ಹಾವೇರಿ

ಪಂಚಾಕ್ಷರಿ ಗವಾಯಿ ಮಹಾನ್ ಚೇತನ: ಶ್ರೀಗಳು

Published On :

ಹಾನಗಲ್ಲ: ನಾಡಿನ ಅಂಧ-ಅನಾಥರಿಗೆ ಲಿಂ. ಪಂ. ಪಂಚಾಕ್ಷರಿ ಗವಾಯಿಗಳು ಸಂಗೀತದ ಮೂಲಕ ಸ್ವತಂತ್ರ ಬದುಕು ನೀಡಿದ ಮಹಾನ್ ಚೇತನ ಎಂದು ರಾಯನಾಳ ಮಹಾಂತ ಸ್ವಾಮಿಗಳು ನುಡಿದರು. ಹಾನಗಲ್ಲ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಲಿಂ. ಪಂಚಾಕ್ಷರಿ ಗವಾಯಿಗಳ ಜಯಂತ್ಯುತ್ಸವ ನಿಮಿತ್ತ ನಡೆದ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು. ಪ್ರತಿ ವರ್ಷ ತಮ್ಮ ಮಠದಿಂದ ಶ್ರೀ ಕುಮಾರ ಪಂಚಾಕ್ಷರಿ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ರು. 11 ಸಾವಿರ ನಗದು, ಫಲಕವನ್ನೊಳಗೊಂಡಿದೆ. ಪ್ರಶಸ್ತಿಯನ್ನು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರುಗಳು ಸೂಚಿಸಿದ ಕಲಾವಿದರಿಗೆ ನೀಡಲಾಗುವುದು ಎಂದರು. ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿದರು. ನಂತರ ಅಹೋರಾತ್ರಿ ಸಂಗೀತೋತ್ಸವ ನಡೆಯಿತು. ಮಲ್ಲಿಕಾರ್ಜುನ ಶಾಸ್ತ್ರಿಗಳು ಕಾಡಶೆಟ್ಟಿಹಳ್ಳಿ ನಿರ್ವಹಿಸಿದರು.

ಕನ್ನಡ ಕಾವ್ಯ ಪರಂಪರೆ ಹಿರಿಮೆ ಅಪಾರ: ಕೊಟ್ರೇಶ
ಹಾನಗಲ್ಲ: ಕನ್ನಡ ಕಾವ್ಯ ಪರಂಪರೆ ಮೌಖಿಕ ಹಾಗೂ ಗ್ರಾಂಥಿಕವಾಗಿ ಅಪಾರ ಹಿರಿಮೆಯನ್ನು ನೀಡಿರುವಂತಹದ್ದಾಗಿದೆ ಎಂದು ಹಾನಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ. ಸಿ. ಕೊಟ್ರೇಶ ನುಡಿದರು. ಹಾನಗಲ್ಲ ತಾಲೂಕಿನ ಅರಳೇಶ್ವರದಲ್ಲಿ ಶನಿವಾರ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜರುಗಿದ ಯುವಕಾವ್ಯ ಕಮ್ಮಟದಲ್ಲಿ ಕನ್ನಡ ಕಾವ್ಯ ಪರಂಪರೆ ಮತ್ತು ಗೋಕಾಕರು ಕುರಿತ ಗೋಷ್ಠಿ ಹಾಗೂ ಕವಿಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು. ಪ್ರಸನ್ನಕುಮಾರ ಮೈಸೂರು ಮಾತನಾಡಿದರು. ಸಾಹಿತಿ ವಿಜಯಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಿ.ಜೆ. ಮಂಜುನಾಥ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಾರುತಿ ಶಿಡ್ಲಾಪುರ ಇದ್ದರು. ಕವಿಗೋಷ್ಠಿಯಲ್ಲಿ ವಿಶ್ವನಾಥ ಬೋಂದಾಡೆ, ಟಿಪ್ಪುಸುಲ್ತಾನ್ ನಾಯಕವಾಡಿ, ನಿಂಗಪ್ಪ ಮರಡಿ, ಕವಿತಾ ಚಕ್ರಸಾಲಿ, ರೂಪಾ ತುಕ್ಕೋಜಿ ಇತರರು ಕವನ ವಾಚಿಸಿದರು.

