ಯಶಸ್ವಿ ಕಾರ್ಯಾಚರಣೆ: ಬೋನಿಗೆ ಬಿದ್ದ ಚಿರತೆ
ಹಿರೇಕೆರೂರು: ತಾಲೂಕಿನ ಪರ್ವತ ಶಿದ್ಗೇರಿ ಗ್ರಾಮದ ಬಳಿ ಚಿರತೆ ಮರಿ ಬೋನಿಗೆ ಬೀಳುವ ಮೂಲಕ ಮೊದಲನೇ ಬೇಟೆ ಯಶಸ್ವಿಯಾಗಿದೆ. ಒಂದು ತಿಂಗಳಿನಿಂದ ರಟ್ಟಿಹಳ್ಳಿ ಹೋಬಳಿ ಗ್ರಾಮಗಳಾದ ಕಡೂರು, ಬುಳ್ಳಾಪುರ, ಪರ್ವತ ಶಿದ್ಗೇರಿ, ಕಣವಿ ಶಿದ್ಗೇರಿ, ಹಾಡೇ ಮೊದಲಾದ ಗ್ರಾಮಗಳಲ್ಲಿ ಜನತೆಗೆ ಭೀತಿಯನ್ನುಂಟು ಮಾಡಿದ ಚಿರತೆಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವುದು ಅರಣ್ಯ ಇಲಾಖೆಗೆ ನುಂಗಲಾರದ ತುತ್ತಾಗಿತ್ತು. ನಾಲ್ಕು ದಿನಗಳಿಂದ ಪರ್ವತ ಶಿದ್ಗೇರಿ ಗ್ರಾಮದ ಜನತೆ ಚಿರತೆಯನ್ನು ಕಂಡು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿ ನಾಯಿಕಟ್ಟಿ ಹಾಕಿ ಹಗಲಿರುಳು ಎನ್ನದೆ ಕಾವಲಿದ್ದರು. ಬುಧವಾರ ರಾತ್ರಿ 2 ಗಂಟೆಗೆ ಸುಮಾರಿಗೆ ಚಿರತೆ ಮರಿಯೊಂದು ಮಾತ್ರ ಬಲೆಯಲ್ಲಿ ಸಿಕ್ಕಿದೆ. ಈ ಮರಿಚಿರತೆಯನ್ನು ಕ್ಯಾಂಟರ್ಗೆ ಸಾಗಿಸುವಾಗ ಓರ್ವ ರೈತನನ್ನು ಗಾಯಗೊಳಿಸಿದೆ. ಆದರೆ ಇನ್ನೂ ಎರಡು ಮರಿಗಳು ಮತ್ತು ಒಂದು ತಾಯಿ ಚಿರತೆ ಮಾತ್ರ ಈ ಭಾಗದಲ್ಲಿ ಅಲೆದಾಡುತ್ತಿವೆ ಎನ್ನುತ್ತಾರೆ ಇಲ್ಲಿನ ಜನತೆ. ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕ್ಯಾಂಟರ್ ಮೂಲಕ ರಾಣಿಬೆನ್ನೂರು ಅರಣ್ಯಕ್ಕೆ ಮರಳಿಸಿದ್ದಾರೆ. ತಾಲೂಕಿನ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಜೀವಂತ ಮತ್ತು ಸುರಕ್ಷಿತವಾಗಿ ಹಿಡಿಯಬೇಕು ಎಂಬ ಬಯಕೆ ಈಡೇರಿದಂತಾಗಿದೆ. ಆದರೆ, ಈ ಭಾಗದಲ್ಲಿರುವ ಜನತೆ ಆತಂಕ ಇನ್ನೂ ಹೋಗಿಲ್ಲ. ಅರಣ್ಯಾಧಿಕಾರಿ ಎಸ್.ಎಲ್. ಪೂಜಾರ, ಉಪ ಅರಣ್ಯಾಧಿಕಾರಿ ಆನಂದ ಮದನೆ, ಸಿಬ್ಬಂದಿ ಚನ್ನಪ್ಪ, ಎಂ.ಎಂ. ಪೂಜಾರ ಮೊದಲಾದವರು ಇದ್ದರು.
ಕಡೂರು ಗ್ರಾಮಸ್ಥರಲ್ಲಿ ಆತಂಕ: ಎರಡು ದಿನಗಳ ಹಿಂದೆ ಕಡೂರ ಗ್ರಾಮದ ಸ್ಮಶಾನದ ಬಳಿ ಚಿರತೆಗಳನ್ನು ಪ್ರತ್ಯಕ್ಷವಾಗಿ ನೋಡಿದ್ದ ರೈತರು ತಕ್ಷಣವೇ ಮನೆ ಕಡೆ ಮರಳಿದ್ದಾರೆ. ಅಲ್ಲದೆ ಇವು ಮೂರು ನಾಯಿಗಳನ್ನು ತಿಂದಿವೆ ಎಂದು ರೈತರು ತಿಳಿಸಿದ್ದಾರೆ. ಇನ್ನೂ ಈ ಭಾಗದಲ್ಲಿ ಚಿರತೆಗಳು ಅವ್ಯಾಹತವಾಗಿ ಅಲೆದಾಡುತ್ತಿರುವುದು ನಮಗೆ ಭಯ ತಂದಿದೆ ಹಾಗೂ ಬೆಳೆಗೆ ನೀರು ಹಾಯಿಸಲು ಹೋಗಲು ಭಯವಾಗುತ್ತಿದೆ. ಆದ್ದರಿಂದ ಇಲ್ಲಿನ ಚಿರತೆಗಳನ್ನು ಹಿಡಿಯಬೇಕು ಎಂದು ರೈತ ಸಂಘದ ಸದಸ್ಯ ಶಂಕ್ರಗೌಡ ಶಿರಗಂಬಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

