ಹಾವೇರಿ

ಬಗರಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹ

Published On :

ಹಾವೇರಿ: ಬಾಲಸುಬ್ರಮಣಿಯನ್ ಸಮಿತಿ ವರದಿ ಒಪ್ಪಿಕೊಳ್ಳುವುದು. ಎಲ್ಲ ಜಾತಿಯ ಬಡ ರೈತರ ಬಗರಹುಕುಂ ಸಾಗುವಳಿ ಭೂಮಿ ಸಕ್ರಮಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಶುಕ್ರವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಅಶೋಕ ಮರೆಣ್ಣನವರ ಮಾತನಾಡಿ, ಕೆಲವೆ ವ್ಯಕ್ತಿಗಳ ಕೈಯಲ್ಲಿ ಕ್ರೋಡೀಕರಣಗೊಂಡ ದೇಶದ ಭೂ ಸಂಪತ್ತನ್ನು ಎಲ್ಲ ಬಡವರಿಗೆ ಸಮಾನವಾಗಿ ಹಂಚಿಕೆ ಮಾಡುವ ಕಾನೂನು ಜಾರಿಗೆ ತರುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ದೇಶದಲ್ಲಿ ಶೇ. 33ರಷ್ಟು ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ಶೇ. 44ರಷ್ಟು ಸಣ್ಣ ಹಿಡುವಳಿದಾರರು ಇದ್ದಾರೆ. ಆದರೆ, ಇವರ ಆಶಯಗಳಿಗೆ ಈವರೆಗೂ ಸರ್ಕಾರ ಸ್ಪಂದಿಸಿಲ್ಲ. 60 ವರ್ಷಗಳಿಂದ ದೇಶವನ್ನು ಆಳುತ್ತಿರುವ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸಂವಿಧಾನದಲ್ಲಿರುವ ಏಕತೆ, ಸಮಗ್ರತೆ ಹಾಗೂ ಸಮಾನತೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು.
ಸ್ವತಂತ್ರ ಭಾರತದಲ್ಲಿ ಕೃಷಿ ಕಾರ್ಮಿಕನಿಗೆ ಭೂಮಾಲೀಕನಾಗುವ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಾನೂನಿನ ತೊಡಕು, ನ್ಯಾಯ ವಿಳಂಬ ಭ್ರಷ್ಟ ಆಡಳಿತ ವ್ಯವಸ್ಥೆ ಹಾಗೂ ಸ್ವಾರ್ಥ ರಾಜಕಾರಣದಿಂದ ಆಸ್ತಿಯ ಸಮಾನ ಹಂಚಿಕೆ ಕಾಯ್ದೆ ಈವರೆಗೂ ನೆನೆಗುದಿಗೆ ಬಿದ್ದಿದೆ ಎಂದು ತಿಳಿಸಿದರು.
ಬ್ಯಾಡಗಿಯ ರೈತ ಮುಖಂಡ ರುದ್ರಯ್ಯ ಸಾಲಿಮಠ ಮಾತನಾಡಿ, 2009ರಲ್ಲಿ ಸರ್ಕಾರಿ ಭೂಮಿಯನ್ನು ರಕ್ಷಿಸಲು ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ 2011ರಲ್ಲಿ ಸುಮಾರು 12ರಿಂದ 15 ಲಕ್ಷ ಎಕರೆ ಸರ್ಕಾರಿ ಜಮೀನನ್ನು ಭೂ ಮಾಫಿಯಾಗಳು ಅಕ್ರಮವಾಗಿ ಹಿಡಿದಿಟ್ಟುಕೊಂಡ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈ ವರದಿಯಂತೆ ಸರ್ಕಾರ ಭೂ ಮಾಫಿಯಾಗಳಿಂದ ಜಮೀನನ್ನು ವಶಪಡಿಸಿಕೊಂಡು ಎಲ್ಲ ಜಾತಿಯ ಬಡ ರೈತರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ವಿವಿಧ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಮೇಶ ಪಾಟೀಲ, ಲಕ್ಷ್ಮಣ ಗಾಣಿಗೇರ, ವಿಜಯಕುಮಾರ ವಿರಕ್ತಮಠ, ಅನಿಲಕುಮಾರ ಗಾಳಜಿ, ಗುಡ್ಡಪ್ಪ ಹಂಚಿನಮನಿ, ನೀಲಪ್ಪ ಸೋಮಣ್ಣನವರ, ಯಲ್ಲಪ್ಪ ಮಾಗೋಡ, ನಾಗರಾಜ ಚಿಕ್ಕನಗೌಡ್ರ, ಕರಬಸಪ್ಪ ಚಿಕ್ಕನಗೌಡ್ರ, ನಿಂಗಪ್ಪ ಬಾಬಾಪುರ, ನೀಲಪ್ಪ ಬಾಬಾಪುರ, ಶಿವಪ್ಪ ಬಾಬಾಪುರ, ನಿಂಗಪ್ಪ ಹಲಗೇರಿ, ಶಿವಪುತ್ರಪ್ಪ ಯತ್ತಿನಮನಿ, ಶಿವಪ್ಪ ದೇವನೂರ, ಈರಪ್ಪ ಕೊಪ್ಪದ, ಶಂಕ್ರಪ್ಪ ಕೊಪ್ಪದ, ಶಿವಪ್ಪ ನಂದಿಹಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.