ಗೋದಾಮು ಇಲ್ಲವೆಂದು ಮೆಕ್ಕೆ ಜೋಳ ಖರೀದಿಯೇ ಬಂದ್
ನಾರಾಯಣ ಹೆಗಡೆ
ಹಾವೇರಿ: 'ನೆಗಡಿಯಾದರೆ ಮೂಗನ್ನೇ ಕತ್ತರಿಸಿದರು' ಎಂಬಂತೆ ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸಿದ ಮೆಕ್ಕೆಜೋಳ ಸಂಗ್ರಹಿಸಲು ಗೋದಾಮು ಇಲ್ಲದ್ದರಿಂದ ಫೆ.28ಕ್ಕೆ ಖರೀದಿ ಪ್ರಕ್ರಿಯೆಯನ್ನೇ ಅಂತ್ಯಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದು ಲಕ್ಷಾಂತರ ರೈತರ ಆತಂಕಕ್ಕೆ ಕಾರಣವಾಗಿದೆ.
ಅಗತ್ಯ ಮೂಲಸೌಲಭ್ಯ ಇಲ್ಲದ್ದರಿಂದ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ನಿತ್ಯವೂ ರೈತರು ಪರದಾಡುವಂತಾಗಿದೆ. ಮೆಕ್ಕೆಜೋಳ ಹೇರಿಕೊಂಡು ಬಂದ ವಾಹನಗಳು ವಾರಗಟ್ಟಲೆ ಖರೀದಿ ಕೇಂದ್ರದ ಬಳಿ ನಿಂತರೂ ಗೋದಾಮು ಕೊರತೆಯಿಂದ ಖರೀದಿ ಸಾಧ್ಯವಾಗುತ್ತಿಲ್ಲ. ಇದರಿಂದ ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ನಿತ್ಯವೂ ರೈತರಿಂದ ಪ್ರತಿಭಟನೆ ನಡೆಯುತ್ತಿದ್ದು, ಈ ನಡುವೆ ಸರ್ಕಾರ ಫೆ.28ಕ್ಕೆ ಖರೀದಿ ಅಂತ್ಯಗೊಳಿಸುವಂತೆ ಆದೇಶ ಹೊರಡಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಸ್ವಾಮ್ಯದ ಗೋದಾಮು ಭರ್ತಿಯಾಗಿ ಈಗಾಗಲೇ ಖಾಸಗಿ ಉಗ್ರಾಣಗಳನ್ನೂ ಪಡೆಯಲಾಗಿದೆ. ಹೊರ ಜಿಲ್ಲೆಗಳ ಗೋದಾಮುಗಳಲ್ಲೂ ಜಿಲ್ಲೆಯ ಮೆಕ್ಕೆಜೋಳ ಸಂಗ್ರಹಿಸಲಾಗುತ್ತಿದೆ. ಇನ್ನೂ ಲಕ್ಷಾಂತರ ಕ್ವಿಂಟಲ್ ಖರೀದಿ ಬಾಕಿಯಿದೆ.
8.5 ಲಕ್ಷ ಕ್ವಿಂಟಲ್ ಖರೀದಿ: ಸರ್ಕಾರ ಮೆಕ್ಕೆಜೋಳವನ್ನು 1310 ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು(ಕೆಎಫ್ಸಿಎಸ್ಸಿ) ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಲಾ ಒಂದರಂತೆ 7 ಖರೀದಿ ಕೇಂದ್ರ ತೆರೆದಿದ್ದು, ಫೆ.19ರವರೆಗೆ 8,48,133 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಿದೆ. ಹಿರೇಕೆರೂರು ತಾಲೂಕೊಂದರಲ್ಲೇ ಸುಮಾರು 4.70 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ಖರೀದಿಯಾಗಿದೆ. 8667 ರೈತರಿಂದ ಇಷ್ಟು ಪ್ರಮಾಣದ ಮೆಕ್ಕೆಜೋಳ ಖರೀದಿಯಾಗಿದ್ದು, ಇನ್ನೂ ಸುಮಾರು 4 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ಖರೀದಿ ಬಾಕಿಯಿದೆ ಎನ್ನಲಾಗುತ್ತಿದೆ.