ಕನ್ನಡ ಸಂರಕ್ಷಣೆ-ಸರ್ಕಾರ ಮೌನ: ಹೊರಟ್ಟಿ ಆರೋಪ
ಹಾವೇರಿ: ರಾಜ್ಯದಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಭಾಷೆ ಸಂರಕ್ಷಣೆ ಮಾಡಬೇಕಾದ ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಿದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಆರೋಪಿಸಿದರು. ನಗರದ ಪುರಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿಂದು ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಶೇ. 38ರಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕೇವಲ ಶೇ. 23ಕ್ಕೆ ಇಳಿದಿದೆ. ಬೆಳಗಾವಿ ಭಾಗದಲ್ಲಿ ಶೇ. 70ರಷ್ಟು ಫಲಕಗಳು ಮರಾಠಿಯಲ್ಲಿಯೇ ಇವೆ. ಇದರಿಂದಾಗಿ ಕನ್ನಡಿಗರಿಗೆ ವಿವಿಧ ಭಾಷೆಗಳಿಗೆ ಹೊಂದಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಬಂದಿದೆ ಎಂದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಬಿ. ಬಣಕಾರ, ಅಶೋಕ ಬೇವಿನಮರದ, ಚಂದ್ರಣ್ಣ ಕೋಡಿಹಳ್ಳಿ ಇತರರಿದ್ದರು.

ಪುಟ್ಟರಾಜರು ಅಂಧರ ಬಾಳಿನ ಕಣ್ಣು: ಶಂಕರಾನಂದ ಶ್ರೀ
ಹಾನಗಲ್ಲ: ಪಂ. ಪುಟ್ಟರಾಜ ಗವಾಯಿಗಳು ಬಾಹ್ಯ ಜಗತ್ತಿಗೆ ಮಾತ್ರ ಅಂಧರಾಗಿದ್ದರೂ, ಅಂಧರ ಬಾಳಿಗೆ ಕಣ್ಣಾಗಿದ್ದರು. ನಡೆದಾಡುವ ದೇವರೆನಿಸಿದ ಅವರು ಇಂದಿಗೂ ಭಕ್ತರ ಮನದಲ್ಲಿ ನೆಲೆಸಿದ್ದಾರೆ ಎಂದು ಸದ್ಗುರು ಶಂಕರಾನಂದ ಸ್ವಾಮೀಜಿ ಬಣ್ಣಿಸಿದರು. ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಪಂ. ಡಾ. ಪುಟ್ಟರಾಜ ಕವಿ ಗವಾಯಿಗಳ ತೃತೀಯ ಪುಣ್ಯಸ್ಮರಣೋತ್ಸವ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿ.ಪಂ. ಸದಸ್ಯ ಬಸವರಾಜ ಹಾದಿಮನಿ, ಪುಣ್ಯಸ್ಮರಣೋತ್ಸವ ಸಮಿತಿ ತಾಲೂಕಾಧ್ಯಕ್ಷ ನಾಗೇಶ ಪಡೆಪ್ಪನವರ, ಕೆ.ಎಲ್. ದೇಶಪಾಂಡೆ, ಆರ್.ಸಿ. ಹಿರೇಮಠ, ವೆಂಕಟೇಶ ಗವಾಯಿಗಳು, ಎನ್.ಐ. ಕೋಮಾರ ಮಾತನಾಡಿದರು. ಸಂಗೀತೋತ್ಸವದಲ್ಲಿ ಎನ್.ಐ. ಕೋಮಾರ, ಅಂಬಿಕಾ ಅಕ್ಕಿವಳ್ಳಿ, ಶಾಂಭವಿ ಪಾಟೀಲ, ಸಂಜನಾ ಜೋಶಿ, ಪ್ರಸಾದಕುಮಾರ, ಶ್ರೀಪಾದ ಅಕ್ಕಿವಳ್ಳಿ, ಎಚ್.ಪಿ. ವೇಂಕಟೇಶ, ಬಸವಣ್ಣೆಯ್ಯ ಶಾಸ್ತ್ರಿ ವೆಂಕಟಾಪುರಮಠ, ಅಶೋಕ ಕೊಂಡ್ಲಿ, ಸುರೇಶ ಪಾಟೀಲ, ಮಂಜುನಾಥ ಕೊರಗರ ಸಂಗೀತ ಸೇವೆ ನೀಡಿದರು.

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಇರಲಿ: ಕೋರಿಶೆಟ್ಟರ್
ಬ್ಯಾಡಗಿ: ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಮನೋಬಲ ಹೆಚ್ಚಿಸಲು ಶ್ರಮಿಸಬೇಕಾಗಿದೆ ಎಂದು ಉಪನ್ಯಾಸಕ ಎಸ್.ಎಂ. ಕೋರಿಶೆಟ್ಟರ್ ಹೇಳಿದರು. ಸ್ಥಳೀಯ ಎಸ್ಎಸ್ಪಿಎನ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಕವಿತಾ ಬಾರ್ಕಿ, ಸುಧಾ ಹೊಸಳ್ಳಿ, ಪವಿತ್ರಾ ಹಲಗೇರಿ, ರೇಣುಕಾ ಗಾಜೇರ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ದ್ವಿತೀಯ ಪಿಯುಸಿಯ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ ಕಾಲೇಜಿನ ಸುಧಾ ಗೊರವರ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಾಚಾರ್ಯ ಎಲ್.ವಿ. ಮಾಯೇರ, ಎಸ್.ಕೆ. ಆರಾಧ್ಯಮಠ, ಬಿ.ಕೆ. ಹೆಡಿಯಾಲ ಇದ್ದರು.

