ಹಾವೇರಿ

ಇಂದಿನಿಂದ ವಸತಿ ಶಾಲೆಗಳಿಗೆ ಕೌನ್ಸೆಲಿಂಗ್

Published On :

ಹಾವೇರಿ: ಜಿಲ್ಲೆಯಲ್ಲಿರುವ 12 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹಾಗೂ 6 ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳು ಸೇರಿ ಒಟ್ಟು 18 ವಸತಿ ಶಾಲೆಗಳಲ್ಲಿ 2014-15ನೇ ಸಾಲಿಗೆ 6ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಅರ್ಹ ವಿದ್ಯಾರ್ಥಿಗಳಿಗೆ ಏ. 25 ಹಾಗೂ 26ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ವಿಕಲಚೇತನ, ವಿಶೇಷ ವರ್ಗ, ಪರಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಏ. 25ರಂದು ಮತ್ತು ಪ್ರವರ್ಗ-1, ಪ್ರವರ್ಗ-2(ಎ), ಪ್ರವರ್ಗ-2(ಬಿ), ಪ್ರವರ್ಗ-3(ಎ) ಮತ್ತು ಪ್ರವರ್ಗ-3(ಬಿ) ವಿದ್ಯಾರ್ಥಿಗಳಿಗೆ ಏ. 26ರಂದು ಕೌನ್ಸೆಲಿಂಗ್ ನಡೆಸಲಾಗುವುದು. ಅರ್ಹ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರದ ಮೂಲ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಮೂಲ ಪ್ರತಿ, 5ನೇ ತರಗತಿ ಅಂಕಪಟ್ಟಿ ಮೂಲ ಪ್ರತಿ ಸೇರಿದಂತೆ ಅವಶ್ಯಕ ದಾಖಲಾತಿಗಳೊಂದಿಗೆ ಸಮಯಕ್ಕೆ ಸರಿಯಾಗಿ ಆಯಾ ದಿನಾಂಕಗಳಂದು ಕೌನ್ಸೆಲಿಂಗ್ಗೆ ಹಾಜರಾಗಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ವಿಶೇಷ ವರ್ಗಕ್ಕೆ ಸಂಬಂಧಿಸಿದ ಅಂಗವಿಕಲರು ಮತ್ತು ವಿಧವೆಯರ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ಅನಾಥ ಮಕ್ಕಳು, ಅಲೆಮಾರಿ, ದೇವದಾಸಿಯರ ಮಕ್ಕಳು, ಪ್ರಮಾಣಿಕೃತ ಬಾಲ ಕಾರ್ಮಿಕರು ತಹಸೀಲ್ದಾರರು ಅಥವಾ ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರದ ಮೂಲ ಪ್ರತಿಯೊಂದಿಗೆ ಕೌನ್ಸೆಲಿಂಗ್ಗೆ ಹಾಜರಾಗಬೇಕು. ತಪ್ಪಿದಲ್ಲಿ ಅರ್ಹತೆಯ ಮೇಲೆ ಬೇರೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದೆಂದು ಅವರು ಸ್ಪಷ್ಟಪಡಿಸಿದ್ದಾರೆ.
ವಸತಿ ಶಾಲೆಗಳ ವಿವರ: ಮಾರನಬೀಡ, ಹಳ್ಳಿಬೈಲ್, ಶಿಡೇನೂರ, ಗಂಜಿಗಟ್ಟಿಮಠ, ಹಿರೇಕೆರೂರು, ಚಿಕ್ಕೇರೂರು, ಸವಣೂರು, ಮಾಕನೂರು, ಗಂಜಿಗಟ್ಟಿ, ಯಳವಟ್ಟಿ, ಹಾವೇರಿ (ಅಲ್ಪಸಂಖ್ಯಾತರ), ನೆಗಳೂರು ಸೇರಿದಂತೆ ಒಟ್ಟು 12 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು.  ಸವಣೂರು, ಶಿಗ್ಗಾಂವ, ಹಾವೇರಿ, ಅಕ್ಕಿ ಆಲೂರು, ಹಿರೇಕೆರೂರು ಹಾಗೂ ಬ್ಯಾಡಗಿಯಲ್ಲಿರುವ 6 ಕಿತ್ತೂರ ರಾಣಿ ಚೆನ್ನಮ್ಮ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ.
ಹಾವು ಕಚ್ಚಿ ಓರ್ವ ಸಾವು
ಹಾನಗಲ್ಲ: ತಾಲೂಕಿನ ಅರಳೇಶ್ವರ ಗ್ರಾಮದ ರೈತ ಶೇಖರಗೌಡ ಪಾಟೀಲ (75) ಹಾವು ಕಚ್ಚಿ ಮೃತಪಟ್ಟಿದ್ದಾನೆ. ಗುರುವಾರ ಮಧ್ಯಾಹ್ನ 4 ಗಂಟೆಯ ಹೊತ್ತಿಗೆ ತಮ್ಮ ಜಮೀನಿನಲ್ಲಿ ಆಕಳನ್ನು ಮೇಯಿಸುತ್ತಿದ್ದಾಗ ಹೊಲದಲ್ಲಿ ಬಣವೆಯ ಸಮೀಪ ಬೆಳೆದ ಹುಲ್ಲನ್ನು ಕಿತ್ತು ಆಕಳಿಗೆ ಹಾಕುವಾಗ ಹುಲ್ಲಿನ ಪೊದೆಯಲ್ಲಿದ್ದ ಹಾವು ಕಚ್ಚಿದೆ. ಘಟನೆಯ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.