ರೋಚಕ ಕ್ಷಣಗಳಿಗೆ ಸಾಕ್ಷಿ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 30
ನಾಲ್ಕು ದಿನಗಳಿಂದ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪೈಕಾ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಉಪಾಂತ್ಯ ಪಂದ್ಯಗಳಲ್ಲಿ ಆತಿಥೇಯ ಕರ್ನಾಟಕ ತಂಡ ಪ್ರಾಬಲ್ಯ ಮೆರೆದು ಕಬಡ್ಡಿ ಹಾಗೂ ಖೋಖೋದಲ್ಲಿ ಫೈನಲ್ ಪ್ರವೇಶಿಸಿದ್ದರೂ ಪ್ರಶಸ್ತಿ ಹಂತದಲ್ಲಿ ಎಡವಿತು. ಕ್ರೀಡಾಕೂಟ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಶನಿವಾರ ಬೆಳಗ್ಗೆ ಕರ್ನಾಟಕ ಹಾಗೂ ದೆಹಲಿ ತಂಡಗಳ ನಡುವೆ ನಡೆದ ಸೆಮಿಫೈನಲ್ ಖೋಖೋ ಪಂದ್ಯ ತೀವ್ರ ರೋಚಕತೆಯಿಂದ ಕೂಡಿತ್ತು. ಪಂದ್ಯದ ಮೊದಲ ಎರಡು ಸುತ್ತಿನಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದವು. ಅಂತಿಮ ಸುತ್ತಿನಲ್ಲಿ ಕರ್ನಾಟಕ ಆಟಗಾರರು ಉತ್ಸಾಹದಿಂದ ಮುನ್ನುಗ್ಗಿ ದೆಹಲಿಯ ಆಟಗಾರರನ್ನು ಬೇಗ ಔಟ್ ಮಾಡುವಲ್ಲಿ ಯಶಸ್ವಿಯಾದರು. ಪಂದ್ಯ ಇನ್ನೂ ಮೂರು ನಿಮಿಷ ಇರುವಾಗಲೇ ಮುಗಿದು, ಆತಿಥೇಯ ತಂಡ 1 ಅಂಕದಿಂದ ಗೆಲವು ಸಾಧಿಸಿ, ಫೈನಲ್ ಪ್ರವೇಶಿಸಿತು.
ಮತ್ತೊಂದು ಉಪಾಂತ್ಯ ಪಂದ್ಯದಲ್ಲಿ ಪಶ್ಚಿಮ ಬಂಗಾಳ ವಿರುದ್ಧ ಮಹಾರಾಷ್ಟ್ರ ಎಂಟು ಅಂಕಗಳ ಗೆಲವು ಸಾಧಿಸಿ, ಫೈನಲ್ಗೇರಿತ್ತು.
ಕಬಡ್ಡಿ: ಉಪಾಂತ್ಯದ ಕಬಡ್ಡಿ ಪಂದ್ಯಗಳೂ ತೀವ್ರ ಕುತೂಹಲ ಕೆರಳಿಸಿದ್ದವು. ಹರಿಯಾಣ ವಿರುದ್ಧದ ಸೆಣಸಿನಲ್ಲಿ ಕರ್ನಾಟಕ 33-16 ಅಂಕಗಳ ಮುನ್ನಡೆ ಸಾಧಿಸಿ, ಫೈನಲ್ ಪ್ರವೇಶಿಸಿತು. ಮತ್ತೊಂದು ಪಂದ್ಯದಲ್ಲಿ ಪಂಜಾಬ್ ತಂಡ ಹಿಮಾಚಲಪ್ರದೇಶವನ್ನು 42-19 ಅಂಕಗಲಿಂದ ಸೋಲಿಸಿ, ಫೈನಲ್ಗೆ ಅರ್ಹತೆ ಪಡೆಯಿತು. ಉಪಾಂತ್ಯದಲ್ಲಿ ಸೋತ ಹಿಮಾಚಲಪ್ರದೇಶ ಹಾಗೂ ಹರಿಯಾಣ ತಂಡಗಳು ಕ್ರಮವಾರಿ ಮೂರು ಹಾಗೂ ನಾಲ್ಕನೇ ಸ್ಥಾನ ಗಳಿಸಿದವು.
ವಾಲಿಬಾಲ್: ವಾಲಿಬಾಲ್ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಉತ್ತರ ಪ್ರದೇಶವನ್ನು 25-16, 25-26, 25-10 ಅಂಕಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟಿತು. ಮತ್ತೊಂದು ಪಂದ್ಯದಲ್ಲಿ ಹಿಮಾಚಲ ಪ್ರದೇಶ ಗುಜರಾತನ್ನು ಐದು ಸೆಟ್ಗಳ ತೀವ್ರ ಸೆಣಸಾಟದ ಬಳಿಕ 25-22, 17-25, 25-17, 22-25, 15-8 ಅಂತರದಿಂದ ಹಿಮ್ಮೆಟ್ಟಿಸಿತು. ಈ ಪಂದ್ಯ ಕ್ರೀಡಾಸಕ್ತರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು.