ಆತ್ಮವಿಶ್ವಾಸ ಕೊರತೆಯಿಂದ ವಿದ್ಯಾರ್ಥಿಗಳು ಅಡ್ಡದಾರಿಗೆ
ಬ್ಯಾಡಗಿ: ವಿದ್ಯಾರ್ಥಿಗಳಲ್ಲಿ ಅಸಾಧಾರಣ ಪ್ರತಿಭೆಯಿದ್ದರೂ ಆತ್ಮವಿಶ್ವಾಸದ ಕೊರತೆಯಿಂದ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ನೆಹರು ಓಲೇಕಾರ ಖೇದ ವ್ಯಕ್ತಪಡಿಸಿದರು. ಇತ್ತೀಚೆಗೆ ಬಿಜಾಪುರದಲ್ಲಿ ಜರುಗಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಜಾನಪದ ಗೀತೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ಶಿಡೇನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಸುಮಾ ಭಜಂತ್ರಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಪ್ರಾಚಾರ್ಯ ಎಸ್.ಎನ್. ಯಮನಕ್ಕನವರ, ಸಿಬ್ಬಂದಿ ಸಿ.ಬಿ. ಚೌಶೆಟ್ಟಿ, ಸದಾನಂದ ಸುಳ್ಳಳ್ಳಿ, ಎಂ.ಎಸ್. ಕದರಮಂಡಲಗಿ, ಎನ್.ಕೆ. ಬಿನ್ನಾಳ, ಎಂ.ಆರ್. ಪಾಟೀಲ, ಸಿ.ಎಸ್. ಪಾಟೀಲ, ಲಕ್ಷ್ಮೀ ಪತ್ತಾರ, ಎಂ.ಎಚ್. ಹುಲ್ಲೂರ, ಜಯಲಕ್ಷ್ಮೀ ಲಮಾಣಿ ಇದ್ದರು.

ಆದಿವಾಸಿಗಳು ಆಪತ್ತು ಊಹಿಸಬಲ್ಲರು: ಜೋಗಿ
ಹಾವೇರಿ: ಆದಿವಾಸಿ ಬುಡಕಟ್ಟು ಜನಾಂಗ ವಿಶಿಷ್ಟ ಪರಂಪರೆ ಹೊಂದಿದ್ದು, ಅವು ತಮ್ಮದೇ ಆದ ವಿಧಾನದ ಮೂಲಕ ನಿಸರ್ಗದ ಆಪತ್ತುಗಳನ್ನು ಊಹಿಸಬಲ್ಲವು ಎಂಬುದಾಗಿ ಡಾ. ಆನಂದಪ್ಪ ಜೋಗಿ ಹೇಳಿದರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಜಿಲ್ಲಾ ಪರಂಪರೆ ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚೆಗೆ ಸಂಭವಿಸಿದ ಸುನಾಮಿಯಿಂದಾಗಿ ಅಪಾರ ಸಾವು-ನೋವುಗಳನ್ನು ತಪ್ಪಿಸಲು ಮುಂದುವರಿದ ವಿಜ್ಞಾನಕ್ಕೂ ಸಾಧ್ಯವಾಗಲಿಲ್ಲ. ಆದರೆ, ಅಂಡಮಾನ-ನಿಕೋಬಾರ್ ದ್ವೀಪದ ಬುಡಕಟ್ಟು ಜನಾಂಗ ವಿಕೋಪದ ಮುನ್ಸೂಚನೆ ಅರಿತು ಎತ್ತರದ ಪ್ರದೇಶಗಳಿಗೆ ತೆರಳುವ ಮೂಲಕ ಜೀವ ಮತ್ತು ಪ್ರಾಣಿ ಸಂಪತ್ತು ರಕ್ಷಿಸಿಕೊಂಡಿದ್ದನ್ನು ಪ್ರಸ್ತಾಪಿಸಿದರು. ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪರಂಪರೆ ಕೂಟದ ಸಂಚಾಲಕ ಪ್ರೊ. ಶಿವಯೋಗಿ ಕೋರಿಶೆಟ್ಟರ್ ಸ್ವಾಗತಿಸಿ, ಕೂಟದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಚೇತನಾ ಎಸ್.ಪಿ. ನಿರೂಪಿಸಿದರು. ಪ್ರೊ. ನಾಗರಾಜ ಮುಚ್ಚಟ್ಟಿ ವಂದಿಸಿದರು.

