ಹಾವೇರಿ

ಮನಮೋಹನ್ ಸಿಂಗ್ ಆ್ಯಕ್ಸಿಡೆಂಟಲ್ ಪಿಎಂ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಏ. 13
ಮನಮೋಹನ್ ಸಿಂಗ್ ಯುಪಿಎ ಸರ್ಕಾರದ ಆಕಸ್ಮಿಕ ಪ್ರಧಾನಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಲೇವಡಿ ಮಾಡಿದರು.
ಹಾವೇರಿಯಲ್ಲಿ ಭಾನುವಾರ ಭಾರತ ವಿಜಯ ರ್ಯಾಲಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮೋದಿ, ಮನಮೋಹನ ಸಿಂಗ್ ಪ್ರಧಾನಿಯಾಗಿದ್ದರೂ ಸೋನಿಯಾ ಗಾಂಧಿ ಸರ್ಕಾರದ ರಿಮೋಟ್ ಕಂಟ್ರೋಲ್ ಆಗಿದ್ದರು. ಸೋನಿಯಾ ಮೇಡಂ ಒಪ್ಪಿದ ಮೇಲೆಯೇ ಎಲ್ಲ ಕಡತಗಳು ಪ್ರಧಾನಿ ಮುಂದೆ ಬರುತ್ತಿದ್ದವು. ಇದನ್ನು ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡಿದ ಅಧಿಕಾರಿಯೇ ಪುಸ್ತಕದಲ್ಲಿ ಹೇಳಿದ್ದಾರೆ. ಪ್ರಧಾನಿಯಾಗುವ ಅವಕಾಶವಿದ್ದರೂ ಸ್ಥಾನ ಬಿಟ್ಟುಕೊಟ್ಟು ಸೋನಿಯಾ ತ್ಯಾಗ ಮಾಡಿರುವುದಾಗಿ ಕಾಂಗ್ರೆಸ್ ಬೊಗಳೆ ಬಿಡುತ್ತಿದೆ. ವಾಹನವೊಂದು ಆ್ಯಕ್ಸಿಡೆಂಟ್ ಆದರೆ ನಾಲ್ಕಾರು ಜನ ಸಾಯಬಹುದು. ಆದರೆ ಆ್ಯಕ್ಸಿಡೆಂಟಲ್ ಪ್ರಧಾನಿಯಿಂದ 120 ಕೋಟಿ ಜನ ಸಾಯುತ್ತಾರೆ. ಇಂಥ ರಿಮೋಟ್ ಕಂಟ್ರೋಲ್ ಪ್ರಧಾನಿ ಹಾಗೂ ಸರ್ಕಾರ ದೇಶಕ್ಕೆ ಅಗತ್ಯವಿಲ್ಲ ಎಂದು ಹೇಳಿದರು.
ದೇಶ ಲೂಟಿ: ಜನ ತನ್ನ ಜೇಬಿನಲ್ಲಿದ್ದಾರೆ ಎಂದು ಕಾಂಗ್ರೆಸ್ ಅಹಂಕಾರದಲ್ಲಿ ಮೆರೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತ ನೀಡಬೇಕಾಗುತ್ತದೆ. ಭ್ರಷ್ಟಾಚಾರದಿಂದ ಗಳಿಸಿದ ಹಣವನ್ನು ಕಾಂಗ್ರೆಸ್ ನಾಯಕರು ಎಲ್ಲಿ ಮುಚ್ಚಿಟ್ಟಿದ್ದಾರೆ ಎಂಬುದನ್ನು ದೇಶದ ಜನತೆಗೆ ತಿಳಿಸಬೇಕು. 10 ವರ್ಷಗಳಲ್ಲಿ ಯುಪಿಎ ಸರ್ಕಾರ ದೇಶವನ್ನು ಲೂಟಿ ಮಾಡಿದೆ. ಅವರ ಮೇಲೆ ಜನ ಭರವಸೆ ಇಡುವಂತೆಯೇ ಇಲ್ಲ. ಮೇ 16ರ ಬಳಿಕ ಕಾಂಗ್ರೆಸ್ ನಾಯಕರು ತಮ್ಮ ಸ್ಥಾನ ಹುಡುಕಿಟ್ಟುಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಯುಪಿಎ ಸರ್ಕಾರ 15 ಅಂಶಗಳ ಕಾರ್ಯಕ್ರಮ ಏನಾಯಿತು ಎಂಬುದನ್ನು ತಿಳಿಸಬೇಕು. ಮುಸ್ಲಿಮರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದೆಯೇ ಹೊರತು ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು.
