ಮರಳು ದಂಧೆ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ
ಕ.ಪ್ರ.ವಾರ್ತೆ , ರಾಮನಾಥಪುರ , ಅ.24
ಎಗ್ಗಿಲ್ಲದೆ ಸಾಗಿರುವ ಮರಳು ದಂಧೆ ತಡೆಯಲು ವಿಫಲಗೊಂಡಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಗೊಬ್ಬಳಿ ಗ್ರಾಮಸ್ಥರು ಗುರುವಾರ ಘೋಷಣೆ ಕೂಗಿ ಫ್ರತಿಭಟಿಸಿದರು.
ಈ ಗ್ರಾಮವು ಕಾವೇರಿ ನದಿಯ ದಡದಲ್ಲಿದ್ದು ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿನ ಅಕ್ಕ ಪಕ್ಕ ಗ್ರಾಮಗಳಾದ ಮಾದಾಪುರ, ಕಟ್ಟೆಪುರ, ಕಡವಿನಹೊಸಹಳ್ಳಿಗಳೆಲ್ಲೆಡೆಯಲ್ಲಿ ಮಿತಿ ಮೀರಿ ಮರಳು ದಂಧೆ ಕಾವೇರಿ ನದಿಯಲ್ಲಿ ನಡೆಸುತ್ತಿದ್ದು, ಇದರಿಂದಾಗಿ ಮರಳು ತುಂಬಿದ ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ ಇಲ್ಲಿನ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು, ಈ ಗ್ರಾಮಗಳ ಮಾರ್ಗವಾಗಿ ಬಸ್ಗಳು ಸಂಚರಿಸುವುದೇ ದುಸ್ತರವಾಗಿದೆ ಎಂದು ಟೀಕಿಸಿದರು.
3 ತಿಂಗಳಿನಿಂದ ಈ ಮಾರ್ಗದಲ್ಲಿ ಬಸ್ ಸಂಚಾರ ಕೂಡ ಸ್ಥಗಿತಗೊಂಡು ಈ ಭಾಗದ ಗ್ರಾಮಸ್ಥರು ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಂಚರಿಸಲು ಸಾಕಷ್ಟು ತೊಂದರೆ ಉಂಟಾಗಿ ಈ ಮಾರ್ಗದಲ್ಲಿ ಬಸ್ ಸಂಚರಿಸಲು ಅನುವು ಮಾಡಿಕೊಡುವಂತೆ ಸ್ಥಳೀಯ ರಾಮನಾಥಪುರ ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕರಿಗೆ ಎಷ್ಟು ವಿನಂತಿಸಿಕೊಂಡರೂ ಪ್ರಯೋಜನವಾಗಲಿಲ್ಲ ಎಂದು ದೂರಿದರು.
ಬಸ್ ಸಂಚಾರವಿಲ್ಲದೆ ಸುರಿಯುವ ಮಳೆಯಲ್ಲೇ ದೂರದಿಂದ ನಡೆದುಕೊಂಡು ರಾಮನಾಥಪುರಕ್ಕೆ ನಡೆದುಕೊಂಡು ಹೋಗುವ ದುಸ್ಥಿತಿ ಬಂದಿದ್ದರೂ ಯಾವ ಅಧಿಕಾರಿಗಳು ರಸ್ತೆಯ ದೊಡ್ಡ ಗುಂಡಿಗಳನ್ನು ಸರಿಪಡಿಸುವ ಹಾಗೂ ಮರಳು ದಂಧೆ ನಿಲ್ಲಿಸುವ ಗೋಜಿಗೆ ಹೋಗಲಿಲ್ಲ ಎಂದು ಆರೋಪಿಸಿದರು.
ನೀರಾವರಿ ಗದ್ದೆಗಳಿಗೆ ನೀರು ಹೋಗುವ ಕಿರು ನಾಲೆಗಳ ಮೋರಿಯ ಸೀಮೆಂಟ್ ಪೈಪ್ಗಳು ಈ ಮರಳು ವಾಹನಗಳ ಅಬ್ಬರಕ್ಕೆ ಮುರಿದು ಹಾಳಾಗಿ ಹೋಗಿದೆ. ರೈತರು ತಮ್ಮ ಜಮೀನಿಗೆ ನೀರು ಹಾಯಿಸಲು ವಿಪರೀತ ತೊಂದರೆಯುಂಟಾಗಿದೆ. ಈ ಬಗ್ಗೆ ಮರಳು ದಂಧೆ ನಡೆಸುತ್ತಿರುವುದನ್ನು ನಿಲ್ಲಿಸಲು ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ನೀಡಿದರೆ ಅದು ಕೂಡಲೇ ಮರಳು ದಂಧೆ ನಡೆಸುವವರಿಗೆ ರವಾನೆಯಾಗಿ ಗ್ರಾಮದಲ್ಲಿ ಗುಂಪು ಘರ್ಷಣೆ, ಜಗಳಕ್ಕೆ ಕಾರಣವೂ ಆಗಿದೆ ಎಂದು ಹೇಳಿದ್ದಾರೆ.
ಈ ರೀತಿ ಅಧಿಕಾರಿಗಳೆ ಬೇಲಿ ಎದ್ದು ಹೊಲ ಮೇಯ್ದಂತೆ ನಡೆದುಕೊಂಡರೆ ಈ ಮರಳು ದಂಧೆಗೆ ಕೊನೆಯೇ ಇಲ್ಲದಂತಾಗಿದೆ. ಇಲ್ಲಿನ ಕಂದಾಯ ಅಧಿಕಾರಿಗಳಾಗಲೀ, ಪೊಲೀಸ್ ಇಲಾಖೆಯವರಾಗಲಿ ಸರಿಯಾದ ರೀತಿ ಶಿಸ್ತು ಕ್ರಮ ಕೈಗೊಳುತ್ತಿಲ್ಲ. ತಮಗೇನು ತಿಳಿಯದಂತೆ ಜಾಣ ಪೆದ್ದು ಪ್ರದರ್ಶಿಸುತ್ತಿರುವ ಅಧಿಕಾರಿಗಳ ವಿರುದ್ಧ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡು ದಕ್ಷ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು. ಮರಳು ದಂಧೆಗೆ ಇತಿಶ್ರೀ ಹಾಕಬೇಕು. ಮುಂದತಾದರೂ ಈ ಗ್ರಾಮಗಳ ಸಮಸ್ಯೆಗೆ ಸ್ಪಂದಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಸುಂದರೇಶ್ ಜಿ.ಎನ್, ಕಬೀರ್, ಬಾಬುಖಾನ್, ಜನಾರ್ದನ್, ಗಣೇಶ್, ಮಂಜೇಗೌಡ, ಜಿ.ಟಿ. ಸುಂದರೇಶ್, ರವಿ, ಅಪ್ಪಣ, ಚಂದ್ರೇಗೌಡ, ಹೇಮಂತ್, ದಯಾನಂದ್, ಶಬೀರ್ ಖಾನ್, ತಾಂಡವೇಶ್ವರ್ ಅಯ್ಯಂಗಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