ಜನರ ಸಂಕಷ್ಟ ಪರಿಹಾರಕ್ಕೆ ಕಾಂಗ್ರೆಸ್ ಬದ್ಧ: ಶಿವಣ್ಣನವರ
ಬ್ಯಾಡಗಿ: ಎಲ್ಲ ವರ್ಗದ ಬಡ ಜನರ ಸಂಕಷ್ಟಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಸರ್ಕಾರದ ಕಾರ್ಯವೈಖರಿ ಪ್ರಶ್ನಿಸುವ ನೈತಿಕತೆ ವಿರೋಧ ಪಕ್ಷಗಳಿಗಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಇತ್ತೀಚೆಗೆ ಆಕಸ್ಮಿಕ ಅಗ್ನಿ ಅವಘಡದಲ್ಲಿ ನಷ್ಟ ಅನುಭವಿಸಿದ್ದ ಶಿವಯೋಗೇಶ್ವರ ಪುಸ್ತಕ ಮಾರಾಟ ಮಳಿಗೆ ಮಾಲೀಕರಿಗೆ ರು. 25 ಸಾವಿರ ಮುಖ್ಯಮಂತ್ರಿಗಳ ಪರಿಹಾರನಿಧಿ ಚೆಕ್ ವಿತರಿಸಿ ಮಾತನಾಡಿದರು. ವಾಣಿಜ್ಯ ಸಂಕೀರ್ಣಗಳು ಅಗ್ನಿ ಅನಾಹುತ ಸಂಭವಿಸಿದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ವಿರಳ. ಆದರೆ, ಸದರಿ ಮಳಿಗೆ ಮಾಲೀಕ ಮಂಜುನಾಥ ವಾಲಿಶೆಟ್ಟರ್ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು, ಇದನ್ನೇ ನೆಚ್ಚಿ ಇಡೀ ಕುಟುಂಬದ ನಿರ್ವಹಣೆ ನಡೆಸುತ್ತಿದ್ದರು. ಎಲ್ಲ ವಿವರಗಳನ್ನು ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಪ್ರಕರಣವೆಂದು ಪರಿಗಣಿಸಿ ರು. 25 ಸಾವಿರ ಪರಿಹಾರ ನೀಡಿದ್ದಾರೆ ಎಂದರು.

ಹಾವೇರಿ: ಕಬ್ಬು ಬೆಳೆಗಾರರ ಸಭೆ ನಾಳೆ
ಹಾವೇರಿ: ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಂಘದಿಂದ ಫೆ. 24ರಂದು ಮಧ್ಯಾಹ್ನ 2 ಗಂಟೆಗೆ ಕಾರ್ಖಾನೆಯ ರೈತ ಭವನದಲ್ಲಿ ಸಭೆಯನ್ನು ಕರೆಯಲಾಗಿದೆ.
ಸರ್ಕಾರ ನಿಗದಿಗೊಳಿಸಿದ ಪ್ರತಿ ಟನ್ಗೆ ರು. 2500 ಫೀಲ್ಡ್ ಕೇನ್ ದರವನ್ನು ಕಾರ್ಖಾನೆಯವರು ಕೊಡದಿರುವ ಬಗ್ಗೆ, ಕಾರ್ಖಾನೆಯವರು ಹಣ ಕೊಡದಿದ್ದರೆ ಮುಂದೆ ಕಬ್ಬು ಬೆಳೆಗಾರರು ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದರ ಬಗ್ಗೆ, ರಾಜ್ಯ ಸರ್ಕಾರದ ಮೇಲೆ ಹಣ ಕೊಡಿಸಲು ಒತ್ತಾಯ ಹೇರುವ ಕುರಿತು, ರೈತರಿಗೆ ಕಟಾವಿನಲ್ಲಿ ಸಾಗಾಣಿಕೆಯಲ್ಲಿ ಆಗುತ್ತಿರುವ ಅನ್ಯಾಯ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಗುವುದು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಗುರುಮಠ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಬೆಳೆಗಾರರು ಸಲಹೆ ಸೂಚನೆ ನೀಡಲು ಪಾಲ್ಗೊಳ್ಳಬೇಕು ಎಂದು ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ವ್ಯಾಪ್ರಿಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಜಶೇಖರ ಬೆಟಗೇರಿ ತಿಳಿಸಿದ್ದಾರೆ.

