ಹಾವೇರಿ

ಮತದಾರರ ಜಾಗೃತಿ, ಪ್ರತಿಜ್ಞಾವಿಧಿ ಬೋಧನೆ

Published On :

ಹಾವೇರಿ:  ಹಾನಗಲ್ಲ ತಾಲೂಕು ಗೆಜ್ಜಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರುರಾಯಪಟ್ಟಣ, ಗಿರಸಿನಕೊಪ್ಪ ಮತ್ತು ಗೆಜ್ಜಿಹಳ್ಳಿ ಗ್ರಾಮಗಳಲ್ಲಿ ವಾರ್ತಾ ಇಲಾಖೆ ವತಿಯಿಂದ ಮತದಾರರ ಜಾಗೃತಿಗಾಗಿ ಆಯೋಜಿಸಲಾದ ಬೀದಿನಾಟಕ ತಂಡದ ಕಲಾವಿದರು 'ನಮ್ಮ ಮತ ನಮ್ಮ ಹಕ್ಕು' ಎಂಬ ನಾಟಕ ಪ್ರದರ್ಶಿಸಿದರು. ರಾಣಿಬೆನ್ನೂರು ತಾಲೂಕಿನ ಯಕಲಾಸಪುರ ಗ್ರಾಮದ ಜನನಿ ಜಾನಪದ ಕಲಾ ವೇದಿಕೆ ವತಿಯಿಂದ ಪರಶುರಾಮ ಬಣಕಾರ ನೇತೃತ್ವದಲ್ಲಿ ಜರುಗಿದ ನಾಟಕದಲ್ಲಿ, ಆಸೆ, ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಬೇಕೆಂದು ತಿಳಿಸಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಫ್.ಎಂ. ಮಠದ ಕಲಾವಿದರು ಹಾಗೂ ಸಾರ್ವಜನಿಕರು ಪ್ರತಿಜ್ಞಾವಿಧಿ ಬೋಧಿಸಿದರು. ತಂಡದಲ್ಲಿ ಬಸವರಾಜ ಕೊಳಜಿ, ಚಂದ್ರಪ್ಪ ದೊಡ್ಡಮನಿ, ಸರೋಜಾ ಸಣಕಂಬಿ, ರಮೇಶ ನಾಯಕ, ರಾಜು ಸುರ್ವೆ, ಲಿಂಗರಾಜ ಕೊಳಜಿ, ತಿಪ್ಪೇಶ ಲೆಕ್ಕಕೋನಿ ಇತರರು ಇದ್ದರು.

