ರೈತರ ಮೇಲೆ ಪೊಲೀಸರ ದೌರ್ಜನ್ಯ: ಪ್ರತಿಭಟನೆ
ಹಾವೇರಿ: ನಗರದ ವಿಜಯ ಬ್ಯಾಂಕ್ (ಲೀಡ್ ಬ್ಯಾಂಕ್) ಎದುರು ಬ್ಯಾಂಕ್ನವರು ವಶಪಡಿಸಿಕೊಂಡಿರುವ ಟ್ರ್ಯಾಕ್ಟರ್ ಮರಳಿಸಬೇಕು ಎಂದು ಒತ್ತಾಯಿಸಿ ಧರಣಿ ನಡೆಸುತ್ತಿದ್ದ ರೈತರನ್ನು ಗುರುವಾರ ಪೊಲೀಸರು ಬಲವಂತದಿಂದ ಬಂಧಿಸಿದ್ದಲ್ಲದೇ ರೈತರೊಬ್ಬರ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಶುಕ್ರವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ರೈತರು ಮನವಿ ಸಲ್ಲಿಸಿದರು.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ಹರವಿ ಗ್ರಾಮದ 50ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಲ್ಲದೇ ರೈತ ಉಮೇಶಗೌಡ ಪಾಟೀಲ ಎಂಬುವವರನ್ನು ಪ್ರತ್ಯೇಕವಾಗಿ ಶಹರ ಠಾಣೆಗೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕೂಡಲೇ ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ನಾವು ಟ್ರ್ಯಾಕ್ಟರ್ನ ಕಂತು ಕಟ್ಟಲು ಸಿದ್ಧರಿರುವುದಾಗಿ ತಿಳಿಸಿದರೂ ಮಹೇಂದ್ರ ಕೋಟಕ್ ಬ್ಯಾಂಕ್ನವರು ಪೂರ್ಣ ಹಣ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಇನ್ಸುರೆನ್ಸ್, ವಾಹನ ನೋಂದಣಿಗೆಂದು ಹಣ ಪಡೆದು ಅದನ್ನು ಮಾಡಿಸದೆ ಮೋಸ ಮಾಡಿದ್ದಾರೆ. ಆದರೆ ಬ್ಯಾಂಕ್ನವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನಮ್ಮ ಮೇಲೆ ಪೊಲೀಸರನ್ನು ಬಿಟ್ಟು ದೌರ್ಜನ್ಯ ಎಸಗಲಾಗುತ್ತಿದೆ ಎಂದು ಪ್ರತಿಭಟನಾ ನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ದಾವಣಗೆರೆ ಜಿಲ್ಲಾಧ್ಯಕ್ಷ ಮರಡಿ ನಾಗಣ್ಣ, ರಾಜ್ಯ ಘಟಕ ಉಪಾಧ್ಯಕ್ಷ ಎಚ್. ಓಂಕಾರಪ್ಪ, ಜಿಲ್ಲಾ ಉಪಾಧ್ಯಕ್ಷ ಮುರಿಗೇಂದ್ರಯ್ಯ ನಂದಿತಾವರೆ, ಆರ್.ಎನ್. ಪಾಟೀಲ, ಹರವಿ ಗ್ರಾಮಶಾಖೆ ಅಧ್ಯಕ್ಷ ಆರ್.ಸಿ. ಲೋಕಪ್ಪನವರ, ಉಪಾಧ್ಯಕ್ಷ ಎಚ್.ಎನ್. ಪಾಟೀಲ, ದೊಗ್ಗಳ್ಳಿ ಸಿದ್ಧಪ್ಪ, ಸಿರಿಗೆರೆ ಬಸಣ್ಣ, ಗುತ್ತಮ್ಮ ಚೌಟಗಿ, ಶಿವಕ್ಕ ಹಿಟ್ಟಿಗುಡಿ, ವೈ. ನಿಂಗಮ್ಮ ಇದ್ದರು. ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಲ್ಲಿ ಮನವಿ ಸಲ್ಲಿಸಿದ ನಂತರ ಮತ್ತೆ ಲೀಡ್ ಬ್ಯಾಂಕ್ ಎದುರು ರೈತರು ಧರಣಿ ಮುಂದುವರಿಸಿದರು. ಗುರುವಾರ ಸಂಜೆ ಧರಣಿ ನಿರತ 30 ರೈತರನ್ನು ಬಂಧಿಸಿದ್ದ ಪೊಲೀಸರು ಅವರನ್ನು ರಾತ್ರಿ ಬಿಡುಗಡೆಗೊಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

