆ ಸಭೆ ಸಮ್ಮತಿಸಿತು. ಶಾಲಾ ಶೌಚಾಲಯ ಹಾಗೂ ಪರಿಸರದ ಸ್ವಚ್ಛತೆ ಬಗ್ಗೆಯೂ ಗಮನ ಹರಿಸುವಂತೆ ಸೂಚಿಸಲಾಯಿತು.

ಸಾಮಾಜಿಕ ಸಮಾನತೆ ಏಕೀಕರಣದ ಉದ್ದೇಶ
ನರೇಗಲ್ಲ: ಕರ್ನಾಟಕ ಏಕೀಕರಣದ ಹೋರಾಟ ಕೇವಲ ರಾಜ್ಯ ರಚನೆಗೆ ಸೀಮಿತವಾಗಿರದೆ ಆಚಾರ ವಿಚಾರಗಳ ವೈವಿಧ್ಯತೆ ನಡುವೆ ಜನರಲ್ಲಿ ಆರ್ಥಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾನತೆಯನ್ನು ಸೃಷ್ಟಿಸುವುದಾಗಿತ್ತು ಎಂದು ಸಾಹಿತಿ ಎಂ.ಎಸ್. ಮಕಾನದಾರ ಹೇಳಿದರು. ಸ್ಥಳೀಯ ಓಂ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ರಾತ್ರಿ ಜಿಲ್ಲಾ ಹಾಗೂ ತಾಲೂಕು ಕಸಾಪ ಅಡಿಯಲ್ಲಿ ಕನ್ನಡ ರಾಜ್ಯೋತ್ಸವದ ನುಡಿಹಬ್ಬದ ನಿಮಿತ್ತ ಆಯೋಜಿಸಿದ್ದ ಕರ್ನಾಟಕ ಏಕೀಕರಣದಲ್ಲಿ ಗದಗ ಜಿಲ್ಲೆಯ ಪಾತ್ರದ ಕುರಿತು ಉಪನ್ಯಾಸ ನೀಡಿದರು. ಎಂಇಎಸ್‌ನ ಸಂಭಾಜಿ ಪಾಟೀಲರಂತಹ ವ್ಯಕ್ತಿಗಳ ದ್ವೇಷದ ಹೇಳಿಕೆಗಳನ್ನು ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದರು.

ಶಿಗ್ಗಾಂವಿ: ಮಹಾ ಸಾಲಮೇಳ ಉದ್ಘಾಟನೆ
ಶಿಗ್ಗಾಂವಿ: ಮಹಿಳೆಯರು ಸ್ವಸಹಾಯ ಸಂಘಗಳಿಂದ ಸಾಲ ಪಡೆದು, ಗುಡಿ ಕೈಗಾರಿಕೆಗಳಂಥ ಉತ್ಪಾದನಾ ಕೆಲಸಗಳಿಗೆ ಬಳಸಿ ಆರ್ಥಿಕ ಉನ್ನತಿ ಸಾಧಿಸಬೇಕು ಎಂದು ಶಿವಮೊಗ್ಗ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಅಭಿಯಂತ ರಾಧಾಕೃಷ್ಣ ಶೆಟ್ಟಿ ಹೇಳಿದರು. ತಾಲೂಕಿನ ಹುಲಗೂರ ಗ್ರಾಮದ ವಿಜಯಾ ಬ್ಯಾಂಕ್ ಶಾಖೆ ಆಯೋಜಿಸಿದ ಸ್ವ-ಸಹಾಯ ಸಂಘಗಳ ಮಹಾ ಸಾಲಮೇಳ ಉದ್ಘಾಟಿಸಿದ ಅವರು, ಉದ್ಯೋಗಕ್ಕಾಗಿ ಸಾಲ ಪಡೆಯಿರಿ. ಮನೆ ಬೆಳಗಿಸಿಕೊಳ್ಳಿ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ಸಾಲ ಮರುಪಾವತಿಯನ್ನೂ ಕ್ರಮಬದ್ಧವಾಗಿ ಮಾಡಿ ಎಂದು ಸಲಹೆ ನೀಡಿದರು. ಬ್ಯಾಂಕ್ ವ್ಯವಸ್ಥಾಪಕ ರಘು ಕುಮಾರ ಅಧ್ಯಕ್ಷತೆ ವಹಿಸಿದ್ದರು. ಸ್ವಸಹಾಯ ಸಂಘದ ಮಹಿಳೆಯರಿಗೆ ಸಾಲ ಪತ್ರಗಳನ್ನು ವಿತರಿಸಲಾಯಿತು. ವಿಜಯಾ ಬ್ಯಾಂಕ್ ಕೃಷಿ ಅಧಿಕಾರಿ ಮಹೇಶ ವಿ. ಸ್ವಾಗತಿಸಿ, ನಿರೂಪಿಸಿದರು. ತಡಸ ಶಾಖೆಯ ವ್ಯವಸ್ಥಾಪಕ ಪವನಕುಮಾರ ವಂದಿಸಿದರು.