ಬಿಜೆಪಿಯಿಂದ ನಿಮ್ಮ ಧ್ವನಿ- ನಮ್ಮ ಪ್ರಣಾಳಿಕೆ
ಹಾವೇರಿ: ಬಿಜೆಪಿ ಯುವ ಮೋರ್ಚಾ ವತಿಯಿಂದ ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ 'ನಿಮ್ಮ ಧ್ವನಿ ನಮ್ಮ ಪ್ರಣಾಳಿಕೆ' ಅಭಿಯಾನವನ್ನು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆಸಲಾಯಿತು. ನಗರ ಘಟಕದ ಅಧ್ಯಕ್ಷ ವೆಂಕಟೇಶ ದೈವಜ್ಞ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಜಿಲ್ಲಾ ಅಧ್ಯಕ್ಷ ಪ್ರದೀಪ ಮುಳ್ಳೂರ ಮಾತನಾಡಿ, ಭವಿಷ್ಯದ ಭಾರತಕ್ಕಾಗಿ ವಿದ್ಯಾರ್ಥಿಗಳು ಸಲಹೆ ನೀಡಬೇಕು ಎಂದು ವಿನಂತಿಸಿಕೊಂಡರು. ಅಭಿಯಾನದಲ್ಲಿ ಕಾರ್ಯಕರ್ತರಾದ ಅಚ್ಯುತ ಹೆಸರೂರ, ಚೇತನ ಕುರಬಗೊಂಡಶೆಟ್ರ, ಮಧುಕರ ನವಲೆ, ಲಕ್ಷ್ಮಣ ರಜಪೂತ ಇದ್ದರು. ಯುವ ಮೋರ್ಚಾದ ಈ ಅಭಿಯಾನಕ್ಕೆ ವಿದ್ಯಾರ್ಥಿಗಳು ಖುಷಿಯಿಂದ ತಮ್ಮ ಸಲಹೆಯನ್ನು ಬರೆದು ಡಬ್ಬದಲ್ಲಿ ಹಾಕುವ ಮೂಲಕ ಮೋದಿಯವರ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

ಪ್ರತಿಯೊಬ್ಬರೂ ಅಕ್ಷರಸ್ಥರಾಗಲಿ: ಲೋಕಾಪುರ
ರಾಣಿಬೆನ್ನೂರು: ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು ಮುಂದಾಗಬೇಕೆಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಐ.ಎ. ಲೋಕಾಪುರ ಹೇಳಿದರು. ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಾವೇರಿ, ತಾಲೂಕು ಲೋಕ ಶಿಕ್ಷಣ ಸಮಿತಿ, ತಾಪಂ ರಾಣಿಬೆನ್ನೂರು ಆಶ್ರಯದಲ್ಲಿ ಇಟಗಿ ಗ್ರಾಮದ ಮಾಲತೇಶ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ 2013-14ನೇ ಸಾಲಿನ ಅಕ್ಷರ ಕಲಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ 35 ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಂದ ಆಗಮಿಸಿದ್ದ 70 ಪ್ರೇರಕರು, 200 ಸ್ವಯಂಸೇವಕರಿಗೆ ಕಲಿಕಾ ಸಾಮಗ್ರಿ ವಿತರಿಸಿ ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ ಮಾತನಾಡಿದರು. ತಾಪಂ ಅಧ್ಯಕ್ಷೆ ಹೂವಕ್ಕ ನಾಗೂರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಪಾರಮ್ಮ ರಾಮಲಿಂಗಣ್ಣನವರ ಕಾರ್ಯಕ್ರಮ ಉದ್ಘಾಟಿಸಿದರು. ಸುನಂದಾ ಅಯ್ಯನಗೌಡ್ರ, ಶಿವನಗೌಡ ರಾಮಲಿಂಗಣ್ಣನವರ, ಎನ್.ಎ. ಬಡಪ್ಪನವರ, ಸುಭಾಸಗೌಡ ಕರೆಗೌಡ್ರ, ಪರಮೇಶಗೌಡ ರಾಮಲಿಂಗಣ್ಣನವರ ಇದ್ದರು.