ರಾಹುಲ್‌ಗೆ ರಾಜಕೀಯ ಅನುಭವ ಕೊರತೆ
ಬಳ್ಳಾರಿ: ರಾಹುಲ್ ಗಾಂಧಿ ಅವರಿಗೆ ರಾಜಕೀಯ ಅನುಭವದ ಕೊರತೆ ಇದ್ದು, ಯಾರೋ ಬರೆದುಕೊಟ್ಟ ಭಾಷಣ ಓದುತ್ತಾರೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಟೀಕಿಸಿದರು. ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಪ್ಪಗಲ್ ಗ್ರಾಮದಲ್ಲಿ ಪ್ರಚಾರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಹುಲ್‌ಗಾಂಧಿ ತನ್ನ ಜತೆಗೆ ಕಳಂಕಿತರನ್ನು ಇಟ್ಟುಕೊಂಡು ಬೇರೆಯವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು. ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ, ರುದ್ರಗೌಡ, ಮುರಳಿ, ಗುರುಲಿಂಗನಗೌಡ, ಗೋನಾಳ್ ಮುರಾಹರಿಗೌಡ, ಗೋನಾಳ್ ರಾಜಶೇಖರಗೌಡ, ಶಿವರುದ್ರಗೌಡ, ಜಿ. ಶಿವರಾರೆಡ್ಡಿ, ತಿಪ್ಪಾರೆಡ್ಡಿ, ಜಿಪಂ ಸದಸ್ಯ ರಾಮುಡು ಇತರರಿದ್ದರು. ಸಿರವಾರ, ಕೊರ್ಲಗುಂದಿ, ಕಪ್ಪಗಲ್‌ಇತರ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಮಂಕಿ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ
ಹೊನ್ನಾವರ:  ತಾಲೂಕಿನ ಮಂಕಿ ಗ್ರಾಪಂ ವ್ಯಾಪ್ತಿಯ ಸುಳೇಬೀಳು ಗ್ರಾಮಸ್ಥರು ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಲು ನಿರ್ಧರಿಸಿ, ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 20 ವರ್ಷಗಳಿಂದ ಈ ಗ್ರಾಮದಲ್ಲಿ ಜಿಪಂ, ಗ್ರಾಪಂ, ತಾಪಂ, ಶಾಸಕರಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಕೇವಲ 500 ಮೀಟರ್ ರಸ್ತೆ ಬೇಡಿಕೆಯೂ ಸುಮಾರು 10 ವರ್ಷಗಳಿಂದ ಈಡೇರಿಲ್ಲ. ಈ ತನಕ ಯಾವ ಜನಪ್ರತಿಧಿಗಳೂ ಈ ಅತಿ ಚಿಕ್ಕ ರಸ್ತೆ ನಿರ್ಮಿಸದೇ ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ. ಡಾಂಬರೀಕರಣ ಕೈಗೊಳ್ಳಲು ಗ್ರಾಪಂನಿಂದ ಅಸಾಧ್ಯವೆಂದು ತಿಳಿಸಿದ್ದಾರೆ. ಚುನಾವಣೆ ಹೊರತಾಗಿ ಯಾವ ಪ್ರತಿನಿಧಿಗಳೂ ಈ ಗ್ರಾಮಕ್ಕೆ ಭೇಟಿ ನೀಡಿದ ದಾಖಲೆಗಳಿಲ್ಲ. ಕಾರಣ 17ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಸಾಮೂಹಿಕವಾಗಿ ತೆರಳದಿರಲು ನಿರ್ಧರಿಸಿರುವುದಾಗಿ ಮನವಿಯಲ್ಲಿ ಗ್ರಾಮಸ್ಥರು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ರೋಡ್ ಶೋ
ಗಂಗಾವತಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ಶನಿವಾರ ರೋಡ್ ಶೋ ನಡೆಸಿದರು.  ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅನಂತರ ತೆರೆದ ವಾಹನದಲ್ಲಿ ಗಾಂಧಿ ವೃತ್ತದಿಂದ ಸಮಾವೇಶ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೈದಾನದವರೆಗೂ ಮೆರವಣಿಗೆಯಲ್ಲಿ ಸಾಗಿದರು. ಮುಖ್ಯಮಂತ್ರಿ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ವಿಪ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಎಚ್.ಆರ್. ಶ್ರೀನಾಥ,  ಅಭ್ಯರ್ಥಿ ಬಸವರಾಜ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಸಾಲೋಣಿ ನಾಗಪ್ಪ, ಮಲ್ಲಿಕಾರ್ಜುನ ನಾಗಪ್ಪ, ಜೋಗದ ಹನುಮಂತಪ್ಪ ನಾಯಕ, ಎಚ್.ಆರ್. ಭರತಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ನಾಳೆ ವಿಶ್ವ ಆರೋಗ್ಯ ದಿನಾಚರಣೆ
ಹಾವೇರಿ:  ಆರೋಗ್ಯ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಜಿಲ್ಲಾ ವಾರ್ತಾ ಇಲಾಖೆ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಜಿಲ್ಲಾ ಶುಷ್ರೂಶಕಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಏ. 7ರಂದು ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ನಗರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಜರುಗಲಿದೆ. ಅಂದು ಜಿಲ್ಲಾ ಆಸ್ಪತ್ರೆ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿನಿಯರು ಮತ್ತು ಇಲಾಖೆಯ ಅಧಿಕಾರಿ, ಸಿಬ್ಬಂದಿಯಿಂದ ನಗರದಲ್ಲಿ ಜಾಥಾವು ಬೆಳಗ್ಗೆ 9-30ಕ್ಕೆ ಜಿಲ್ಲಾಸ್ಪತ್ರೆ ಆವರಣದಿಂದ ಹೊರಡಲಿದೆ. ಇಲಾಖೆಯ ಅಧಿಕಾರಿಗಳು, ವಾರ್ತಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಪ್ರಸಕ್ತ ವರ್ಷದ ಘೋಷಣೆ ಕೀಟ ಜನ್ಯ ರೋಗಗಳು, ಸಣ್ಣ ಕೀಟ, ಬಾರಿ ಅಪಾಯ ಗುರಿ ಕೀಟ ಜನ್ಯ ರೋಗಗಳಿಂದ ಉತ್ತಮ ರಕ್ಷಣೆ ಅನ್ವಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