ಭರ್ತಿಯಾದ ಗೋದಾಮು: ರಾಜ್ಯ ಉಗ್ರಾಣ ನಿಗಮ, ಎಪಿಎಂಸಿ, ಕೇಂದ್ರ ಉಗ್ರಾಣ ನಿಗಮ ಸೇರಿದಂತೆ ಸರ್ಕಾರಿ ಸ್ವಾಮ್ಯದ 50 ಗೋದಾಮುಗಳು ಬೆಂಬಲ ಬೆಲೆಯಲ್ಲಿ ಖರೀದಿಸಿದ ಮೆಕ್ಕೆಜೋಳದಿಂದ ಭರ್ತಿಯಾಗಿವೆ. ಇದಲ್ಲದೆ 60 ಖಾಸಗಿ ಗೋದಾಮುಗಳಲ್ಲೂ ಮೆಕ್ಕೆಜೋಳ ಸಂಗ್ರಹಿಸಲಾಗಿದೆ. ಜಿಲ್ಲೆಯ ಬಹುತೇಕ ಎಲ್ಲ ಉಗ್ರಾಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಪಕ್ಕದ ಗದಗ, ನರಗುಂದದಲ್ಲೂ ದಾಸ್ತಾನು ಮಾಡಲಾಗಿದೆ. ಖರೀದಿ ವಿಳಂಬ ಖಂಡಿಸಿ ರೈತರಿಂದ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ರಾಜ್ಯ ಆಹಾರ ನಿಗಮದ ಅಧಿಕಾರಿಗಳಿಗೆ ಗೋದಾಮು ಹುಡುಕುವುದೇ ತಲೆನೋವಾಗಿ ಪರಿಣಮಿಸಿದೆ. ಅದಕ್ಕಾಗಿ ತುಮಕೂರು ಹಾಗೂ ನೆಲಮಂಗಲದಲ್ಲಿ ಸಂಗ್ರಹಿಸಲು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲಾಗಿದೆ.
ರೈತರಿಗೆ ಹಣವೂ ಇಲ್ಲ: ಸರ್ಕಾರ ಆರಂಭದಲ್ಲಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಎಕರೆಗೆ 25 ಕ್ವಿಂಟಲ್ ಎಂದು ಸುತ್ತೋಲೆ ಹೊರಡಿಸಿತ್ತು. ಅದಕ್ಕೆ ರೈತರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಗರಿಷ್ಠ 75 ಕ್ವಿಂಟಲ್ ಎಂದು ಘೋಷಿಸಿತು. ನಂತರ ಯಾವುದೇ ಮಿತಿ ಹೇರದೇ ಒಬ್ಬ ರೈತರಿಂದ ಎಷ್ಟು ಬೇಕಾದರೂ ಖರೀದಿಸಬಹುದು ಎಂದು ತಿಳಿಸಿತು. ಇದುವರೆಗೆ ರು. 113.47 ಕೋಟಿ ಮೌಲ್ಯದ ಮೆಕ್ಕೆಜೋಳ ಖರೀದಿಯಾಗಿದ್ದು, ಈ ಪೈಕಿ ರು. 29.82 ಕೋಟಿ ಮಾತ್ರ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗಿದೆ. ಕಳೆದ ಜ.13ರ ನಂತರ ಮಾರಾಟ ಮಾಡಿದ ರೈತರಿಗೆ ಇನ್ನೂ ರು. 83.65 ಕೋಟಿ ಹಣ ಪಾವತಿಸುವುದು ಬಾಕಿಯಿದೆ. ಅಲ್ಲದೆ, ನೇರ ಹಣ ವರ್ಗಾವಣೆ ವೇಳೆ ಯಾರದೋ ಖಾತೆಗೆ ಹಣ ಜಮಾ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಇದರಿಂದ ರೈತ ನಿತ್ಯ ಪರದಾಡುವಂತಾಗಿದ್ದು, ಸರ್ಕಾರದ ಈ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಏ.15ರ ವರೆಗೆ ವಿಸ್ತರಿಸಿ: ಈ ಕುರಿತು ಮಾಜಿ ಸಚಿವ ಸಿ.ಎಂ. ಉದಾಸಿ ಅವರನ್ನು ಕೇಳಿದಾಗ, ಫೆ.28ಕ್ಕೆ ಖರೀದಿ ಅಂತ್ಯಗೊಳಿಸುವ ಸರ್ಕಾರ ಆದೇಶದಿಂದ ರೈತರು ಬೀದಿಪಾಲು ಆಗುವಂತಾಗಿದೆ. ಈ ರೀತಿ ಅನ್ಯಾಯ ಹಿಂದೆಂದೂ ಆಗಿರಲಿಲ್ಲ. ಇದು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಮಾಡಿದ ಹುನ್ನಾರವಾಗಿದ್ದು, ಏ.15ರ ವರೆಗೂ ಖರೀದಿ ಪ್ರಕ್ರಿಯೆ ಮುಂದುವರಿಸಬೇಕು. ನಮ್ಮ ಸರ್ಕಾರ ಹಿಂದೆ ಮಾರ್ಚ್ ಅಂತ್ಯದವರೆಗೂ ಖರೀದಿಗೆ ಅವಕಾಶ ನೀಡಿತ್ತು. ಖರೀದಿ ವಿಳಂಬ ಖಂಡಿಸಿ ರೈತರು ನಡೆಸುವ ಹೋರಾಟ ನ್ಯಾಯಸಮ್ಮತವಾಗಿದೆ. ಖರೀದಿ ದಿನಾಂಕ ವಿಸ್ತರಿಸದಿದ್ದರೆ ರೈತರ ಹೋರಾಟ ಬೆಂಬಲಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

