ಹಾವೇರಿ

ಛಲದ ಪ್ರತೀಕ ಹೆಸ್ಕಾಂ ಕಾರ್ಮಿಕ ಸ್ಮಾರಕ

Published On :

ಹಾವೇರಿ: ಜಾಗತೀಕರಣದ ಬಿರುಗಾಳಿಯಲ್ಲಿ ಕಾರ್ಮಿಕ ಚಳುವಳಿಯ ಉದ್ಘೋಷಗಳಾದ ಧಿಕ್ಕಾರ ಜೈಕಾರಗಳು ಕರಗಿ ಹೋಗಿವೆ. ಮತ್ತೊಮ್ಮೆ ದುಡಿವ ವರ್ಗಕ್ಕೆ ಹುಮ್ಮಸ್ಸು ತುಂಬುವ ಹೋರಾಟಗಳು ತುಂಬಾ ಅಗತ್ಯವಾಗಿವೆ. ತಮ್ಮೆಲ್ಲ ನೋವು, ಸಂಕಟ ಹೇಳಿಕೊಳ್ಳುವ ಅವಕಾಶವಿಲ್ಲದೇ ಕಾರ್ಮಿಕ ಕೇವಲ ದುಡಿಯುವ ಯಂತ್ರವಾಗಿರುವ ಈ ದಿನಗಳಲ್ಲಿ ಅವನ ಚೈತನ್ಯಕ್ಕೆ ಹೊಳಪು ನೀಡುವ ಅಗತ್ಯವಿದೆ. ಇಂಥ ಮಾತುಗಳಿಗೆ ಪುಷ್ಟಿ ಕೊಡುವಂತೆ ಅಪರೂಪದ ಕಾರ್ಮಿಕ ಸ್ಮಾರಕ ಹಾವೇರಿಯ ಹೆಸ್ಕಾಂ ಆವರಣದಲ್ಲಿದೆ.
2001ರಲ್ಲಿ ಸುಮಾರು ಒಂದೂವರೆ ಲಕ್ಷ ರುಪಾಯಿ ಅಂದಾಜು ವೆಚ್ಚದಲ್ಲಿ ಕಾರ್ಮಿಕ ಸ್ಮಾರಕ ನಿರ್ಮಾಣವಾಯಿತು. ಇತರ ಸ್ಮಾರಕಗಳಿಗಿಂತ ತುಂಬ ಭಿನ್ನವಾದದ್ದು. ಇಲ್ಲಿ ಯಾವ ನಾಯಕರ ಮೂರ್ತಿಯೂ ಇಲ್ಲ. ಪ್ರಭುತ್ವದ ಹೆಗ್ಗುರುತು ಸಾರುವ ಸಂಕೇತವಿಲ್ಲ. ಇಲ್ಲಿರುವುದು ಅಪ್ಪಟ ಕಾರ್ಮಿಕನ ಕುರುಹು. ಒಂದು ಎತ್ತಿದ ಕೈ, ಆ ಕೈಯ ಬಿಗಿಮುಷ್ಠಿಯಲ್ಲಿ ಸ್ಪಾನರ್ ಹಾಗೂ ಪಕ್ಕಡ್ ಸಹ ಇದೆ.
ಮೂಲ ಕೆಇಬಿ ಎಂಬ ಒಂದೇ ನದಿ ಈಗ ಹಲವು ಉಪನದಿಗಳಾಗಿ ಹರಿಯುತ್ತಿವೆ. ಹೆಸ್ಕಾಂ, ಜೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಎಸ್ಕಾಂ, ಕೆಪಿಟಿಸಿಎಲ್ ಹೀಗೆ ಹಲವು ಹರಿವು ಪಡೆದಿದೆ. ಇಲಾಖೆ ಮೂಲ ಹೆಸರು ಬದಲಾಗಿದ್ದರೂ ಕಂಬ, ತಂತಿ, ಮೀಟರ್, ವೈರ್, ಬಲ್ಬು ಇಷ್ಟೇ ಅಲ್ಲ, ಹಸಿರು ಬಟ್ಟೆಯ ಬುನಾದಿ ಕಾರ್ಮಿಕ, ಲೈನ್‌ಮನ್ ಮಾತ್ರ ಬದಲಾಗಿಲ್ಲ. ವಿದ್ಯುತ್ ಎಂಬ ಅಗೋಚರ ಶಕ್ತಿಯ ಸಂಗಡ ಸದಾ ಸೆಣಸಾಡುವ ಈ ಲೈನ್‌ಮೆನ್ ದುಡಿಯುವ ವರ್ಗದ ಅಪ್ಪಟ ಪ್ರತಿನಿಧಿ.
ಈತನ ಕೈಯಲ್ಲಿ ಸದಾ ಒಂದು ಪಾನಾ ಹಾಗೂ ಪಕ್ಕಡ್ ಇದ್ದೇ ಇರುತ್ತದೆ. ಇಂಥ ಪಾನಾ ಪಕ್ಕಡ್ ಹಾವೇರಿಯಲ್ಲಿರುವ ಕಾರ್ಮಿಕ ಸ್ಮಾರಕದ ಸಂಕೇತ.
