ಹಾವೇರಿ

ಕ್ರಿಯಾಶಕ್ತಿಯಾಗಿ ಸಾಂಘಿಕ ಶಕ್ತಿ ಪರಿವರ್ತಿಸಿ

Published On :

ಬ್ಯಾಡಗಿ: ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಎಸ್‌ಎಫ್‌ಐ ಸಾಂಘಿಕ ಶಕ್ತಿಯನ್ನು ಕ್ರಿಯಾಶಕ್ತಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಸಾಹಿತಿ ಸಂಕಮ್ಮ ಸಂಕಣ್ಣನವರ ಹೇಳಿದರು.
ಸ್ಥಳೀಯ ವಿಠಲ ಮಂದಿರದಲ್ಲಿ ಶುಕ್ರವಾರ ಎಸ್‌ಎಫ್‌ಐ ತಾಲೂಕು ಘಟಕ ಆಯೋಜಿಸಿದ್ದ ತಾಲೂಕು ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.  ವೈಜ್ಞಾನಿಕ, ವೈಚಾರಿಕ ಮತ್ತು ಪ್ರಗತಿಪರ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಪ್ರೇರೇಪಿಸುವ ಮೂಲಕ ಸರ್ಕಾರದ ಮಟ್ಟದಲ್ಲಿ ಶೈಕ್ಷಣಿಕ ಬದ್ಧತೆಗಳನ್ನು ಹೆಚ್ಚಿಸುವುದು ಹಾಗೂ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುವುದು ಎಸ್‌ಎಫ್‌ಐನ ಮೂಲ ಉದ್ದೇಶವಾಗಬೇಕು ಎಂದರು.
ಸಮಾಜವಾದದ ನೆರಳಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ದೇಶಭಕ್ತ ಭಗತಸಿಂಗ್ ಹೆಸರು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. ಅಂತಹ ಮಹಾನ್ ದೇಶಭಕ್ತ ಆರಾಧಕರಾಗಿರುವ ಎಸ್‌ಎಫ್‌ಐ ಕಾರ್ಯಕರ್ತರು ಹಾಗೂ ಹೋರಾಟದ ಹಿನ್ನೆಲೆಯಲ್ಲಿರುವ ಅವರ ಆದರ್ಶಗಳನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ರೇಣುಕಾ ಕಹಾರ ಮಾತನಾಡಿ, ಜನಪ್ರತಿನಿಧಿಗಳ ನಿಯಂತ್ರಣದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಂದಾಗ ಮಾತ್ರ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಯಾಗಲು ಸಾಧ್ಯ.
ಇಲ್ಲದಿದ್ದಲ್ಲಿ ಸರ್ಕಾರದ ಎಲ್ಲ ಶೈಕ್ಷಣಿಕ ನೀತಿಗಳು ಖಾಸಗಿ ಸಂಸ್ಥೆಗಳ ಪರವಾಗಿರುತ್ತದೆ ಎಂದರು.
ಸರ್ಕಾರ ವಸತಿ ನಿಲಯದಲ್ಲಿರುವ ಪ್ರತಿ ವಿದ್ಯಾರ್ಥಿಗೆ ರು. 24ರಿಂದ 35 ಆಹಾರ ಭತ್ಯೆ ನೀಡುತ್ತಿದ್ದು, ರು. 110 ಪಡೆಯುತ್ತಿರುವ ಜೈಲಿನಲ್ಲಿರುವ ಕೈದಿಗಳೇ ಎಷ್ಟೋ ವಾಸಿ ಎನ್ನುವಂತಾಗಿದೆ. ಎಬಿವಿಪಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಮಂತ್ರಿಗಳಾದ ಸಿ.ಟಿ. ರವಿ, ಅರವಿಂದ ಲಿಂಬಾವಳಿ ಅಧಿಕಾರಕ್ಕೆ ಬಂದ ಮೇಲೂ ಅವರಿಂದ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸಾಧ್ಯವಾಗಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದ ಅವರೂ 9 ಖಾಸಗಿ ವಿವಿಗಳಿಗೆ ಅನುಮತಿ ನೀಡಿದ್ದಾರೆ ಎಂದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ ಪೂಜಾರ ಮಾತನಾಡಿ, ಸರ್ಕಾರಿ ಪದವಿ ಕಾಲೇಜುಗಳಲ್ಲಿರುವ ಉಪನ್ಯಾಸಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡದ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಅವರಿಗೂ ಸರಿಯಾಗಿ ಸಂಬಳ ನೀಡುತ್ತಿಲ್ಲ. ಇದರಿಂದ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಲು ಹೇಗೆ ಸಾಧ್ಯ? ಎಂದರು.
ತಾಲೂಕಾಧ್ಯಕ್ಷ ವಿಜಯಕುಮಾರ ಶಿಡ್ಲಣ್ಣನವರ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಭೋವಿ, ಮಲ್ಲೇಶ ಗೋಟನವರ, ಸದಸ್ಯರಾದ ಶಿವರಾಜ ಲಿಂಗಾಪುರ, ವಿಜಯ ಎಲಿ, ಪೂರ್ಣಿಮಾ ಮ್ಯಾಗೇರಿ, ನಾಗರತ್ನಾ ಬಿಷ್ಟಣ್ಣನವರ, ಸಂತೋಷ ಮಲ್ಲೇನಹಳ್ಳಿ ಇತರಿದ್ದರು. ಕಾರ್ಯದರ್ಶಿ ವಸಂತ ಬ್ಯಾಟಪ್ಪನವರ ಸ್ವಾಗತಿಸಿದರು. ಸುಭಾಸ ಪೂಜಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.