ರೋವರ್ಸ್, ರೇಂಜರ್ಸ್ ಸಮುದ್ರ ತೀರ ಚಾರಣ
ಹೊನ್ನಾವರ:  ತಾಲೂಕಿನ ಮಂಕಿ ಗ್ರಾಮದ ಕೊಪ್ಪದಮಕ್ಕಿಯ ಸಹಿಪ್ರಾ ಶಾಲೆಯಲ್ಲಿ ಕಾರವಾರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಮೂರು ದಿನಗಳ ಜಿಲ್ಲಾಮಟ್ಟದ ರೋವರ್ ಹಾಗೂ ರೇಂಜರ್ಸ್ ಸಮುದ್ರ ತೀರದ ಚಾರಣ ಶಿಬಿರ  ಹಮ್ಮಿಕೊಳ್ಳಲಾಗಿತ್ತು. ಕಾರವಾರ,  ಕುಮಟಾ, ಹೊನ್ನಾವರ, ಭಟ್ಕಳ ಕಾಲೇಜ್‌ನಿಂದ 103 ವಿದ್ಯಾರ್ಥಿಗಳು, 56 ರೋವರ್ಸ್, 47 ರೇಂಜರ್ಸ್ , ರೇಂಜರ್ಸ್ ಲೀಡರ್ ಸಮ್ಸಮಯ್ಯ  ಸಯೀದ, ಭಟ್ಕಳ ರೋವರ್ ಲೀಡರ್ ಕಲೀಮುಲ್ಲಾ ಶಿಬಿರದಲ್ಲಿ ಭಾಗವಹಿಸಿದರು. ಜಿಲ್ಲಾ ಮುಖ್ಯ ಆಯುಕ್ತ ಜಿ.ಜಿ. ಸಭಾಹಿತ, ಸ್ಥಾನಿಕ ಆಯುಕ್ತ ಎಸ್.ಎಸ್. ಭಟ್ ಹಾಗೂ ಜಿ.ಸಿ. ದೇವರಾಜ್ ಶುಭ ಕೋರಿದರು.

ಮತದಾನ ಮಾಡಿದವನೇ ಮಹಾಶೂರ
ಕೊಪ್ಪಳ: ಜಿಲ್ಲಾ ವಾರ್ತಾ ಇಲಾಖೆ, ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರ ಜಾಗೃತಿ ಅಭಿಯಾನದಡಿ 'ಮತದಾನ ಮಾಡಿದವನೇ ಮಹಾಶೂರ' ಎಂಬ ಬೀದಿನಾಟಕವನ್ನು ಚೇತನ ಸಾಂಸ್ಕೃತಿಕ ಕಲಾತಂಡ ತಾಲೂಕಿನ ಭಾಗ್ಯನಗರ, ಕಿನ್ನಾಳ, ಗಿಣಗೇರಾ, ಹುಲಿಗಿ, ಹೊಸಳ್ಳಿ ಕವಲೂರ, ಇಟಗಿ, ಕುಕನೂರ ಗ್ರಾಮಗಳಲ್ಲಿ ಪ್ರದರ್ಶನ ಮಾಡಿತು. ಮಾರ್ಚ್ 28, 29, ಏ. 1, 2ರಂದು ಪ್ರತಿದಿನ 2 ಕಾರ್ಯಕ್ರಮಗಳಂತೆ 4 ದಿನ 8 ಗ್ರಾಮಗಳಲ್ಲಿ ಮತಜಾಗೃತಿ ಕುರಿತು ಬೀದಿನಾಟಕ ಪ್ರದರ್ಶನ ಮಾಡಲಾಯಿತು.  ಕಲಾತಂಡದ ನಾಯಕ ಶಿವಮೂರ್ತಿ ಮೇಟಿ, ನೀಲಪ್ಪ ಮೋಟಿ, ಬಾಳಪದ್ಪ ಮೋಟಿ, ಅಂಬುಜಾ ಸಿಂಧನೂರ, ಖಾದರ್‌ಸಾಬ್ ನದಾಫ್, ಖರಿಮ್‌ಸಾಬ್ ನದಾಫ್, ಮಹ್ಮದ್‌ಸಾಬ್ ನದಾಫ್, ಬಾಬುಸಾಬ್ ಸಿಂದೋಗಿ, ರಾಮಣ್ಣ ವಾಲ್ಮೀಕಿ, ಸಂತೋಷ್ ಮೇಟಿ ಬೀದಿನಾಟಕದಲ್ಲಿ ಅಭಿನಯಿಸಿದ್ದರು.

