ವರದಾ ನದಿ ನೀರು ತರುವ ಯೋಜನೆಗೆ ಶೀಘ್ರ ಚಾಲನೆ
ಹಾನಗಲ್ಲ: ಹಾನಗಲ್ಲ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಗೆ ಗೊಂದಿ ಹತ್ತಿರದ ವರದಾ ನದಿಯಿಂದ ನೀರು ತರುವ ಯೋಜನೆಗೆ ಸರ್ಕಾರದ ಅನುಮೋದನೆ ಸಿಕ್ಕಿದ್ದು, ಶೀಘ್ರ ರು. 39 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗುವುದು. ಕಾಮಗಾರಿ ಸ್ಥಗಿತಗೊಂಡ ಹಾನಗಲ್ಲ ಬಸ್ ನಿಲ್ದಾಣದ ಕಾಮಗಾರಿ ಒಂದೆರೆಡು ದಿನಗಳಲ್ಲಿ ಆರಂಭವಾಗುವುದು ಎಂದು ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ ಹೇಳಿದರು.
ಹಾನಗಲ್ಲನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾನಗಲ್ಲ ನಗರಕ್ಕೆ ಕುಡಿಯುವ ನೀರಿಗಾಗಿ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಒದಗಿಸಲು ಆಗುತ್ತಿರುವ ಸಮಸ್ಯೆಯನ್ನು ಈ ಮೂಲಕ ಪರಿಹರಿಸಲಾಗುತ್ತಿದೆ. ಅತಿ ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಅಲ್ಲದೆ ಹಾನಗಲ್ಲ ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಈಗ ಮರು ಟೆಂಡರ್ ಆಗಿ ರು. 2.17 ಕೋಟಿ ವೆಚ್ಚದ ಕಾಮಗಾರಿ ಒಂದೆರೆಡು ದಿನಗಳಲ್ಲಿ ಆರಂಭವಾಗಲಿದೆ. ನೀರಾವರಿ ನಿಗಮದಿಂದ ಹಾನಗಲ್ಲ ತಾಲೂಕಿನ 110 ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನವಸತಿ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಾಗಿ ರು. 6 ಕೋಟಿ, ಬಿಡುಗಡೆಯಾಗಿದೆ ಎಂದು ತಿಳಿಸಿದರು. ಪಡಿತರ ನ್ಯಾಯಬೆಲೆ ಅಂಗಡಿಗಳ ನಿರ್ವಹಣೆಗಾಗಿ ಜಾಗೃತಿ ಸಮಿತಿಯೊಂದನ್ನು ರಚಿಸಲಾಗುವುದು. ಪ್ರತಿ ಪಡಿತರ ಅಂಗಡಿಗೂ ಒಂದು ಜಾಗೃತಿ ಸಮಿತಿ ಇರುತ್ತದೆ. ಹಾನಗಲ್ಲ ತಾಲೂಕಿನಲ್ಲಿರು 68 ಪಡಿತರ ಅಂಗಡಿಗಳಿಗೆ ಶೀಘ್ರ ಜಾಗೃತಿ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾದ 3.8ಲಕ್ಷ ಮನೆಗಳನ್ನು ಕಟ್ಟಲು ಸರ್ಕಾರ ಅನುಮತಿ ನೀಡಿ ಅನುದಾನವನ್ನು ಬಿಡುಗಡೆಗೊಳಿಸಿದ್ದು ಫೆ. 28ರ ಒಳಗಾಗಿ ಈ ಮನೆಗಳ ಕಾಮಗಾರಿ ಆರಂಭವಾಗಬೇಕು. ಫಲಾನುಭವಿಗಳ ಬದಲಾವಣೆ ಮಾಡುವುದಿಲ್ಲ. ಆದರೆ, ಸಂಬಂಧಿಸಿದ ದಾಖಲೆಗಳನ್ನು ನೀಡಿ ತಕ್ಷಣ ಫಲಾನುಭವಿಗಳು ಮನೆ ಕಟ್ಟಲು ಆರಂಭಿಸಬೇಕು. ಇವುಗಳಲ್ಲಿ ಬಸವ ವಸತಿ ಯೋಜನೆಯ 2.19 ಲಕ್ಷ ಮನೆಗಳು, ಇಂದಿರಾ ಆವಾಸ ಯೋಜನೆಯ 73 ಸಾವಿರ ಮನೆಗಳು, ವಾಜಪೇಯಿ ನಗರವಸತಿ ಯೋಜನೆಯ 15 ಸಾವಿರ ಮನೆಗಳು ಸೇರಿವೆ. ಇದರೊಂದಿಗೆ ನಗರೋತ್ಥಾನ ಯೋಜನೆಯಡಿ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಮರುಚಾಲನೆ ನೀಡಲು ಫೆ. 5 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಕಾಮಗಾರಿಗಿರುವ ಸಮಸ್ಯೆ ಪರಿಹರಿಸಲು ಈ ಸಭೆಯಲ್ಲಿ ಚರ್ಚಿಸಿ ಪರಿಹಾರ ಒದಗಿಸಲಾಗುವುದು. ಈ ಸಭೆಗೆ ಗುತ್ತಿಗೆದಾರರನ್ನೂ ಕರೆಯಲಾಗಿದೆ ಎಂದು ತಿಳಿಸಿದರು. ಮುತ್ತಣ್ಣ ನಾಸಿಕ, ಕೆ.ಎಲ್. ದೇಶಪಾಂಡೆ, ಘನಶ್ಯಾಮ ದೇಶಪಾಂಡೆ, ಶೇಕಣ್ಣ ಗೂಳಿ, ಸಿ.ಎಸ್. ಬಡಿಗೇರಿ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

