ಹಾವೇರಿ

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ 160 ತಂಡ: ಹೊನ್ನಳ್ಳಿ

Published On :

ಹಾನಗಲ್ಲ: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ 45,600 ಕುಟುಂಬಗಳ ಸಮೀಕ್ಷೆ ನಡೆಸಲು ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ 160 ತಂಡ ರಚಿಸಲಾಯಿತು. ಸಭೆಯ ನೇತೃತ್ವ ವಹಿಸಿದ್ದ ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ, ಶಾಲೆ ಬಿಟ್ಟ ಮಕ್ಕಳು ಬಾಲ ಕಾರ್ಮಿಕ, ಬಾಲ್ಯ ವಿವಾಹ ಅಥವಾ ಕಾನೂನು ಬಾಹಿರ ಕೃತ್ಯಗಳಿಗೆ ಪಕ್ಕಾಗುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಪರಿಣಾಮಕಾರಿಯಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಮಾತನಾಡಿ, ಕಾಟಾಚಾರಕ್ಕೆ ಸಮೀಕ್ಷೆ ಮಾಡದೆ, ಸ್ಪಷ್ಟ, ನಿರ್ದಿಷ್ಟ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಬೇಕು ಎಂದರು. ಪಿಎಸ್‌ಐ ಮಹದೇವ ಯಲಿಗಾರ ಮಾತನಾಡಿ, ರಾಜ್ಯದಲ್ಲಿ 3.50 ಲಕ್ಷ ಬಾಲಕಾರ್ಮಿಕರು ಇರುವ ವರದಿಯಿದ್ದು, ಶಿಕ್ಷೆಯ ಪ್ರಸಂಗಗಳು ಕಡಿಮೆಯಾಗಿವೆ. ರಾಜ್ಯದಲ್ಲಿ ಒಟ್ಟು 6.28 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದ ಬಗ್ಗೆ ಮಾಹಿತಿ ಇದೆ. ಸಮೀಕ್ಷಾ ಕಾರ್ಯದಿಂದ ಸ್ಪಷ್ಟ ಅಂಕಿ ಅಂಶಗಳು ದೊರಕಲಿವೆ ಎಂದರು. ಹೋಟೆಲ್ ಮುಂತಾದೆಡೆ ಕೆಲಸ ಮಾಡುತ್ತಿರುವ ಬಾಲಕಾರ್ಮಿಕರ ಪತ್ತೆಗೆ ತಹಸೀಲ್ದಾರ್, ಪಿಎಸ್‌ಐ ಒಳಗೊಂಡ ತಂಡ ರಚಿಸಿ, ದಾಳಿ ನಡೆಸಲು ನಿರ್ಧರಿಸಲಾಯಿತು. ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಎಸ್. ರಂಗಸ್ವಾಮಿ, ಡಯಟ್‌ನ ನೊಡಲ್ ಅಧಿಕಾರಿ ಹಜರೆಸಾಬ ನದಾಫ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.