ಬ್ಯಾಡಗಿ ಉಪ ತಹಸೀಲ್ದಾರ್ ಮನೆ ಮೇಲೆ ಲೋಕಾ ದಾಳಿ
ಬ್ಯಾಡಗಿ: ಸ್ಥಳೀಯ ತಹಸೀಲ್ದಾರ್ ಕಚೇರಿಯ ಉಪತಹಸೀಲ್ದಾರ್ ಬಸವರಾಜ ಕೊಪ್ಪದ ಅವರ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು, ರು. 71 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಆಸ್ತಿಯನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಕುರಿತು ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ನಾಗರಾಜ ಅಂಬ್ಲಿ ಅವರ ನೇತೃತ್ವದಲ್ಲಿ 16 ಅಧಿಕಾರಿಗಳ ತಂಡವು ದಾಳಿ ನಡೆಸಿತು. ಈ ವೇಳೆ 4 ಕೆಜಿ ಬೆಳ್ಳಿ, 522 ಗ್ರಾಂ ಬಂಗಾರ, ರು. 57 ಸಾವಿರ ನಗದು ಸೇರಿ ಒಟ್ಟು ರು. 71 ಲಕ್ಷ ಮೌಲ್ಯದ ಆಸ್ತಿಪಾಸ್ತಿ ದಾಖಲೆ ವಶವಾಗಿದೆ. ಒಂದು ಟಿಪ್ಪರ್, ಕಾರು, ಮೂರು ಬೈಕ್, ಪಟ್ಟಣದ ವಿದ್ಯಾನಗರದಲ್ಲಿ ಎರಡು ಮನೆ, ರೇಲ್ವೆ ನಿಲ್ದಾಣ ರಸ್ತೆಯಲ್ಲಿ ಜಮೀನು ಹಾಗೂ ನಿವೇಶನ ಹೊಂದಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಅವಿತಿಟ್ಟುಕೊಂಡ ಉಪತಹಸೀಲ್ದಾರ್: ಲೋಕಾ ತಂಡ ಮನೆ ಬಾಗಿಲು ಬಡಿದಾಗ ಬೆಳಗ್ಗೆ 6 ಗಂಟೆ. ನಿದ್ದೆಗಣ್ಣಿನಲ್ಲೇ ಬಾಗಿಲು ತೆರೆದ ಬಸವರಾಜ ಕೊಪ್ಪದ ಲೋಕಾಯಕ್ತರನ್ನು ಕಂಡು ನಡುಗಿದರು. ಕೋಣೆಯೊಂದರಲ್ಲಿ ಅವಿತಿಟ್ಟುಕೊಂಡರು. ತನಿಖೆಗೆ ಸಹಕರಿಸದಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದಾಗ ಹೊರಬಂದರು.
ಕಚೇರಿಯಲ್ಲಿ ಪರಿಶೀಲನೆ: ಲೋಕಾಯುಕ್ತರ ತಂಡ ತಹಸೀಲ್ದಾರ್ ಕಚೇರಿಯ ಕಬೋರ್ಡ್ಗಳನ್ನೂ ಪರಿಶೀಲಿಸಿತು. ತಹಸೀಲ್ದಾರ್ ಶಿವಶಂಕರ ನಾಯಕ್ ಮೂಲಕ ಕಚೇರಿ ಬೀಗ ತೆಗೆಸಿದ ತನಿಖಾ ತಂಡ, ಕೆಲ ಪಾಸ್ ಪುಸ್ತಕ, ಇತರ ದಾಖಲೆ ವಶಕ್ಕೆ ಪಡೆದಿದೆ.
ಎಫ್ಐಆರ್ ಸಾಧ್ಯತೆ: ಲೋಕಾ ತಂಡ ಶುಕ್ರವಾರ ರಾತ್ರಿ, ಶನಿವಾರವೂ ತನಿಖೆ ಮುಂದುವರಿಸಿ, ಎಫ್ಐಆರ್ ದಾಖಲಿಸುವ ಸಾಧ್ಯತೆ ಇದೆ ಎಂದು ಲೋಕಾಯುಕ್ತ ಡಿವೈಎಸ್ಪಿ ನಾಗರಾಜ ಅಂಬ್ಲಿ ಹೇಳಿದ್ದಾರೆ.
ಇನ್ಸ್ಪೆಕ್ಟರ್ ಚಿದಾನಂದ, ಮೃತ್ಯುಂಜಯ, ಸಿಬ್ಬಂದಿ ಎಂ.ಡಿ. ಹಿರೇಮಠ, ಎಚ್.ಎ. ಬೊಮ್ಮಕ್ಕನವರ, ಕೆ.ಎಂ. ಹಿರೇಮಠ, ಪಿ.ಆರ್. ಭಾವಿಕಟ್ಟಿ, ಎಸ್.ಡಿ. ಸಾಲಗುಂದಿ ದಾಳಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

