ವಿದೇಶಕ್ಕೆ ಹಾರುತ್ತಿವೆ ಕರಾಟೆ ಹಕ್ಕಿಗಳು
ಶಿವಾನಂದ ಮಲ್ಲನಗೌಡರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 27
ವಿಶ್ವ ಚಾಂಪಿಯನ್ ಪಟ್ಟದ ನಿರೀಕ್ಷೆಯಲ್ಲಿ ದೊಡ್ಡ ಕನಸಿನೊಂದಿಗೆ ಇಲ್ಲಿನ ಕರಾಟೆ ಹಕ್ಕಿಗಳು ವಿದೇಶಕ್ಕೆ ಹಾರುತ್ತಿವೆ.
ಮೆಣಸಿನಕಾಯಿಗೆ ಹೆಸರಾದ ಬ್ಯಾಡಗಿಯಲ್ಲಿ ಸಾಕಷ್ಟು ಕ್ರೀಡಾಪಟುಗಳೂ ಅರಳಿದ್ದಾರೆ. ಈಗ ಪಟ್ಟಣದ ಮೂವರು ಕರಾಟೆ ಪಟುಗಳು 18 ವರ್ಷದೊಳಗಿನವರ ಕರಾಟೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ಮಲೇಷ್ಯಾಕ್ಕೆ ಹೊರಟು ನಿಂತಿದ್ದಾರೆ.
ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಸ್ಪರ್ಧಿಸಲು ನಾರಾಯಣ್, ಕಟಾ ವಿಭಾಗದ 18 ವರ್ಷದೊಳಗಿನವರ ಸ್ಪರ್ಧೆಗೆ ಮಹೇಶ್ ಹಾಗೂ ಅವರ ಸಹೋದರಿ ನಯನಾ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಮೇ 1ರಿಂದ 4ರ ವರೆಗೆ ಮಲೇಷ್ಯಾದಲ್ಲಿ ಈ ಕ್ರೀಡಾಕೂಟ ನಡೆಯಲಿದೆ.
ಹಿನ್ನೆಲೆ: ನಯನಾ ಹಾಗೂ ಮಹೇಶ್ಗೆ ಕುಟುಂಬದಲ್ಲಿ ಯಾವುದೇ ಸಾಧಕರ ಹಿನ್ನೆಲೆಯಿಲ್ಲ. ಮೆಣಸಿನಕಾಯಿ ವ್ಯಾಪಾರಿ ಬಸನಗೌಡ ಮತ್ತು ಸುಧಾ ಹೊಸ್ಮನಿ ಅವರ ಈ ಇಬ್ಬರು ಮಕ್ಕಳು ಚಿಕ್ಕಂದಿನಿಂದಲೇ ಕರಾಟೆ ಕರಗತ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಬ್ಯಾಡಗಿ ಚಿಲ್ಲೀಸ್ ಕ್ಲಬ್ನಲ್ಲಿ 2003ರಿಂದ ಕರಾಟೆ ತರಬೇತಿ ಪಡೆಯಲಾರಂಭಿಸಿದ ಇವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಸಹೋದರಿ ನಯನಾ 2008ರಲ್ಲಿ ಕೋರಿಯೋ, ಗುಜೋರಿಯೋ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಫಸ್ಟ್ ಡಿಗ್ರಿ ಬ್ಲಾಕ್ಬೆಲ್ಟ್, 2013ರಲ್ಲಿ ಜರುಗಿದ ಜಪಾನ್ ನರಿಯೋಕಾನ್ ಗಜೋರಿಯೋ ಪರೀಕ್ಷೆಯಲ್ಲಿ ಸೆಕೆಂಡ್ ಡಿಗ್ರಿ ಬ್ಲಾಕ್ ಬೆಲ್ಟ್ ಹಾಗೂ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಚೆನ್ನೈ ನಲ್ಲಿ ನಡೆದ ಪರೀಕ್ಷೆಯಲ್ಲಿ ಫಸ್ಟ್ ಡಿಗ್ರಿ ಬ್ಲಾಕ್ಬೆಲ್ಟ್ ಪಡೆದಿದ್ದಾಳೆ.
ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಬ್ಯಾಡಗಿಯಲ್ಲೇ ಪೂರೈಸಿರುವ ನಯನಾ ಸದ್ಯ ಜೈನ್ ವಿ.ವಿ. ಗ್ಲೋಬಲ್ ತಾಂತ್ರಿಕ ಕಾಲೇಜಿನಲ್ಲಿ ಎಂಜಿನಿಯರಿಗ್ ವಿದ್ಯಾರ್ಥಿ. ಜಪಾನಿನ ಹಿರೋಮೂ ಮತ್ತು ಹಿನೋ ಜಾವಾ ಇವರ ಕಠಿಣ ತರಬೇತಿ ದಿನಗಳನ್ನು ಮೆಲುಕು ಹಾಕುವ ನಯನಾ, ಅಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎನ್ನುತ್ತಾಳೆ.
ಅಕ್ಕನ ಸಾಧನೆಯ ಹಾದಿ ಹಿಡಿದು ಮಹೇಶ್ 2006ರಲ್ಲಿ ಬೋಡೋಕಾನ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಫಸ್ಟ್ ಡಿಗ್ರಿ ಬ್ಲಾಕ್ಬೆಲ್ಟ್, 2008 ಮತ್ತು 2013ರಲ್ಲಿ ಜರುಗಿದ ಜಪಾನ್ ಕೋನರಿಯೋ ಕಾನ್ ಗಜೋರಿಯೋ ಪರೀಕ್ಷೆಯಲ್ಲಿ ಸೆಕೆಂಡ್ ಡಿಗ್ರಿ ಬ್ಲಾಕ್ಬೆಲ್ಟ್ ಹಾಗೂ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಚೆನ್ನೈನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಫಸ್ಟ್ ಡಿಗ್ರಿ ಬ್ಲಾಕ್ಬೆಲ್ಟ್ ಪಡೆದಿದ್ದಾನೆ.
ಪ್ರಶಸ್ತಿಯ ಬೆನ್ನೇರಿ: ಶಿಕ್ಷಕ ಕೃಷ್ಣಪ್ಪ ಪೂಜಾರ ಹಾಗೂ ಕಮಲಮ್ಮ ದಂಪತಿಯ ಪಂಚಮ ಪುತ್ರ ನಾರಾಯಣ ತಂದೆ ಇಚ್ಛೆಯಂತೆ ಶಿಕ್ಷಕನಾಗಿ ಶಾಲೆಯಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ, ಕರಾಟೆ ಆಯ್ಕೆ ಮಾಡಿಕೊಂಡ ನಾರಾಯಣ 1999ರ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದರು. ಆಮೇಲೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಸದ್ಯ ರಾಜ್ಯ ಗೊಜೋರಿಯೋ ಕರಾಟೆ ಸಂಸ್ಥೆಯ ಕಾರ್ಯದರ್ಶಿಯಾಗಿರುವ ನಾರಾಯಣ, ನಾಲ್ಕನೇ ಡಿಗ್ರಿ ಬ್ಲಾಕ್ ಬೆಲ್ಟ್ಗಾಗಿ ಸೆಣಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