ನಿರಂತರ ವಿದ್ಯುತ್ಗೆ ರೈತರ ಆಗ್ರಹ
ಶಿಗ್ಗಾಂವಿ: ವಿದ್ಯುತ್ ಹಗಲು ನಾಲ್ಕು ತಾಸು, ರಾತ್ರಿ ನಾಲ್ಕು ತಾಸು ಸರಬರಾಜಿನಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ನೀರಾವರಿ ಬೆಳೆಗಳು ಹಾಳಾಗುತ್ತಿವೆ. ಆದ್ದರಿಂದ ರೈತರಿಗೆ ದಿನಕ್ಕೆ 8 ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಬಂಕಾಪುರ ಸುತ್ತಲಿನ ಗ್ರಾಮಸ್ಥರು ಎಚ್ಚರಿಸಿದ್ದಾರೆ. ತಾಲೂಕಿನ ಬಂಕಾಪುರ ಸುತ್ತಲಿನ ಗ್ರಾಮಗಳಾದ ಮುನವಳ್ಳಿ, ಸದಾಶಿವಪೇಟೆ, ನಾರಾಯಣಪುರ, ಬಾಡಾ, ಹೊಟ್ಟೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕೊಳವೆಬಾವಿಯಿಂದ ವಿದ್ಯುತ್ ಪಂಪ್ನಿಂದ ನೀರು ಎತ್ತುವುದು ವಿದ್ಯುತ್ನಿಂದಲೆ ಬೆಳೆ ಬರುವಂತಾಗಿದೆ. ಆದರೆ, ಹೆಸ್ಕಾಂ ಇಲಾಖೆಯವರು ರಾತ್ರಿ 2 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಪೂರೈಸಿ ನಂತರ ಮಧ್ಯಾಹ್ನ 2 ಗಂಟೆಯಿಂದ 6 ಗಂಟೆವರೆಗೆ ಪೂರೈಸುತ್ತಿದ್ದು, ಇದರಿಂದಾಗಿ ದೂರದೂರದ ನೀರು ಹರಿದು ಬರುತ್ತಿರುವುದರಿಂದ ಬೆಳೆಗಳಿಗೆ ನೀರು ಸರಬರಾಜು ಆಗದಂತಾಗಿದೆ. ಆದ್ದರಿಂದ 8 ಗಂಟೆ ನಿರಂತರ ಪೂರೈಸಬೇಕು ಎಂದರು.

ಆಮ್ ಆದ್ಮಿ ಪಾರ್ಟಿಯಿಂದ ಝಾಡೂ ಚಲಾವೋ ಯಾತ್ರೆ
ಹಾವೇರಿ: ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದಿಂದ ಝಾಡೂ ಚಲಾವೋ ಭ್ರಷ್ಟಾಚಾರ ಭಗಾವೋ ಮತ್ತು ಝಾಡೂ ಚಲಾವೋ ಬೇ-ಇಮಾನ್ ಚಲಾವೋ ಯಾತ್ರೆಗೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ವೃತ್ತವನ್ನು ಸ್ವಚ್ಛಗೊಳಿಸಿದರು. ಈ ಯಾತ್ರೆ ಒಂದು ತಿಂಗಳ ಕಾಲ ಜಿಲ್ಲಾದ್ಯಂತ ಗ್ರಾಮ ಗ್ರಾಮಗಳಲ್ಲಿ ಸಂಚರಿಸಲಿದೆ. ಜಿಲ್ಲಾ ಸಂಚಾಲಕರಾದ ಶಿವಾನಂದ ಹಳ್ಳೇರ, ಗುಡ್ಡಪ್ಪ ಅರ್ಕಾಚಾರಿ, ಟಿ.ಬಿ. ಕುಲಕರ್ಣಿ, ನಿಂಗನಗೌಡ ಅರಳಿಹಳ್ಳಿ, ಹರೀಶ ಹೂಗಾರ ನೇತೃತ್ವದಲ್ಲಿ ಅನೇಕರು ಪಾಲ್ಗೊಂಡಿದ್ದರು.