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಬಡವರ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿಯೇ ಇಲ್ಲ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮಧ್ಯವರ್ತಿಗಳ ಮೂಲಕ ಲಂಚ ನೀಡಿದರಷ್ಟೇ ಉದ್ಯೋಗ ಎಂಬಷ್ಟು ಭ್ರಷ್ಟಾಚಾರ ಮಿತಿಮೀರಿದೆ. ಆದರೆ, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ನೇರವಾಗಿ ಉದ್ಯೋಗ ಸಿಗುವ ಭರವಸೆಯನ್ನು ಕೊಡುತ್ತೇವೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.
ಅಭಿವೃದ್ಧಿ ಎಂದರೆ ಏನೆಂದು ತೋರಿಸುವೆ: ಕಳೆದ ಚುನಾವಣೆಯಲ್ಲಿ 'ಕಾಂಗ್ರೆಸ್ ಕಿ ಹಾಥ್ ಆಮ್ ಆದ್ಮಿ ಕಿ ಸಾಥ್‌' ಎಂದು ಘೋಷಿಸಿತ್ತು. ಈ ಬಾರಿ ಭಾರತ್ ನಿರ್ಮಾಣ ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸುತ್ತಿದೆ. ಆದರೆ ಬೆಲೆಯೇರಿಕೆ ನಿಯಂತ್ರಿಸುವ ಕುರಿತು ತುಟಿ ಬಿಚ್ಚದೆ ಭಾರತ ನಿರ್ನಾಮ ಮಾಡಲು ಹೊರಟಿದ್ದಾರೆ. ಕೃಷಿಕರಿಗೆ ನೀರಾವರಿ, ವಿದ್ಯುತ್ ಸೌಕರ್ಯ ನೀಡುವ ಮೂಲಕ ಆರ್ಥಿಕ ಸ್ವಾವಲಂಬಿಯಾಗಲು ಬಿಜೆಪಿ ಪಣ ತೊಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಖಾತೆಯನ್ನೇ ತೆರೆಯದಂತೆ ಮತದಾರ ನೋಡಿಕೊಳ್ಳಬೇಕು. 300 ಸ್ಥಾನ ಗೆಲ್ಲಿಸಿಕೊಟ್ಟರೆ ಅಭಿವೃದ್ಧಿ ಎಂದರೆ ಹೇಗಿರುತ್ತದೆ ಎಂಬುದನ್ನು ವಿಶ್ವಕ್ಕೇ ತೋರಿಸಿಕೊಡುತ್ತೇನೆ ಎಂದು ನರೇಂದ್ರ ಮೋದಿ ಹೇಳಿದರು.
ಅಭ್ಯರ್ಥಿ ಶಿವಕುಮಾರ ಉದಾಸಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಾದ್ಯಕ್ಷ ಪ್ರಹ್ಲಾದ ಜೋಶಿ, ಪ್ರಮುಖರಾದ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಯು.ಬಿ. ಬಣಕಾರ, ಸೋಮಣ್ಣ ಬೇವಿನಮರದ, ಸುರೇಶಗೌಡ ಪಾಟೀಲ, ನೆಹರು ಓಲೇಕಾರ, ಶಿವರಾಜ ಸಜ್ಜನರ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಜಿ. ಶಿವಣ್ಣ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.