ಕ್ರೀಡಾಸ್ಫೂರ್ತಿ: ಎಲ್ಲ ಹಂತದ ಪಂದ್ಯಗಳಲ್ಲೂ ಕ್ರೀಡಾಸಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರೋತ್ಸಾಹ ನೀಡುತ್ತಿದ್ದರು. ಎಲ್ಲ ರಾಜ್ಯಗಳ ತಂಡಗಳನ್ನೂ ಬೆಂಬಲಿಸಿ, ಕ್ರೀಡಾಸ್ಫೂರ್ತಿ ಮೆರೆದರು. ಕಬಡ್ಡಿ, ವಾಲಿಬಾಲ್, ಖೋಖೋ ಆಟ ನೋಡಲು ಕಿಕ್ಕಿರಿದು ಜನ ಸೇರುತ್ತಿದ್ದುದು ಸಂಘಟಕರೂ ಖುಷಿ ತಂದಿತು. ನಾಲ್ಕು ದಿನವೂ ಕ್ರೀಡಾಂಗಣ ತುಂಬ ಜನ ಸೇರಿದ್ದು ವಿಶೇಷವಾಗಿತ್ತು.
ಪ್ರತಿಭಟಿಸಿ ಅತ್ತ ದೆಹಲಿ ಆಟಗಾರರು!
ಕರ್ನಾಟಕ ಹಾಗೂ ದೆಹಲಿ ನಡುವೆ ನಡೆದ ಖೋಖೋ ಉಪಾಂತ್ಯ ಪಂದ್ಯದಲ್ಲಿ ನಿರ್ಣಾಯಕರು ನೀಡಿದ ತೀರ್ಪಿಗೆ ದೆಹಲಿ ತಂಡದ ಆಟಗಾರರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಸೆಮಿಫೈನಲ್ ಪಂದ್ಯವಾದ್ದರಿಂದ ಸೆಣಸಾಟ ತೀವ್ರವಾಗಿತ್ತು. ಆರಂಭದ ಸುತ್ತಿನಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಆಮೇಲೆ ದೆಹಲಿ ಆಟಗಾರರು ಆತಿಥೇಯ ಕರ್ನಾಟಕದ ನಾಲ್ವರು ಆಟಗಾರರನ್ನು ಔಟ್ ಮಾಡಿದರು. ಹೀಗಾಗಿ, ಕೊನೆಯ ಸುತ್ತು ಕುತೂಹಲ ಕೆರಳಿಸಿತ್ತು. ಈ ಹಂತದಲ್ಲಿ ರಾಜ್ಯದ ಆಟಗಾರರು ದೆಹಲಿಯ 5 ಆಟಗಾರನನ್ನು ಔಟ್ ಮಾಡಿ, ಮುನ್ನಡೆ ಸಾಧಿಸಿದ್ದರು. ಈ ವೇಳೆ ನಿರ್ಣಾಯಕರ ತೀರ್ಪಿನಿಂದ ದೆಹಲಿ ಆಟಗಾರರು ಕೆರಳಿದರು. ಔಟ್ ಆಗದಿದ್ದರೂ ಔಟ್ ಎಂದು ಹೊರಕ್ಕೆ ಕಳಿಸಿದ್ದರಿಂದ ಅಸಮಾಧಾನಗೊಂಡ ದೆಹಲಿ ಆಟಗಾರ್ತಿಯೊಬ್ಬಳು ಕರ್ನಾಟದ ಆಟಗಾರ್ತಿಗೆ ಡಿಕ್ಕಿ ಹೊಡೆದು ತೀರ್ಪಿಗೆ ಅಸಮಾಧಾನ ತೋರಿಸಿದಳು. ಪ್ರೇಕ್ಷಕರೂ ಕೆರಳಿದರು. ದೆಹಲಿ ಆಟಗಾರರು ಸುಲಭವಾಗಿ ತಮ್ಮನ್ನು ಔಟ್ ಮಾಡಿಕೊಂಡು ಪ್ರತಿರೋಧ ವ್ಯಕ್ತಪಡಿಸಿದರು. ಅಂಕಣದಲ್ಲೇ ನಿರ್ಣಾಯಕರ ವಿರುದ್ಧ ಚೀಟ್..ಚೀಟರ್... ಎಂದು ಘೋಷಣೆ ಕೂಗಿದರು. ತಮಗೆ ಅನ್ಯಾಯವಾಗಿದೆ ಎಂದು ಅಲ್ಲೇ ಕುಳಿತು ಬಿಕ್ಕಿಬಿಕ್ಕಿ ಅತ್ತರು. ಆದರೆ, ಈ ಪ್ರತಿಭಟನೆಗೆ ಯಾರೂ ಸೊಪ್ಪು ಹಾಕಲಿಲ್ಲ. ಅನಿವಾರ್ಯವಾಗಿ ದೆಹಲಿ ಆಟಗಾರರು ಅಸಮಾಧಾನದಿಂದಲೇ ಹೊರನಡೆದರು.
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

