ದುಂದು ವೆಚ್ಚದ ಯೋಜನೆ ಬೇಡ: ಎಚ್ಡಿಕೆ
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಅನ್ನಭಾಗ್ಯದಂಥ ದುಂದುವೆಚ್ಚದ ಯೋಜನೆಗಳು ನಮಗೆ ಅಗತ್ಯವಿಲ್ಲ. ತಾತ್ಕಾಲಿಕ ಸೌಲಭ್ಯ ಕೊಡುವ ಯೋಜನೆ ಮಾಡದೇ ರೈತರು, ಬಡವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಯೋಜನೆ ಸರ್ಕಾರದಿಂದ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಬುಧವಾರ ಪಾಲ್ಗೊಂಡು ಅವರು ಮಾತಾಡಿದರು. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಶಾಶ್ವತ ಯೋಜನೆಗಳು ನಮಗೆ ಬೇಕಿವೆ. ಆದರೆ, ಜನರ ತೆರಿಗೆ ಹಣವನ್ನು ಸಂಗ್ರಹಿಸಿ ತಾತ್ಕಾಲಿಕ ಸುಖ ನೀಡುವ ಯೋಜನೆಗಳನ್ನು ಸರ್ಕಾರ ಘೋಷಿಸುತ್ತಿವೆ. ಅನ್ನಭಾಗ್ಯ ಯೋಜನೆ ಉತ್ತಮ ಉದ್ದೇಶ ಹೊಂದಿದ್ದರೂ ಇಂದು ಯಾರಿಗೂ ತಿಂಗಳಿಗೆ 30ಕೆಜಿ ಅಕ್ಕಿ ಬೇಕಿಲ್ಲ. ಹಣ ಸದ್ಬಳಕೆ ಮಾಡಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಚಿಂತನೆ ಮಾಡಬೇಕಿದೆ ಎದರು.
ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲಾಗಿದ್ದು, ಅದನ್ನು ಸಂಗ್ರಹಿಸಲು ಉಗ್ರಾಣಗಳ ಕೊರತೆಯಿದೆ ಎಂಬುದು ಸಿರಿಗೆರೆ ಶ್ರೀಗಳಿಂದ ಗೊತ್ತಾಯಿತು.
ಉಗ್ರಾಣಗಳನ್ನು ನಿರ್ಮಿಸಲು ಸರ್ಕಾರಕ್ಕೆ ಇರುವ ತೊಂದರೆಯಾದರೂ ಏನು ಎಂಬ ಪ್ರಶ್ನೆಯನ್ನು ಶ್ರೀಗಳು ಕೇಳಿದರು. ಸರ್ಕಾರ ಮೂಲಭೂತ ಸೌಕರ್ಯಗಳಿಗೆ ನೀಡುತ್ತಿರುವ ಹಣ ಸದ್ಬಳಕೆ ಆಗುತ್ತಿದೆಯೇ ಎಂಬುದನ್ನು ನೋಡಿಕೊಳ್ಳಬೇಕಿದೆ. ತಾತ್ಕಾಲಿಕ ಯೋಜನೆಗಳಿಂದ ಇಂದು ಈ ಪರಿಸ್ಥಿತಿ ಬಂದಿದೆ.
ಸರ್ಕಾರ ಕೃಷಿಕರ ಬಗ್ಗೆ ನೀಡುತ್ತಿರುವ ಗಮನ ಸಾಲುತ್ತಿಲ್ಲ. ಎಲ್ಲೋ ಒಂದು ಕಡೆ ನಾವು ಎಡವುತ್ತಿದ್ದೇವೆ. ಈ ನಿಟ್ಟಿನಲ್ಲಿ ಫೆ. 14ರಂದು ಮಂಡನೆಯಾಗುವ ಬಜೆಟ್ನಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಭರವಸೆ ನೀಡಿದರು.
ನಾವಿಂದು ಪಾಶ್ಚಾತ್ಯೀಕರಣದಿಂದ ನಮ್ಮ ಸಂಸ್ಕೃತಿ ಮರೆಯುತ್ತಿದ್ದೇವೆ. ಆದರೆ, ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಸಂಸ್ಕೃತಿಯನ್ನು ಉಳಿಸುತ್ತಿದೆ. ನಾಡಿನ ಜನತೆಗೆ ಮಾರ್ಗದರ್ಶನ ನೀಡುವ, ಸಮಾಜದ ಅಂಕುಡೊಂಕು ತಿದ್ದುವ ಕಾರ್ಯಕ್ರಮ ಇದಾಗಿದೆ. ನಾವು ಮಾಡುತ್ತಿರುವ ತಪ್ಪುಗಳನ್ನು ತಿದ್ದುವ ಹಾಗೂ ಮಾರ್ಗದರ್ಶನ ನೀಡುವ ಕಾರ್ಯ ಸಿರಿಗೆರೆಶ್ರೀಗಳಿಂದ ಆಗುತ್ತಿದೆ ಎಂದು ಹೇಳಿದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಡಾ. ಅಭಿನವಕುಮಾರ ಚನ್ನಬಸವ ಸ್ವಾಮೀಜಿ, ಬಸವರಾಜ ಬೊಮ್ಮಾಯಿ, ಬಸವರಾಜ ಹೊರಟ್ಟಿ, ಬಿ.ಜಿ. ಬಣಕಾರ, ಸೋಮಣ್ಣ ಬೇವಿನಮರದ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