ಸಮ್ಮೇಳನದ ನಿರ್ಣಯಕ್ಕೆ ಸರ್ಕಾರ ಹಸಿರು ನಿಶಾನೆ
ಹಿರೇಕೆರೂರು: ತಾಲೂಕಿನ ಅಬಲೂರ ಗ್ರಾಮದಲ್ಲಿ ಡಿ. 28ರಂದು ಜರುಗಿದ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪಿ. ಗೌಡರ ತಿಳಿಸಿದ್ದಾರೆ. ಈ ಕುರಿತು ಪ್ರತಿಕಾ ಹೇಳಿಕೆ ನೀಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ 2014ರ ಜ. 4ರಂದು ಪಟ್ಟಣಕ್ಕೆ ಆಗಮಿಸಿದಾಗ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಣಯಗಳ ತಿಳಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಈ ಕುರಿತು ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ವಿವರವನ್ನು ಪಡೆದುಕೊಳ್ಳುವಂತೆ ಮುಖ್ಯಮಂತ್ರಿಗಳ ಸಚಿವಾಲಯದಿಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಪತ್ರ ರವಾನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆಧುನಿಕ ಯುಗದಲ್ಲಿ ಶಿಕ್ಷಣ ಅವಶ್ಯಕ: ಜವಳಿ
ಶಿಗ್ಗಾಂವಿ: ಇಂದು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದು ಅವಶ್ಯವಾಗಿದ್ದು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಗುರುತರ ಜವಾಬ್ದಾರಿ ಪಾಲಕರ ಮೇಲಿದೆ ಎಂದು ತಾಪಂ ಸದಸ್ಯ ನಿಂಗಣ್ಣ ಜವಳಿ ಹೇಳಿದರು. ತಾಲೂಕಿನ ಅತ್ತಿಗೇರಿ ಗ್ರಾಮದ ಅಶೋಕ ಯುವಕ ಮಂಡಳದ ಪ್ರಾಂಗಣದಲ್ಲಿ ನಿವೇದಿತಾ ಎಜುಕೇಷನ್ ಸೊಸೈಟಿ ಲಿಟಿಲ್ ಹಾರ್ಟ್ ಪೂರ್ವ ಪ್ರಾಥಮಿಕ, ಯಶವಂತ ಕಿರಿಯ ಪ್ರಾಥಮಿಕ ಶಾಲೆಯ 5ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗುರುನಗೌಡ ಪಾಟೀಲ ಮಾತನಾಡಿದರು. ಅರವಿಂದ ಬಸವರಾಜ ಮಲ್ಲೂರ, ಗ್ರಾಪಂ ಅಧ್ಯಕ್ಷೆ ರತ್ನವ್ವ ದವಲಿ, ಪವಿತ್ರಾ ಮಣ್ಣೂರ, ಸದಸ್ಯರಾದ ನಾಗನಗೌಡ ಪಾಟೀಲ, ಈಶ್ವರಪ್ಪ ಅಂಗಡಿ, ಸಂಸ್ಥೆ ಅಧ್ಯಕ್ಷೆ ಸುಮಾವತಿ ಬಿ. ಮಣ್ಣೂರ, ಕಾರ್ಯದರ್ಶಿ ವಿಶ್ವನಾಥ ದೇವರಮನಿ ಇದ್ದರು. ಈಶ್ವರಪ್ಪ ತಾರಿಹಾಳ ನಿರೂಪಿಸಿದರು. ಸುಮಂಗಲಾ ಭೂಪರೆಡ್ಡಿ ವಂದಿಸಿದರು.

ಇಂದು ಕಲಿಯುಗದ ಭೀಮ ನಾಟಕ ಪ್ರದರ್ಶನ
ಶಿಗ್ಗಾಂವಿ: ತಾಲೂಕಿನ ಕುನ್ನೂರ ಗ್ರಾಮದಲ್ಲಿ ಶ್ರೀ ಗ್ರಾಮದೇವಿ ನಾಟ್ಯ ಸಂಘದಿಂದ ಅರ್ಪಿಸುತ್ತಿರುವ 9ನೇ ಕಲಾಕುಸುಮ ಪರಶುರಾಮ ಎಚ್. ಬಣಕಾರ ವಿರಚಿತ ರೊಚ್ಚಿಗೆದ್ದ ಹುಲಿ ಅರ್ಥತ್ ಕಲಿಯುಗದ ಭೀಮ ಎಂಬ ಸಾಮಾಜಿಕ ನಾಟಕವನ್ನು ಫೆ.23ರಂದು ರಾತ್ರಿ 10.30ಕ್ಕೆ ಪಾರ್ಶಪ್ಪ ವರೂರ ಇವರ ಜಾಗೆಯಲ್ಲಿ ಜರುಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಬಸವರಾಜ ಬೊಮ್ಮಾಯಿ ನೇರವೇರಿಸುವರು. ಸಂಸದ ಪ್ರಹ್ಲಾದ ಜೋಶಿ ಅಧ್ಯಕ್ಷತೆ ವಹಿಸುವರು. ಸಾನ್ನಿಧ್ಯವನ್ನು ಸೋಮಯ್ಯನವರ ಹಿರೇಮಠ ವಹಿಸುವರು. ಅಥಿತಿಗಳಾಗಿ ವಿಪ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ತಡಸ ಪಿಎಸ್ಐ ಬಸವರಾಜ ಕಲ್ಲಮ್ಮನವರ, ಶ್ಯಾಡಂಬಿಯ ಲ್ಯಾಂಡ್ ಲಾರ್ಡ್ ಎಂ.ಸಿ. ಪಾಟೀಲ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ಮಾಜಿ ಸದಸ್ಯ ಎನ್.ಸಿ. ಪಾಟೀಲ, ತಾಪಂ ಸದಸ್ಯ ಐ.ಎಸ್. ಪಾಟೀಲ, ಗ್ರಾಪಂ ಅಧ್ಯಕ್ಷ ಗೋವಿಂದಪ್ಪ ದುಂಡಪ್ಪನವರ ಮತ್ತಿತರರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ಮುಂಜಾಗ್ರತೆ ವಹಿಸಿ: ಡಾ. ಸಮೀನಾ
ಬ್ಯಾಡಗಿ: ಋತುಚಕ್ರ ಪ್ರಪಂಚದ ಎಲ್ಲ ಮಹಿಳೆಯರಲ್ಲೂ ನಡೆಯುವ ಸಹಜ ಪ್ರಕ್ರಿಯೆ. ಸಂಕುಚಿತ ಮನೋಭಾವನೆಯಿಂದ ಹೊರಬರುವ ಮೂಲಕ ಪ್ರತಿಯೊಬ್ಬ ಮಹಿಳೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿದುಕೊಳ್ಳುವಂತೆ ಡಾ. ಸಮೀನಾ ಸಿಂದಗಿಕರ ಕರೆ ನೀಡಿದರು. ಆಯುಷ್ ಇಲಾಖೆಯಿಂದ ತಾಲೂಕಿನ ಶಿಡೇನೂರ ಮೊರಾರ್ಜಿ ದೇಸಾಯಿ ವಸತಿಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ. ವಿನೋದಾ ಸ್ವಾದಿ ಮಾತನಾಡಿ, ಔಷಧೋಪಚಾರಗಳು ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಬಿಡುಗಡೆಯಾಗುತ್ತಿವೆ. ದೃಶ್ಯ, ಮುದ್ರಣ ಮಾಧ್ಯಮಗಳಲ್ಲಿಯೇ ಶೇ. 50ರಷ್ಟು ಆರೋಗ್ಯದ ಕುರಿತು ಪ್ರಾಯೋಗಿಕ ಹಾಗೂ ತಾಂತ್ರಿಕ ಮಾಹಿತಿ ಪಡೆಯಬಹುದಾಗಿದೆ ಎಂದರು. ಪ್ರಾಚಾರ್ಯ ಎಸ್.ಎನ್. ಯಮನಕ್ಕನವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ಸುನಿತಾ ಪೂಜಾರ, ಡಾ. ನಾಗರತ್ನಾ ಮಾಸೂರ, ಶಿಕ್ಷಕರಾದ ಸಿ.ಬಿ. ಚೌಶೆಟ್ಟಿ, ಸದಾನಂದ ಸುಳ್ಳಳ್ಳಿ, ಎಂ.ಎಸ್. ಕದರಮಂಡಲಗಿ ಇತರರಿದ್ದರು.

