ನಿಗದಿತ ಅವಧಿಗೆ ಕಾಮಗಾರಿ ಪೂರ್ಣಗೊಳಿಸಿ
ರಾಣಿಬೆನ್ನೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗಳನ್ನು ನಿರ್ವಹಿಸಲು ಗುತ್ತಿಗೆ ಪಡೆದವರು ಯಾವುದೇ ಸಬೂಬು ಹೇಳದೆ ಕಾಮಗಾರಿಯನ್ನು ಅವಧಿಯೊಳಗಾಗಿ ಮುಕ್ತಾಯಗೊಳಿಸಬೇಕೆಂದು ಶಾಸಕ ಕೆ.ಬಿ. ಕೋಳಿವಾಡ ಹೇಳಿದರು.
ಇಲ್ಲಿನ ಪರಿವೀಕ್ಷಣಾ ಮಂದಿರದ ಆವರಣದಲ್ಲಿ ಅಂದಾಜು ರು. 1 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಸಿ ಅವರು ಮಾತನಾಡಿದರು.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಸಾರ್ವಜನಿಕರಿಗೆ ಮುಟ್ಟಿಸುವ ಜವಾಬ್ದಾರಿ ಹೊತ್ತಿರುವವರು ನಿಸ್ವಾರ್ಥತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಪಂ ಸದಸ್ಯೆ ಜ್ಯೋತಿ ರಾಮಲಿಂಗಣ್ಣನವರ, ತಾಪಂ ಅಧ್ಯಕ್ಷೆ ಹೂವಕ್ಕ ನಾಗೂರು, ಉಪಾಧ್ಯಕ್ಷೆ ಗಣೇಶಪ್ಪ ಬಿಲ್ಲಾಳ, ನಗರಸಭೆ ಅಧ್ಯಕ್ಷ ಶಿವಣ್ಣ ಮಣೇಗಾರ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನೂರುಲ್ಲಾಖಾನ ಖಾಜಿ, ನಗರಸಭೆ ಸದಸ್ಯರಾದ ಶಶಿಧರ ಬಸೆನಾಯ್ಕರ, ಬಸವರಾಜ ಹುಚ್ಚಗೊಂಡರ, ನಾಗರಾಜ ಕಲಾಲ, ತಾಪಂ ಕಾರ್ಯನಿರ್ವಣಾಧಿಕಾರಿ ಕೃಷ್ಣಮೂರ್ತಿ, ಕಾರ್ಯನಿರ್ವಾಹಕ ಅಭಿಯಂತ ವಿಜಯಕುಮಾರ, ಎಂ.ಎ. ಶಿವಕುಮಾರ, ತಿರುಪತಿ ಅಜ್ಜನವರ, ಗೀತಾ ಮುಂದಿನಮನಿ ಇದ್ದರು.
ಕೋತಿಗಳೇ ಈತನಿಗೆ ಸ್ನೇಹಿತರು
ಹಾನಗಲ್ಲ: ಬಸ್ಗಾಗಿ ಕಾಯುತ್ತಿದ್ದವನು ಕಾಲ ಕಳೆಯಲು ಅಲ್ಲಿದ್ದ ಮಂಗಗಳಿಗೆ ಬಾಳೆಹಣ್ಣು ಹಾಕಿ ಆಟವಾಡಿದ ಪರಿಣಾಮ ಈಗ ಆ ಎರಡೂ ಮಂಗಗಳು ವಿರೂಪಾಕ್ಷಯ್ಯನ ಬೆನ್ನು ಬಿದ್ದಿರುವುದು ಅಚ್ಚರಿ ಮೂಡಿಸಿದೆ.
ಒಂದು ವಾರದ ಹಿಂದೆ ಹಾನಗಲ್ಲ ತಾಲೂಕಿನ ವಿಕಲಚೇತನರ ಮುಖಂಡನಾಗಿರುವ ಹೊಂಕಣ ಗ್ರಾಮದ ವಿರೂಪಾಕ್ಷಯ್ಯ ಹೊಂಕಣದ ಶಿಬಾರದ ಬಳಿ ಹಾನಗಲ್ಲಿಗೆ ಹೋಗಲೆಂದು ಬಸ್ಗಾಗಿ ಕಾಯುತ್ತಿದ್ದನು. ಬಸ್ ಬರುವುದು ತಡವಾಯಿತು. ಆಗ ಅಲ್ಲಿಯೇ ಇರುವ ಮಂಗಗಳು ಈತನ ಕಣ್ಣಿಗೆ ಬಿದ್ದವು. ಅಲ್ಲಿಯೇ ಇರುವ ಅಂಗಡಿಯಲ್ಲಿ ಒಂದಷ್ಟು ಬಾಳೆಹಣ್ಣು ಕೊಂಡುಕೊಂಡು ಆ ಮಂಗಗಳಿಗೆ ಹಾಕಿದನು. ಹತ್ತಿರ ಬಂದು ಬಾಳೆಹಣ್ಣು ತಿಂದ ಮಂಗಗಳು ಹಾಗೆಯೇ ವಿರೂಪಾಕ್ಷಯ್ಯನ ಜತೆ ಆಟವಾಡಲು ಆರಂಭಿಸಿದವು. ನಂತರ ಬಸ್ ಬಂದರೂ ಕೂಡ ಮಂಗಗಳು ಈತನನ್ನು ಬಿಡದೇ ಬೆನ್ನತ್ತಿದವು. ಈಗ ಈ ಎರಡೂ ಮಂಗಳು ವಿರೂಪಾಕ್ಷಯ್ಯನ ಸನಿಹದ ಸಂಗಾತಿಗಳಾಗಿವೆ. ಮಂಗಗಳು ಹಾಗೂ ವಿರೂಪಾಕ್ಷಯ್ಯನ ಈ ಸುಮಧುರ ನಡುವಳಿಕೆ ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದೆ. ಈಗ ವಿರೂಪಾಕ್ಷಯ್ಯನ ಬೆನ್ನೇರಿರುವ ಮಂಗಗಳು ಆತ ಯಾವ ಕಚೇರಿಗೆ ಹೋದರೂ ಅವನೊಂದಿಗೆ ಇರುತ್ತವೆ. ಆತ ನೀಡಿದ ಸಂಜ್ಞೆಯಂತೆ ಮಾತು ಕೇಳುತ್ತವೆ. ಹೇಳಿದಂತೆ ಮಾಡುತ್ತವೆ. ಈಗ ವಿರೂಪಾಕ್ಷಯ್ಯ ಮಂಗಗಳ ಜನಾಕರ್ಷಣೆಯಾಗಿದ್ದಾರೆ.