ಜಗಜೀವನರಾಂ ಜನ್ಮ ದಿನಾಚರಣೆ
ಹಾವೇರಿ:  ಜಿಲ್ಲಾ ಆಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ  ದಿ. ಡಾ. ಬಾಬು ಜಗಜೀವನರಾಂರವರ 107ನೇ ಜಯಂತಿಯನ್ನು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಚರಿಸಲಾಯಿತು.ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಎಂ. ಮಂಜುನಾಥ ನಾಯಕ ಅವರು ಡಾ. ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಆಂಜನಪ್ಪ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಜಿಪಂ ಉಪ ಕಾರ್ಯದರ್ಶಿ ಜಿ. ಗೋವಿಂದಸ್ವಾಮಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ ಹೊರಪೇಟೆ ಇತರರು ಇದ್ದರು.

 ಇಂದಿನಿಂದ ಶ್ರೀ ವೀರಭದ್ರೇಶ್ವರ ರಥೋತ್ಸವ  
ಹಿರೇಕೆರೂರು: ತಾಲೂಕಿನ ಸುಕ್ಷೇತ್ರ ರಟ್ಟಿಹಳ್ಳಿಯ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಹಾಗೂ ರಥೋತ್ಸವ ಏ. 6ರಿಂದ 11ರವೆರೆಗೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಏ. 6ರಂದು ರಾತ್ರಿ 8 ಗಂಟೆಗೆ ಕಂಕಣಧಾರಣೆ, ಏ. 7ರಂದು ರಾತ್ರಿ 8ಕ್ಕೆ ಕುದುರೆ ಉತ್ಸವ, ಏ. 8 ರಂದು ರಾತ್ರಿ 8ಕ್ಕೆ ಆನೆ ಉತ್ಸವ, ಏ. 9ರಂದು ರಾತ್ರಿ 8ಕ್ಕೆ ಹೂವಿನ ತೇರು, ಏ. 10ರಂದು ಶ್ರೀ ವೀರಭದ್ರದೇವರಿಗೆ ಎಡೆಕೊಡುವುದು, ಜವಳ, ಹರಕೆ, ಮುಡುಪು ಒಪ್ಪಿಸುವುದು, ಏ. 11ರಂದು ಬೆಳಗ್ಗೆ ದೊಡ್ಡ ರಥೋತ್ಸವ ಹಾಗೂ ಗುಗ್ಗಳ ಮಹೋತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ
ಹಾವೇರಿ: ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಡಿ.ಎನ್. ಹೇಳಿದರು. ಶಿಗ್ಗಾಂವಿ ತಾಲೂಕು ಬಂಕಾಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಸಂಘದ ಉದ್ಘಾಟನಾ ಸಮಾರಂಭ ಹಾಗೂ ವಾರ್ಷಿಕ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು ಹುಬ್ಬಳ್ಳಿಯ ಟಿಪ್ಪು ಶಾಹೀದ ಪಾಲಿಟೆಕ್ನಿಕ್ ಪ್ರಾಚಾರ್ಯ ಎಂ.ಎಸ್. ಮುಲಾ, ಕಾಲೇಜಿನ ಪ್ರಾಚಾರ್ಯ ಭರಮಪ್ಪ ಬಡಪ್ಪಳವರ, ಪ್ರೊ. ಡಿ.ಎಸ್. ಸೊಗಲದ, ಲಿಂಗರಾಜು ಎಂ.ಪಿ, ಓಂಕಾರಪ್ಪ ನಡುವಿನಮನಿ, ಸರೋಜಾ ರಜಪುತ ಇತರರು ಇದ್ದರು. ಶಾತಾಜ್‌ಬೇಗಂ ನದಾಫ್ ಸ್ವಾಗತಿಸಿದರು. ಶಾಜಿಯಾ ಬಾನು ವಂದಿಸಿದರು.