ಸಮೃದ್ಧ ಭಾರತ ನಿರ್ಮಿಸೋಣ: ನಟರಾಜನ್
ಹಾವೇರಿ: ತರಬೇತಿಗಳ ಸದುಪಯೋಗ ಪಡೆದುಕೊಂಡು, ಹಳ್ಳಿಗಳಲ್ಲಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿ ಸಮೃದ್ಧ ಭಾರತ ನಿರ್ಮಿಸೋಣ ಎಂದು ನೆಹರು ಯುವ ಕೇಂದ್ರ ಸಂಘಟನೆಯ ವಲಯ ನಿರ್ದೇಶಕ ಆರ್. ನಟರಾಜನ್ ಹೇಳಿದರು. ಇಲ್ಲಿಯ ನೆಹರು ಯುವಕೇಂದ್ರ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಯುವಜನರಿಗಾಗಿ ಶಿಶುವಿನಹಾಳ ಶರೀಫ ಶಿವಯೋಗಿಗಳ ಸಭಾಭವನದಲ್ಲಿ ಏರ್ಪಡಿಸಿದ್ದ ಯುವ ಮುಂದಾಳತ್ವ ಹಾಗೂ ವ್ಯಕ್ತಿತ್ವ ವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   ಗ್ರಾಪಂ ಅಧ್ಯಕ್ಷೆ ಮಹಾದೇವಿ ಆರ್. ವಾಲ್ಮೀಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಎಸ್.ಎಚ್. ಮಜೀದ ಪ್ರಾಸ್ತಾವಿಕ ಮಾತನಾಡಿದರು. ನೆಹರು ಯುವಕೇಂದ್ರದ ಎ.ಜಿ. ಪುರಾಣಿಕ, ಗ್ರಾಪಂ ಸದಸ್ಯರಾದ ಶಂಭಣ್ಣ ಬೆಟದೂರು, ನಾಗರಾಜ ಡೊಳ್ಳಿನ್, ಕರಿಯಪ್ಪ ಮಾದರ ಇದ್ದರು. ಸಿ.ಎ. ನದಾಫ್ ಸ್ವಾಗತಿಸಿದರು. ರಮೇಶ್ ಎಸ್. ನಿರೂಪಿಸಿದರು. ಮುಸ್ತಫಾ ಸೋಮನಕಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.