ಶೋಷಿತ ಸಮುದಾಯ ಕಾಂಗ್ರೆಸ್ ಬೆಂಬಲಿಸಲಿ
ಹಾವೇರಿ: ಕಾಂಗ್ರೆಸ್ ಸರ್ಕಾರವಿದ್ದರೂ ನಮಗೆ ಅಧಿಕಾರ ಸಿಕ್ಕಿಲ್ಲ ಎಂದು ಶೋಷಿತ ಸಮುದಾಯದ ಮುಖಂಡರು ಪರಿತಪಿಸಬಾರದು. ಚುನಾವಣೆ ಬಳಿಕ ಅದಕ್ಕೆಲ್ಲ ಪರಿಹಾರ ಸಿಗಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರವೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಶೋಷಣೆ, ಅನ್ಯಾಯ ಸರಿಪಡಿಸಲು ಅಧಿಕಾರ ಬೇಕು ಎಂಬ ಭ್ರಮೆಯನ್ನು ನಾವು ಬಿಡಬೇಕು. ಸಿಎಂ ಸಿದ್ದರಾಮಯ್ಯ, ರಾಹುಲ್ಗೆ ಇನ್ನಷ್ಟು ಶಕ್ತಿ ತುಂಬಲು ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಸಮುದಾಯದ ಜನರು ಶ್ರಮಿಸಬೇಕು ಎಂದು ಕರೆ ನೀಡಿದರು.
ಚುನಾವಣೆ ಬಳಿಕ ಮೂಢನಂಬಿಕೆ ಹಾಗೂ ಶೋಷಣೆ ಬಗ್ಗೆ ರಾಜ್ಯಾದ್ಯಂತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶೋಷಿತರ ಸಮಸ್ಯೆಗಳಿಗೆ ಆಗ ಪರಿಹಾರ ಸಿಗಲಿದೆ. ಅಲ್ಲಿಯವರೆಗೆ ಶೋಷಿತರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗನ್ನು ಬಿಟ್ಟು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರ ಗೆಲುವಿಗೆ ಶ್ರಮಿಸಬೇಕು. ದೇಶದಲ್ಲಿ ಕೋಮುವಾದಿ ಬಿಜೆಪಿ ಹಾಗೂ ಶೋಷಿತರ ಪರವಾದ ಕಾಂಗ್ರೆಸ್ - ಈ ಎರಡೇ ಪಕ್ಷಗಳಿವೆ. ನಮಗೆ ರಾಮಮಂದಿರ, ಸರ್ದಾರ್ ಪಟೇಲರ ಮೂರ್ತಿ ಬೇಕಿಲ್ಲ. ನಮಗೆ ನೀರು, ವಸತಿ, ಶಿಕ್ಷಣ ಬೇಕಿದೆ. ಅದನ್ನು ಕಾಂಗ್ರೆಸ್ ಮಾತ್ರ ನೀಡಲು ಸಾಧ್ಯ. ಬಿಜೆಪಿಯವರು ಈ ಹಿಂದೆ ಯಡಿಯೂರಪ್ಪ, ಈಗ ಮೋದಿ ಅವರನ್ನು ತೋರಿಸಿ ಮತ ಕೇಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.
ಅಭ್ಯರ್ಥಿ ಸಲೀಂ ಅಹ್ಮದ್ ಮಾತನಾಡಿ, ಎಲ್ಲ ಜಾತಿ, ವರ್ಗದ ಜನರ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯವಿದೆ. ನಾವು ಮಾಡಿದ ಸಾಧನೆಯನ್ನು ಹೇಳಿ ಮತ ಕೇಳಬೇಕು. ಆದರೆ, ಬಿಜೆಪಿ ಅಭ್ಯರ್ಥಿ ತಾವು ಸಂಸದರಾಗಿದ್ದಾಗ ಏನೂ ಸಾಧನೆ ಮಾಡದೇ ಈಗ ಮೋದಿ ಭಾವಚಿತ್ರ ಇಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತಿದ್ದಾರೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಬೇಕು ಎಂದರು.
ಶಾಸಕ ರುದ್ರಪ್ಪ ಲಮಾಣಿ ಮಾತನಾಡಿದರು. ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮನೋಹರ ತಹಶೀಲ್ದಾರ, ಶಾಸಕ ಬಸವರಾಜ ಶಿವಣ್ಣನವರ, ಟಿ. ಈಶ್ವರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