ಮತದಾನ ಜಾಗೃತಿ ಕಾರ್ಯಕ್ರಮ
ಹಿರೇಕೆರೂರು:  ಪಟ್ಟಣ ಪಂಚಾಯಿತಿ ವತಿಯಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಮಾಡುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪಟ್ಟಣದ ಹೊಸೂರ, ಮಂಜುನಾಥ ನಗರ, ರಾಘವೇಂದ್ರ ಕಾಲೋನಿ, ವಿದ್ಯಾನಗರ, ಗುರುಭವನ ರೋಡ್, ತಿಪ್ಪಶೆಟ್ಟಿ ಪ್ಲಾಟ್ ಹಾಗೂ ವಿವಿಧ ಓಣಿಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರಣೆಗಳ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆ ಎಂಬ ಪ್ರತಿಜ್ಞಾವಿಧಿಯನ್ನು ಮನೆ ಮನೆಗೆ ತೆರಳಿ ನೀಡಿ ಬೋಧಿಸಲಾಯಿತು

ಕುಮಾರಸ್ವಾಮಿ ಆಡಳಿತಕ್ಕೆ ಜನಮೆಚ್ಚುಗೆ
ಮುಂಡರಗಿ: ಎಚ್.ಡಿ. ಕುಮಾರಸ್ವಾಮಿ ಅವರು 20 ತಿಂಗಳ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಆಡಳಿತ ಹಾಗೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮತದಾರರು ಮೆಚ್ಚಿದ್ದಾರೆ. ಆದ್ದರಿಂದ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಗೆಲವು ಖಚಿತ ಎಂದು ಗದಗ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಸವರಾಜ ದೇಸಾಯಿ ಹೇಳಿದರು. ಅವರು ಶನಿವಾರ ಪಟ್ಟಣದ ತೋಂಟದಾರ್ಯ ಮಠದಿಂದ ಹಾವೇರಿ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಪರ ಮನೆ ಮನೆ ಪ್ರಚಾರ ಪ್ರಾರಂಭಿಸುವ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಜಿ. ವಡ್ಡಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಮಾಡಲಗೇರಿ, ಉಮೇಶ ಹಿರೇಗೌಡ್ರ ಮಾತನಾಡಿದರು. ಕಾರ್ಯದರ್ಶಿ ದಾಕ್ಷಾಯಿಣಿ ರಾವ್, ಅರುಣಾ ಹಳಕಟ್ಟಿ, ಮಾರುತಿ ಕವಲೂರ, ಹೇಮಣ್ಣ ಹಾರೋಗೇರಿ, ಹಾಲಪ್ಪ ಹಡಪದ ಇದ್ದರು.

