ಛತ್ರಪತಿ ಶಿವಾಜಿ ದೇಶ ಕಂಡ ಅಪ್ರತಿಮ ಶೂರ
ಹಾವೇರಿ: ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ದೇಶ ಕಂಡ ಅಪ್ರತಿಮ ಶೂರ. ಈ ದೇಶದ ಸಂಸ್ಕೃತಿ ಮತ್ತು ಹಿರಿಮೆಯ ಬಗ್ಗೆ ಅಗಾಧ ಅಭಿಮಾನ ಹಾಗೂ ಗೌರವ ಹೊಂದಿದ್ದರು ಎಂದು ಜಿಪಂ ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ ಹೇಳಿದರು.
ನಗರದ ನೌಕರರ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿವಾಜಿ ಅವರ ಜೀವನದ ಬಗ್ಗೆ ತಿಳಿದುಕೊಂಡರೆ ಸಾಲದು, ಶಿವಾಜಿ ಬಾಲ್ಯದಿಂದಲೂ ರೂಢಿಸಿಕೊಂಡ ಬಂದ ಸದ್ಗುಣಗಳು, ಆತ ಹೊಂದಿದ್ದ ಧೈರ್ಯ, ಸಾಹಸ ಹಾಗೂ ಹೋರಾಟದ ಗುಣಗಳನ್ನು ಇಂದಿನ ನಮ್ಮ ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಶಿವಾಜಿ ಅವರು ತಾಯಿ ಜೀಜಾಬಾಯಿ ಅವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯದ ಬಗ್ಗೆ ಅಪಾರ ಪ್ರೀತಿಯನ್ನು ಬೆಳೆಸಿಕೊಂಡರು. ಅವರ ಆದರ್ಶಗಳನ್ನು ನಾವು ಪಾಲಿಸಬೇಕಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಮಾತನಾಡಿ, ಶಿವಾಜಿಯ ಧೀರ ಬದುಕು ಇಂದಿನ ಆಡಳಿತಗಾರರಿಗೆ ಮಾರ್ಗದರ್ಶನವಾಗಬೇಕಿದೆ. ನಿಸ್ವಾರ್ಥ ಸೇವೆ, ದೇಶಕಟ್ಟುವ ಕಾರ್ಯದಲ್ಲಿ ನಿರಂತರ ನಡೆ ಮತ್ತು ಆಡಳಿತದಲ್ಲಿ ನೈಪುಣ್ಯತೆಯನ್ನು ನಾವು ಶಿವಾಜಿಯವರಿಂದ ಕಲಿಯಬೇಕು ಎಂದರು. ಶಿವಾಜಿ ಮಹಾರಾಜರ ಜಯಂತಿ ಕುರಿತು ರಾಜಶ್ರೀ ಶೆಜ್ಜೇಶ್ವರ ಉಪನ್ಯಾಸ ನೀಡಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಶಿವಾಜಿ ಭಾವಚಿತ್ರದ ಮೆರವಣಿಗೆ ಜರುಗಿತು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಆಂಜನಪ್ಪ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಉಪ ವಿಭಾಗಾಧಿಕಾರಿ ಮಹ್ಮದ ಜುಬೇರ, ತಹಸೀಲ್ದಾರ್ ಪಂಪನಗೌಡ ಮೇಲ್ಸಿಮೆ, ಡಿಡಿಪಿಐ ಎಸ್.ಬಿ. ಕೊಡ್ಲಿ, ಹಾವೇರಿ ತಾಲೂಕು ಮರಾಠಾ ಸಂಘದ ಅಧ್ಯಕ್ಷ ಉಮೇಶ ವಾಘ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಐಟಿಐ ಪ್ರಾಚಾರ್ಯ ಕೃಷ್ಣ ಜವಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶಿವಾಜಿ ಮಹಾನ್ ಪುರುಷ
ಹಾನಗಲ್ಲ: ಶಿವಾಜಿ ಮಹಾರಾಜರು ಹಿಂದೂ ಧರ್ಮ ರಕ್ಷಣೆಗೆ ಹೋರಾಡಿದ ಮಹಾ ಮಹಿಮರು ಎಂದು ಹಾನಗಲ್ಲ ಪಿಎಸ್‌ಐ ಮಹದೇವ ಯಲಿಗಾರ ಹೇಳಿದರು.
ನಗರದ ಕುರುಬಗೇರಿಯ ಶಿವಾಜಿ ವೃತ್ತದಲ್ಲಿ ಕ್ಷತ್ರಿಯ ಮರಾಠಾ ಸಮಾಜ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಸಮುದಾಯಗಳು ಧರ್ಮ ರಕ್ಷಣೆಗೆ ಆದ್ಯತೆ ನೀಡಿದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದರು. ಕ್ಷತ್ರಿಯ ಮರಾಠಾ ಸಮಾಜದ ಮುಖಂಡ ಯಲ್ಲಪ್ಪ ಕಿತ್ತೂರ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಅಧ್ಯಕ್ಷ ವಿಷ್ಣುಕಾಂತ ಜಾಧವ, ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಪುರಸಭೆ ಸದಸ್ಯರಾದ ನೇತ್ರಾವತಿ ಬಮ್ಮನಹಳ್ಳಿ, ಶಕುಂತಲಾ ಪವಾಡಿ, ಮಾಜಿ ಸದಸ್ಯ ಮನೋಹರ ಬಮ್ಮನಹಳ್ಳಿ, ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ದಾನಪ್ಪ ಗಂಟೇರ, ಮಾಲತೇಶ ಖಂಡುನವರ, ಮೋಹನ ಬಸವಂತಕರ, ಸಂತೋಷ ಟೀಕೋಜಿ, ದೀಪಕ ಕಿತ್ತೂರ, ಜಯಣ್ಣ ಅಂಗಡಿ, ಗಿರೀಶ ಕೊಪ್ಪರಸಿಕೊಪ್ಪ, ರಾಘವೇಂದ್ರ ಸುರಳೇಶ್ವರ, ಖಂಡಿ ಭೋಸ್ಲೆ, ಕೃಷ್ಣ ಶಿಂಧೆ, ವಿಠ್ಠಲ ಖಂಡುನವರ, ಅರುಣ ಕಿತ್ತೂರ, ತಾನಾಜಿ ಕಾಟೇಕರ, ವಿನಯ ಬಂಕನಾಳ, ಕೃಷ್ಣಾ ಪೂಜಾರ, ಜಿ.ಎನ್. ಮೇಗಳಮನಿ, ಯಲ್ಲಪ್ಪ ಡಂಬಳ, ತಾನಾಜಿ ಕೋಡದ ಮುಂತಾದವರು ಇದ್ದರು. ರಾಮಣ್ಣಾ ಮಾಸನಕಟ್ಟಿ ಸ್ವಾಗತಿಸಿದರು. ನಾಗೇಂದ್ರ ಬಂಕಾಪುರ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

