ಹಾವೇರಿ

ವಿದ್ಯುತ್ ಬಾಕಿ ವಸೂಲಿ: ನಕಲಿ ವ್ಯಕ್ತಿ ಸೆರೆ

Published On :

ಹಾವೇರಿ: ತಾನು ವಿದ್ಯುತ್ ಇಲಾಖೆ ಸಿಬ್ಬಂದಿ ಎಂದು ಹೇಳಿಕೊಂಡು ಮನೆ ಮನೆಗೆ ಹೋಗಿ ವಿದ್ಯುತ್ ಬಿಲ್ ಬಾಕಿ ನೆಪದಲ್ಲಿ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ವ್ಯಕ್ತಿ ಶುಕ್ರವಾರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಹೆಸ್ಕಾಂ ಸಿಬ್ಬಂದಿ ಎಂದು ಹೇಳಿಕೊಂಡು ಗ್ರಾಹಕರಿಂದ ಹಣ ಪಡೆದು ವಂಚಿಸುತ್ತಿದ್ದ ಈ ನಕಲಿ ಸಿಬ್ಬಂದಿಯನ್ನು ನಗರದ ನಾಗೇಂದ್ರಮಟ್ಟಿಯ ಮಂಜುನಾಥ ಅಶೋಕ ಶಿಂದೆ ಎಂದು ಗುರುತಿಸಲಾಗಿದೆ.
ಈತ ಹಲವಾರು ತಿಂಗಳುಗಳಿಂದ ಈ ಕಾಯಕ ಮಾಡುತ್ತಿದ್ದು, ಶುಕ್ರವಾರ ನಗರದ ಯಾಲಕ್ಕಿ ಓಣಿಗೆ ವಿದ್ಯುತ್ ಬಿಲ್ ಬಾಕಿ ವಸೂಲಿಗಾಗಿ ಹೋಗಿದ್ದ. ಅಲ್ಲಿ ಮನೆ ಮನೆಗೆ ಹೋಗಿ ವಿದ್ಯುತ್ ಬಿಲ್ ಬಾಕಿ ಇದೆ ಎಂದು ಹೇಳಿ ಬಿಲ್‌ನಲ್ಲಿ ನಮೂದಿಸಿದಷ್ಟು ಹಣ ವಸೂಲಿ ಮಾಡಿದ. ಸಾರ್ವಜನಿಕರು ಸಹ ಹೆಸ್ಕಾಂ ಸಿಬ್ಬಂದಿ ಇರಬಹುದು ಎಂದುಕೊಂಡು ಹಣ ಕೊಟ್ಟರು.
ಹೀಗೆ ಹಣ ವಸೂಲಿ ಮಾಡುತ್ತಿದ್ದಾಗ ಅಲ್ಲಿಯ ಗ್ರಾಹಕರೊಬ್ಬರು ಹೆಸ್ಕಾಂ ಕಚೇರಿಗೆ ದೂರವಾಣಿ ಮಾಡಿ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಅನೇಕ ದಿನಗಳಿಂದ ದೂರು ಬಂದಿದ್ದರಿಂದ ಎಚ್ಚೆತ್ತ ಅಧಿಕಾರಿಗಳು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಬಂದು ಈ ನಕಲಿ ಸಿಬ್ಬಂದಿ ಮಹಾಶಯನನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದರು.
ಅಧಿಕಾರಿಗಳು ದಾಳಿ ನಡೆಸಿ ಈತನನ್ನು ಹಿಡಿದಾಗ ಅವನ ಬಳಿ ಗ್ರಾಹಕರಿಂದ ಸಂಗ್ರಹಿಸಿದ ರು. 820 ಸಿಕ್ಕಿದೆ. ಈತ ಈವರೆಗೆ ನೂರಾರು ಜನರಿಗೆ ವಂಚಿಸಿದ್ದು, ಎಷ್ಟು ಮೊತ್ತ ವಂಚಿಸಿದ್ದಾನೆ ಎಂಬುದು ವಿಚಾರಣೆಯಿಂದ ಖಚಿತವಾಗಿ ತಿಳಿಯಬೇಕಿದೆ.
ವಂಚಕನನ್ನು ಹಿಡಿಯಲು ನಡೆಸಿದ ದಾಳಿ ತಂಡದಲ್ಲಿ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಓ.ಎಸ್. ಶಶಿಧರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ವೈ. ಪ್ರಶಾಂತ, ವಿ.ಎನ್. ಮುದಕಣ್ಣನವರ, ಕಿರಿಯ ಸಹಾಯಕ ಚಂದ್ರಪ್ಪ ಮ್ಯಾಗೇರಿ, ಎಫ್.ವೈ. ಜೀವಾಜಿ, ಸುರೇಶ ಇದ್ದರು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.