ಇಂದಿನಿಂದ ಉಚಿತ ತರಬೇತಿ
ಹಾವೇರಿ: ಕುಮಟಾದ ಸಿಂಡ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯು ದಿನ ಬಳಕೆ ಗೃಹೋಪಯೋಗಿ ವಸ್ತುಗಳಾದ ಫಿನೈಲ್, ಮೇಣದ ಬತ್ತಿ, ಅಗರಬತ್ತಿ, ಸಾಬೂನು ಹಾಗೂ ಇತರ ವಸ್ತುಗಳ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವುದನ್ನು ಗಮನಿಸಿ ಫೆ. 24ರಿಂದ ಮಾ. 10ರವರೆಗೆ ತರಬೇತಿ ಹಮ್ಮಿಕೊಂಡಿದೆ. ಸ್ವಉದ್ಯೋಗಕ್ಕೆ ಟಿವಿ ಮತ್ತು ವಿಸಿಡಿ, ಡಿವಿಡಿ ಹಾಗೂ ಇತರೆ ತಾಂತ್ರಿಕ ಉಪಕರಣಗಳ ರಿಪೇರಿ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಗಮನಿಸಿ ಮಾ. 1ರಿಂದ 30ರವರೆಗೆ ಟಿವಿ ಮತ್ತು ವಿಸಿಡಿ ಹಾಗೂ ಇತರೆ ತಾಂತ್ರಿಕ ಉಪಕರಣಗಳ ರಿಪೇರಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯು ಊಟ ಮತ್ತು ವಸತಿ ಸಹಿತ ಉಚಿತವಾಗಿರುತ್ತದೆ. ಅಭ್ಯರ್ಥಿಯು 18ರಿಂದ 45 ವರ್ಷದೊಳಗಿನವರಾಗಿರಬೇಕು ಹಾಗೂ ನಿರುದ್ಯೋಗಿಯಾಗಿದ್ದು, ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಕನಿಷ್ಠ ಕನ್ನಡ ಓದಲು, ಬರೆಯಲು ಬರಬೇಕು. ಶಿಬಿರಾರ್ಥಿಗಳಿಗೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ.ಉತ್ತರ ಕನ್ನಡ ಜಿಲ್ಲೆಯ ಜತೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಹಾನಗಲ್ಲ ತಾಲೂಕುಗಳಿಗೆ ಮಾತ್ರ ಸೀಮಿತವಾಗಿದ್ದು, ಆಸಕ್ತ ಯುವಕ, ಯುವತಿಯರು ತಮ್ಮ ಮಾಹಿತಿಯನ್ನು ಭರ್ತಿಮಾಡಿದ ಅರ್ಜಿಯನ್ನು, ನಿರ್ದೇಶಕರು, ಸಿಂಡ್ ಗ್ರಾಮೀಣ ಸ್ವ-ಸಹಾಯ ಉದ್ಯೋಗ ತರಬೇತಿ ಸಂಸ್ಥೆ(ಸಿಂಡ್ಆರ್ಸೆಟಿ), ಕೈಗಾರಿಕಾ ವಸಾಹತು ಪ್ರದೇಶ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ ಅವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ-08386-220530 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಇಂಟಿಗ್ರಿಟಿ ಕ್ಯಾಂಪ್ಗೆ ಆಯ್ಕೆ
ಹಾವೇರಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಹನುಮಂತಪ್ಪ ಈಳಗೇರ, ವಿದ್ಯಾರ್ಥಿನಿ ಕಸ್ತೂರಿ ಗಿರ್ಜಿ ಇವರು ಫೆ. 21ರಿಂದ 28ರವರೆಗೆ ಹಾಸನದ ಪಡವಲ ಹಿಪ್ಪಿಯಲ್ಲಿ ನಡೆಯುವ ಎನ್ಎಸ್ಎಸ್ ರಾಷ್ಟ್ರೀಯ ಇಂಟಿಗ್ರಿಟಿ ಕ್ಯಾಂಪ್(ಶಿಬಿರ)ಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜೆ.ಸಿ. ಹಾದಿಮನಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಎಂ.ಎಚ್. ಹೆಬ್ಬಾಳ, ಪ್ರೊ. ರಮೇಶ ಎನ್. ತೆವರಿ ಶುಭ ