ಜೋಡೆತ್ತು ನೋಡಲು ರೈತರ ನೂಕುನುಗ್ಗಲು
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 22
ವಿವಿಧ ಬಗೆಯ ಶ್ವಾನಗಳು, ಆಳೆತ್ತರದ ಎತ್ತುಗಳು, ಆಧುನಿಕ ಕೃಷಿ ಸಲಕರಣೆಗಳು, ಫಲಪುಷ್ಪಗಳು, ಸಿರಿಧಾನ್ಯ, ತೋಟಗಾರಿಕೆ ಬೆಳೆಗಳು, ತರಕಾರಿ... ಹೀಗೆ ಎಲ್ಲವೂ ಒಂದೇ ಸೂರಿನಡಿ ನೋಡುವ ಅವಕಾಶ ದೊರೆತರೆ ಹೇಗಿರಬಹುದು.
ಅಂಥ ಒಂದು ಅವಕಾಶವನ್ನು ಶನಿವಾರ ನಗರದ ಮುರುಗೀಸ್ವಾಮಿ ಮಠದ ಆವರಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕೃಷಿ ಉತ್ಸವ ಒದಗಿಸಿತ್ತು. ಕ್ರಮಬದ್ಧವಾದ ಯೋಜನೆ, ಸಕ್ರಿಯವಾಗಿ ಕೆಲಸದಲ್ಲಿ ನಿರತವಾಗುವ ಕಾರ್ಯಕರ್ತರಿದ್ದರೆ ಎಂತಹ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬಹುದು ಎನ್ನುವುದಕ್ಕೆ ಶನಿವಾರ ಹೊಸಮಠದ ಶರಣ ಸಂಸ್ಕೃತಿ ಉತ್ಸವ ಪ್ರಯುಕ್ತ ಧಾರವಾಡ ಹಾಲು ಒಕ್ಕೂಟ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಆಶ್ರಯದಲ್ಲಿ ನಡೆದ ಜಿಲ್ಲಾ ಕೃಷಿ ಉತ್ಸವವೇ ಸಾಕ್ಷಿಯಾಗಿತ್ತು. ಮುರುಗೀಮಠದ ಆವರಣವು ಕೃಷಿ ಜಾತ್ರೆಯಾಗಿ ಮಾರ್ಪಟ್ಟಿತ್ತು.
ಶ್ವಾನ ಪ್ರದರ್ಶನ ಆಕರ್ಷಣೆ: ಕೃಷಿ ಉತ್ಸವದಲ್ಲಿ ಏರ್ಪಡಿಸಿದ್ದ ಶ್ವಾನ, ಜೋಡೆತ್ತುಗಳ ಪ್ರದರ್ಶನ ಉತ್ಸವಕ್ಕೆ ಮೆರುಗು ನೀಡಿದವು. ಶ್ವಾನಗಳ ಪ್ರದರ್ಶನಕ್ಕೆ ಶಿರಸಿ, ಹುಬ್ಬಳ್ಳಿ, ಹಾನಗಲ್ಲ, ರಾಣಿಬೆನ್ನೂರು ಮುಂತಾದ ಕಡೆಗಳಿಂದ ವಿವಿಧ ತಳಿಗಳ ಶ್ವಾನಗಳನ್ನು ತರಲಾಗಿತ್ತು. ಸೆಂಟ್ ಬರ್ನಾಲ್ಡ್, ರಾಟ್ವೀಲ್ಲರ್, ಡಾಬರ್ಮನ್, ಜರ್ಮನ್ ಶೆಫರ್ಡ್, ಪಗ್, ಗ್ರೇಟ್ಡೆನ್, ಮುಧೋಳ, ಲ್ಯಾಬ್ರಡಾರ್, ಪಾಮರೆನ್ ಸೇರಿದಂತೆ ಹತ್ತಾರು ತಳಿಗಳ ನೂರಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನಕ್ಕೆ ಬಂದ ಸಾರ್ವಜನಿಕರನ್ನು ಆಕರ್ಷಿಸಿದವು.
ಪ್ರದರ್ಶನದಲ್ಲಿ ಆಳೆತ್ತರದ ಶ್ವಾನಗಳಿಂದ ಹಿಡಿದು ಪುಟ್ಟ ಪುಟ್ಟ ಶ್ವಾನಗಳು ನೋಡುಗರ ಕಣ್ಮನ ಸೆಳೆದವು. ವಿವಿಧ ಶ್ವಾನ ತಳಿಗಳಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಶ್ವಾನದ ದೈಹಿಕ ಬೆಳವಣಿಗೆ, ಮಾಲೀಕನ ಆದೇಶ ಪಾಲನೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ನಿರ್ಣಾಯಕರು ಅಂಕಗಳನ್ನು ನೀಡಿದರು. ಮೊದಲ ಮೂರು ಸ್ಥಾನ ಪಡೆದ ಶ್ವಾನಗಳಿಗೆ ಬಹುಮಾನಗಳನ್ನು ನೀಡಲಾಯಿತು. ಪ್ರದರ್ಶನಕ್ಕೆ ಕರೆತಂದ ಪ್ರತಿ ಶ್ವಾನಗಳಿಗೆ ಹಾಲು, ಆಹಾರ ವ್ಯವಸ್ಥೆಯನ್ನು ಧಾರವಾಡ ಹಾಲು ಒಕ್ಕೂಟ ಕಲ್ಪಿಸಿತ್ತು.
ಜೋಡೆತ್ತು ಪ್ರದರ್ಶನ:
ಕೃಷಿ ಉತ್ಸವ ನೋಡಲು ಬಂದ ರೈತರನ್ನು ತನ್ನತ್ತ ಸೆಳೆಯುವಲ್ಲಿ ಜೋಡೆತ್ತುಗಳು ಹಿಂದೆ ಬೀಳಲಿಲ್ಲ. ವಿವಿಧ ರೀತಿಯ ರಿಬ್ಬನ್, ಜೂಲ, ಕೋಡಣಸಗಳಿಂದ ಅಲಂಕೃತಗೊಂಡ ಗಜ ಗಾತ್ರದ ಜೋಡೆತ್ತುಗಳು ಕೃಷಿ ಮೇಳಕ್ಕೆ ಬಂದವರನ್ನು ಆಕರ್ಷಿಸಿದವು. ಪ್ರದರ್ಶನದಲ್ಲಿ ವಿವಿಧ ತಳಿಗಳಿಗೆ ಸೇರಿದ ಅನೇಕ ರೀತಿಯ ಜೋಡೆತ್ತುಗಳು ವಿವಿಧ ಭಾಗದಿಂದ ಬಂದಿದ್ದವು. ರೈತರು ನಾ ಮುಂದು ತಾ ಮುಂದು ಎಂಬಂತೆ ಜೋಡೆತ್ತುಗಳನ್ನು ನೋಡಲು ನೂಕಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಫಲಪುಷ್ಪ, ಸಿರಿಧಾನ್ಯ ಪ್ರದರ್ಶನ:
ಮತ್ತೊಂದೆಡೆ ಮಹಿಳಾ ಮಣಿಗಳನ್ನು ಆಕರ್ಷಿಸಲು ಸಿದ್ಧಗೊಂಡಿದ್ದ ವಿವಿಧ ಜಾತಿಗಳಿಗೆ ಸೇರಿದ ಹೂಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲಿ ವಿವಿಧ ಬಗೆಯ ಬಣ್ಣದ ಹೂಗಳು ಚಿತ್ತಾಕರ್ಷಕವಾಗಿದ್ದವು. ಹಣ್ಣುಗಳು, ಸಿರಿಧಾನ್ಯಗಳಾದ ರಾಗಿ, ನವಣಿ, ಕೆಂಪಕ್ಕಿ ಸೇರಿದಂತೆ ಹಲವಾರು ಧಾನ್ಯಗಳು ಕೃಷಿ ಉತ್ಸವದ ಪ್ಲಸ್ ಪಾಯಿಂಟ್ ಆಗಿತ್ತು.
ಕೃಷಿ ಉತ್ಸವದ ಆವರಣದಲ್ಲಿ ನಿರ್ಮಿಸಿದ ಮಳಿಗೆಗಳಲ್ಲಿ ರೈತರಿಗೆ ಬೇಕಾಗುವ ಕೃಷಿ ಉಪಕರಣಗಳು, ಸಾವಯವ ಬೆಳೆಗಳು, ತರಕಾರಿ, ಹಣ್ಣು, ವಿವಿಧ ತಳಿಗಳ ಮೆಕ್ಕೆಜೋಳ, ಸ್ವ-ಸಹಾಯ ಸಂಘದ ಹೋಂ ಮೇಡ್ ಕಾಂಡಿಮೆಂಟ್ ಮಳಿಗೆ, ಕರಕುಶಲ ವಸ್ತುಗಳು, ವಿವಿಧ ತಳಿಯ ಮೊಲ, ಕೋಳಿಗಳು, ಯಂತ್ರೋಪಕರಣಗಳು ಗಮನ ಸೆಳೆದವು. ಒಟ್ಟಾರೆ ಉತ್ಸವದ ಎಲ್ಲ ಕಾರ್ಯಕ್ರಮಗಳು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಗಮನ ಸೆಳೆದು ಕೃಷಿ ಕುರಿತು ಪರಿಚಯ ಮೂಡಿಸಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