ಸಿಎಂ ಸಿದ್ದು ಮೋದಿ ಅಲೆಗೆ ಹೆದರುತ್ತಿದ್ದಾರೆ: ಕಿಶನ್
ಗದಗ: ರಾಜ್ಯದ ಸಿಎಂ ಮೋದಿ ಅಲೆಗೆ ಹೆದರುತ್ತಿದ್ದಾರೆ ಎಂದು ನಮೋ ಬ್ರಿಗೇಡ್‌ನ ಜಿಲ್ಲಾಧ್ಯಕ್ಷ ಕಿಶನ್ ಮೇರವಾಡೆ ಹೇಳಿದರು. ಗುರುವಾರ ನಗರದ ವಾರ್ಡ್ ನಂ. 29ರಲ್ಲಿ ನಮೋ ಬ್ರಿಗೇಡ್‌ನ ವತಿಯಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರ ಪಾದಯಾತ್ರೆ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ನರೇಂದ್ರ ಮೋದಿ ಹೆಸರನ್ನು ಪದೇ ಪದೇ ಸೇರಿಸುವಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಮೊದಲಿಗರಾಗಿದ್ದು ವಿಚಿತ್ರವಾದರೂ ಸತ್ಯ. ಸಿದ್ದರಾಮಯ್ಯ ಅವರು ಮೋದಿ ಅಲೆಗೆ ಹೆದರಿರುವುದು ಸ್ಪಷ್ಟವಾಗಿದೆ ಎಂದರು. ಸಂಗಣ್ಣ ಬಂಗಾರಶೆಟ್ರ, ರಾಜು ಕುರುಡಗಿ, ಛಗನ ರಾಜಪುರೋಹಿತ, ಅಮರನಾಥ ಬೆಟಗೇರಿ, ವಿನಾಯಕ ಹಬೀಬ, ಯುವ ಮೋರ್ಚಾ ಕಾರ್ಯಕರ್ತರು, ನಮೋ ಬ್ರಿಗೇಡ್ ಸಂಚಾಲಕರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್ ಮುಕ್ತ ಭಾರತ ನಮ್ಮ ಗುರಿ: ಉದಾಸಿ
ಲಕ್ಷ್ಮೇಶ್ವರ: ಕಾಂಗ್ರೆಸ್ ಪಕ್ಷವು ಕಳೆದ 10 ವರ್ಷಗಳ ಆಡಳಿತದಲ್ಲಿ ಭಾರತ ದೇಶವನ್ನು ಅಧೋಗತಿಯತ್ತ ತಂದು ನಿಲ್ಲಿಸಿದೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿಯನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿಗೆ ನಿಮ್ಮ ಮತ ನೀಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ಮನವಿ ಮಾಡಿದರು. ಅವರು ಸಮೀಪದ ಸೂರಣಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ತಾಪಂ ಸದಸ್ಯ ನಿಂಬಣ್ಣ ಮಡಿವಾಳರ, ಪಾಟೀಲ, ರಾಮಣ್ಣ ಲಮಾಣಿ, ವಿಶ್ವನಾಥ ಕಪ್ಪತ್ತನವರ, ವಿಜಯ ಹಳ್ಳಿ, ಸಣ್ಣೀರಪ್ಪ ಹಳ್ಳೆಪ್ಪನವರ, ಜಾನು ಲಮಾಣಿ, ಶಂಕ್ರಣ್ಣ ಶೀರನಹಳ್ಳಿ, ಬಸವರಾಜ ಇಟಗಿ, ಗಿರೀಶ ಬೆನಕನಹಳ್ಳಿ ಇದ್ದರು.

ಬಿ. ಶ್ರೀರಾಮುಲುಗೆ ಮಹಮ್ಮದೀಯ ಟ್ರಸ್ಟ್ ಬೆಂಬಲ    
ಕಂಪ್ಲಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಜನಹಿತ ಬಯಸುವ ಹಿನ್ನೆಲೆಯುಳ್ಳವರಾಗಿದ್ದು, ಅವರಿಗೆ ಮಹಮ್ಮದೀಯ ಟ್ರಸ್ಟ್ ಬೆಂಬಲಿಸಲಿದೆ ಎಂದು ಮಹಮ್ಮದೀಯ ಟ್ರಸ್ಟ್ ಅಧ್ಯಕ್ಷ ವಲಿ ಅಹ್ಮದ್‌ಸಾಬ್ ತಿಳಿಸಿದರು. ಅವರು ತಮ್ಮ ನಿವಾಸದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಮ್ಮದೀಯ ಟ್ರಸ್ಟ್ ಕಮಿಟಿ ಮುಖಂಡರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಕಮಿಟಿ ಉಪಾಧ್ಯಕ್ಷರಾದ ಜೆ. ಮೊಹಿದ್ದೀನ್ ಮತ್ತು ಗೆಜ್ಜೆಳ್ಳಿ ಬಾಷಾ, ಪ್ರಧಾನ ಕಾರ್ಯದರ್ಶಿ ಸಿ.ಎಂ.ಡಿ. ರಫಿಕ್, ಖಜಾಂಚಿ ಶಬ್ಬೀರ್, ಸದಸ್ಯರಾದ ರೆಹಮತುಲ್ಲಾ ಬೇಗ್, ಮಿಠಾಯಿ ಶಬ್ಬೀರ್, ಇಮಾಂ ಸಾಬ್, ಅಮೀನ್ ಅಲಿ, ರಜಾಕ್ ಸಾಬ್, ಇಂದಿರಾನಗರ ಚಾಂದ್, ಎಂ. ಶೆಕ್ಷಾವಲಿ, ಅಚ್ಪಡಿ ಉಸ್ಮಾನ್‌ಸಾಬ್, ಲಾಲ್‌ಸಾಬ್, ಬಾವಿಕಟ್ಟೆ ಬಾಬು, ವರ್ದಿ ಶಬ್ಬೀರ್ ಭಾಗವಹಿಸಿದ್ದರು.

