ಹಾವೇರಿ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

Published On :

ಹಿರೇಕೆರೂರು:  ಪಟ್ಟಣದ ಬಸವೇಶ್ವರ ನಗರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಮಂದಗತಿಯಲ್ಲಿ ಸಾಗಿದ ರಸ್ತೆ ಕಾಮಗಾರಿಗಳಿಂದ ಸಮಸ್ಯೆಯಾಗುತ್ತಿದ್ದು, ಇದರಿಂದ ಪಟ್ಟಣದ ಸಾರ್ವಜನಿಕರು ಆಕ್ರೋಶಗೊಂಡು ಸಂಬಂಧ ಪಟ್ಟ ಇಲಾಖೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
11ನೇ ವಾರ್ಡ್‌ನಲ್ಲಿ ಡಾಂಬರೀಕರಣಕ್ಕಾಗಿ 2 ತಿಂಗಳಿನಿಂದ ಹಳೆಯ ರಸ್ತೆಗಳನ್ನು ಸಂಪೂರ್ಣ ಕಿತ್ತು, ಅದರ ಮೇಲೆ ಕಡಿ ಹಾಕಿ ಹಾಗೆ ಬಿಟ್ಟಿದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಕಾಮಗಾರಿಗೆ 2 ತಿಂಗಳ ಹಿಂದೆಯೇ ಚಾಲನೆ ನೀಡಲಾಗಿದೆ. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್ ಇತ್ತಕಡೆ ಗಮನಹರಿಸಿಲ್ಲ. ಇದಕ್ಕೂ ಮೊದಲು ಸಾರ್ವಜನಿಕರು ಓಡಾಡಲು ಮತ್ತು ವಾಹನಗಳು ಸಂಚರಿಸಲು ತಕ್ಕ ಮಟ್ಟಿಗೆ ರಸ್ತೆಗಳು ಸರಿಯಾಗಿದ್ದವು. ಆದರೆ, ನಿರ್ಮಾಣದ ನೆಪದಲ್ಲಿ ರಸ್ತೆಗಳನ್ನು ಕೆದರಿದ ಪರಿಣಾಮ ಅನುಕೂಲಕ್ಕಿಂತ ಅನಾನುಕೂಲತೆಯೇ ಹೆಚ್ಚಾಗಿದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ತೋರಣಗಟ್ಟಿ ಮಾತನಾಡಿ, ಪ್ರಾರಂಭವಾದ ಒಂದು ತಿಂಗಳು ಕಾಮಗಾರಿಗಳು ವೇಗದಲ್ಲಿ ಸಾಗಿ ನಂತರ ಏಕಾಏಕಿ ಸ್ಥಗಿತಗೊಂಡಿರುವುದು ಯಾವ ಕಾರಣಕ್ಕೆ ಎಂದು ತಿಳಿಯುತ್ತಿಲ್ಲ. ಇದೇ ರಸ್ತೆಯಲ್ಲಿ ಶಾಲಾ ವಾಹನಗಳು ಮತ್ತು ಸಾರ್ವಜನಿಕರು ಓಡಾಡುತ್ತಿದ್ದಾರೆ. ಆದರೆ, ನಿತ್ಯ ಧೂಳಿನ ಸಮಸ್ಯೆಯಿಂದಾಗಿ ವೃದ್ಧರು, ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿರುವುದು ಕಂಡು ಬರುತ್ತಿದೆ. ವಾಹನ ಸವಾರರು ರಸ್ತೆಯಲ್ಲಿ ಸಾಗುವಾಗ ಆಯತಪ್ಪಿ ಬಿದ್ದು ಗಾಯಗೊಂಡ ಘಟನೆಗಳು ಸಂಭವಿಸಿವೆ. ಇನ್ನೊಂದು ವಿಷಯವೆಂದರೆ ಈವರೆಗೂ ರಸ್ತೆ ಕಾಮಗಾರಿಗೆ ವರ್ಕ್‌ಕಾರ್ಡ್ ಸಿಕ್ಕಿರುವುದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಈ ವಿಷಯದ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿರುವುದಿಲ್ಲ. ತಕ್ಷಣವೇ ಇದರ ಬಗ್ಗೆ ಗಮನ ಹರಿಸಿ ರಸ್ತೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೂಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.
ಇಲ್ಲವಾದಲ್ಲಿ ಬೀದಿಗಿಳಿದು ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು. ಈ ಸಂಧರ್ಭದಲ್ಲಿ ಅಕ್ಬರ್ ಮನ್ನಂಗಿ, ಜಯಂತ ಶೆಟ್ಟಿ, ಅಶೋಕ ಮೇದರ, ರವಿ ನಾಯ್ಕರ, ಸಿದ್ದು ಮೇಣಸಿನಹಾಳ, ರಾಜು ಹುಬ್ಬಳ್ಳಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.