ಆಕರ್ಷಣೆಯ ಕೇಂದ್ರ: ನೌಕರ ಸಂಘದ ಮಾಜಿ ರಾಜಾಧ್ಯಕ್ಷ ಎನ್. ಜಯರಾಜು, ಸಿ.ಎ. ಕೂಡಲಮಠ, ಈಗಿನ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಮುದಕಣ್ಣನವರ ಇತರರು ಈ ಸ್ಮಾರಕ ನಿರ್ಮಾಣದ ಬೆನ್ನಿಗೆ ನಿಂತು ಕಟ್ಟಿಸಿದ್ದು ಈಗ ಇತಿಹಾಸ. ಇದೊಂದು ಆಕರ್ಷಣೆ ಕೇಂದ್ರವೂ ಆಗಿದೆ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಕಾರ್ಮಿಕ ಸ್ಮಾರಕ ಎಂಬ ಹೆಗ್ಗಳಿಗೆ ಇದಕ್ಕಿದೆ.
ಕಾರ್ಮಿಕ ಸ್ಮಾರಕದ ಹುಟ್ಟು ಹಬ್ಬ: ಮೇ 1ನೇ ದಿನ ಒಂದು ರೀತಿ ಈ ಕಾರ್ಮಿಕ ಸ್ಮಾರಕದ ಹುಟ್ಟು ಹಬ್ಬ. ಪ್ರತಿ ವಿಶ್ವ ಕಾರ್ಮಿಕ ದಿನಾಚರಣೆಯಂದು ಶೃಂಗಾರಗೊಂಡು ಮೆರೆಯುತ್ತದೆ. ಅಗಲಿದ ಕಾರ್ಮಿಕರ ನೆನಪಿನ ದಿನವೂ ಇದಾಗಿರುತ್ತದೆ. ಈ ದಿಶೆಯಲ್ಲಿ ಹಾವೇರಿ ಕವಿಪ್ರನಿ ನೌಕರರ ಸಂಘದ ಸ್ಥಳೀಯ ಸಮಿತಿ ಹಲವು ಅರ್ಥಪೂರ್ಣ ಕಾರ್ಯಕ್ರಮ ಹಾಕಿಕೊಂಡು ಕಾರ್ಮಿಕ ದಿನಾಚರಣೆ ಆಚರಿಸುತ್ತಿರುವುದು ವಿಶೇಷ.
ಈ ಸಲ ಮೂವರು ಹಿರಿಯ ಕಾರ್ಮಿಕರಾದ ಸಿ.ಬಿ. ಇಟಗಿ, ಹಾನಗಲ್ಲಿನ ಎಫ್.ಎಂ. ಕಾಕಡ ಹಾಗೂ ಹಾವೇರಿಯ ಚಂದ್ರಪ್ಪ ಮ್ಯಾಗೇರಿ ಅವರಿಗೆ ಕಾರ್ಮಿಕ ಸನ್ಮಾನ ನೀಡುತ್ತಿದೆ. ಪ್ರತಿ ವರ್ಷವೂ ವಿಶೇಷವಾದ ಕಾರ್ಮಿಕ ಕವಿಗೋಷ್ಠಿ ಇಲ್ಲಿ ನಡೆಯುತ್ತದೆ. ಇಲಾಖೆಯೊಳಗಿನ ಕವಿಗಳಲ್ಲದೇ ನಾಡಿನ ಅನೇಕ ಹಿರಿಕಿರಿ ಕವಿಗಳು, ಕಾರ್ಮಿಕರ ಒಗ್ಗಟ್ಟು, ಅವರ ನೋವು ನಲಿವು ಕುರಿತು ಕಾವ್ಯ ಬರೆದುಕೊಂಡು ಬಂದು ಓದುತ್ತಾರೆ. ಇದೊಂದು ರೀತಿಯ ಜನಪರ ಕಾವ್ಯ ವಾಚನ. ದುಡಿಯುವ ವರ್ಗದ ಹತ್ತಿಕ್ಕಿದ ಭಾವನೆಗಳಿಗೆ ಅಕ್ಷರದ ರೂಪ ಕೊಡುವ ಕೆಲಸ.
ಹಾವೇರಿ ವೃತ್ತದ 1200 ಜನ ಕೆಇಬಿ ಕಾರ್ಮಿಕರ ಒಗ್ಗಟ್ಟಿನ ಸಂಕೇತ ಈ ಕಾರ್ಮಿಕ ಸ್ಮಾರಕ. ಹಲವು ಹೋರಾಟದ ಛಲದ ಪ್ರತೀಕವಾಗಿ ನಿಂತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.