'ಅಕ್ಕ' ಕನ್ನಡ ಧಾರಾವಾಹಿಗೆ ಈಗ ಕೋರ್ಟಿನ ಕಡಿವಾಣ
ಇದೇ ಸೋಮವಾರ ಡಿಸೆಂಬರ್ ಎರಡರಿಂದ ರಾತ್ರಿ ಎಂಟೂವರೆಗೆ ಈಟೀವಿಯಲ್ಲಿ ಪ್ರಸಾರವಾಗಬೇಕಿದ್ದ ಅಕ್ಕ  ಕನ್ನಡ ಧಾರಾವಾಹಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಖ್ಯಾತ ಲೇಖಕಿ ಹಾಗೂ ಕಿರುತೆರೆ ನಿರ್ಮಾಪಕಿ-ನಿರ್ದೇಶಕಿ ರೇಖಾರಾಣಿ ಅವರ ಕಣ್ಮಣಿ ಎಂಬ ಕತೆಯನ್ನು ಕದ್ದು ಅಕ್ಕ ಧಾರಾವಾಹಿ ನಿರ್ಮಿಸಲಾಗಿದೆ ಎಂದು ನೀಡಲಾಗಿದ್ದ ದೂರನ್ನು ಪರಿಶೀಲಿಸಿದ ಸಿವಿಲ್‌ಕೋರ್ಟ್ ನಂ.10ರ ನ್ಯಾಯಾಧೀಶರು ಶುಕ್ರವಾರ ಅಕ್ಕ ಧಾರಾವಾಹಿಗೆ      ತಡೆಯಾಜ್ಞೆ ನೀಡಿದ್ದಾರೆ. ಮುಂದಿನ ವಿಚಾರಣೆ ನಡೆದು ವಿವಾದ ಇತ್ಯರ್ಥ ಆಗುವವರೆಗೆ ಧಾರಾವಾಹಿಯು ಪ್ರಸಾರವಾಗುವಂತಿಲ್ಲ ಎಂದು ಕೋರ್ಟು ಆದೇಶ ನೀಡಿದೆ. ಇದು ತಮ್ಮದೇ ಕತೆಯ ಕೃತಿಚೌರ್ಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿಕೆ ನೀಡಿರುವ  ರೇಖಾ ರಾಣಿ ಇದಕ್ಕೆ ನೇರ ಕಾರಣ ಪ್ರಸ್ತುತ ಚಾನಲ್‌ನ ಧಾರಾವಾಹಿ ವಿಭಾಗದ ಮುಖ್ಯಸ್ಥರು ಎಂದು ಆರೋಪ ಹೊರಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿ 'ನಿನ್ನಿಂದಲೇ' ಚಿತ್ರದ ಶೂಟಿಂಗ್ ಬ್ಯಾನ್
ಪುನೀತ್ ರಾಜ್‌ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಶೂಟಿಂಗಿಗೆ ವಿಘ್ನ. ಆದರೆ ಹಾಗಂತ ಅದು ಶಾಶ್ವತ ವಿಘ್ನ ಅಲ್ಲ ಬಿಡಿ. ಅದೇನಿದ್ದರೂ ಕೇವಲ 'ಎಮರ್ಜೆನ್ಸಿ' ವಿಘ್ನ. ಬ್ಯಾಂಕಾಕ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ನಿನ್ನಿಂದಲೇ ಚಿತ್ರತಂಡ ಯೋಜನೆ ಮಾಡಿತ್ತು. ಅದರಂತೆ ಶೂಟಿಂಗ್ ಕೂಡ ಎರಡು ದಿನದ ಹಿಂದೆ ಶುರುವಾಗಿತ್ತು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಬ್ಯಾಂಕಾಕ್ ನಗರದಲ್ಲಿ ರಾಜಕೀಯ ಕಾರಣಗಳಿಗಾಗಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಚಿತ್ರೀಕರಣಕ್ಕೆ ಯಾವ ತೊಂದರೆ ಇಲ್ಲದಿದ್ದರೂ ಸಾರ್ವಜನಿಕ ಸಭೆಗಳು, ಮೆರವಣಿಗೆಗಳ ಕಾರಣ ಚಿತ್ರೀಕರಣ ನಡೆಸುವುದು ಸುಲಭವಾಗಿರಲಿಲ್ಲ. ಈ ಕಾರಣಕ್ಕಾಗಿ ನಿನ್ನಿಂದಲೇ ಚಿತ್ರತಂಡ ಎರಡು ದಿನಗಳ ಕಾಲ ಶೂಟಿಂಗ್ ನಿಲ್ಲಿಸಬೇಕಾಗಿತ್ತು. ಅದರಂತೆ ಎರಡು ದಿನಗಳ ಬ್ರೇಕ್‌ನ ನಂತರ ಈಗ ಮತ್ತೆ ನಿನ್ನಿಂದಲೇ ಶುರುವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.