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮ: ಮೇರವಾಡೆ
ಗದಗ: ಗುಜರಾತನಲ್ಲಿ ಅಲ್ಪ ಸಂಖ್ಯಾತರಾದ ಮುಸ್ಲಿಮರನ್ನು ಗೌರವದಿಂದ ಕಾಣಲಾಗುತ್ತಿದೆ. ಅಲ್ಲದೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಕಾಂಗ್ರೆಸ್ ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಬಿಂಬಿಸುತ್ತದೆ. ಆದರೆ ಬಿಜೆಪಿ ಮುಸ್ಲಿಂ ಬಾಂಧವರನ್ನು ಭಾರತೀಯರೆಂದು ಅಭಿಮಾನ ಪಡುತ್ತದೆ ಎಂದು ನಮೋ ಬ್ರಿಗೇಡನ ಸಂಚಾಲಕ ಕಿಶನ್ ಮೇರವಾಡೆ ಹೇಳಿದರು. ಶುಕ್ರವಾರ 12ನೇ ವಾರ್ಡಿನಲ್ಲಿ ನಮೋ ಬ್ರಿಗೇಡ್ ಹಾಗೂ ಯುವ ಮೋರ್ಚಾ ಸದಸ್ಯ ಬಳಗದೊಂದಿಗೆ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚಿಸಿ, ಮಾತನಾಡಿದರು. ಸಹದೇವ ಗಣಾಚಾರಿ, ಈಶಣ್ಣ ಬೇಲೇರಿ, ಶರಣು ಮುಧೋಳ, ಈರಣ್ಣ ಪವಾರ, ಪ್ರಕಾಶ ಲೋಣಿ, ಫಕೀರಗೌಡ ಪಾಟೀಲ, ಸುನೀಲ ಹೊಸೂರ, ಮಾಹಾಂತೇಶ ನಾಲ್ವಾಡ, ಬಸವರಾಜ ಜಾಲಿಹಾಳ, ಯುವಮೋರ್ಚಾ ಅಧ್ಯಕ್ಷ ಛಗನ್ ರಾಜಪುರೋಹಿತ, ಸಿದ್ರಾಮೇಶ ಹಿರೇಮಠ, ವಿನಾಯಕ ಹಬೀಬ, ಗಂಗಾಧರ ಹಬೀಬ, ಶ್ರೀಕಾಂತ ಕಿರೇಸೂರ, ಪ್ರೀತಂ ಹಿರೇಮಠ ಇದ್ದರು.

ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪ್ರಚಾರ
ಗದಗ: ನಗರದ ವಾರ್ಡ್ ನಂ. 2ರಲ್ಲಿ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಬಿಜೆಪಿ ಕಾರ್ಯಕರ್ತರು ವಾರ್ಡ್‌ನ ಮನೆ ಮನೆಗೆ ಭೇಟಿ ನೀಡಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎಂ.ಎಂ. ಹಿರೇಮಠ ಮಾತನಾಡಿ, ಈ ಬಾರಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವುದು ಖಚಿತ ಎಂದರು. ಶಹರ ಕಾರ್ಯದರ್ಶಿ ಬಸವರಾಜ ಹಡಪದ, ಎಂ.ಎ. ಸಂಗನಾಳ, ಆನಂದ ಶೇಟ, ಗಂಗಾಧರ ಮೇಲಗಿರಿ, ಚನ್ನಪ್ಪ ದ್ಯಾಂಪುರ, ಶಿದ್ಲಿಂಗಪ್ಪ ಜಿನಗಾ, ಅಂದಪ್ಪ ಕುಂಬಾರ, ಶಿವಕುಮಾರ ಹಿರೇಮಠ, ಮಕ್ತುಮಸಾಬ ನಾಗನೂರ, ಶಿವಾನಂದ ಹಡಪದ, ಪ್ರೀತಮ್ ಹಿರೇಮಠ, ಪ್ರವೀಣ ನಂದಿಕೋಲಮಠ, ಶಿವಣ್ಣ ಹನುಮನಾಳ, ಶೇಖರಯ್ಯ ಸತ್ತಪ್ಪಮಠ, ಅಜ್ಜಪ್ಪ ಕರಮುಡಿ, ವೀರಭದ್ರಯ್ಯ ಶಿವ್ಪನಮಠ, ಬಸವರಾಜ ಲಗಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.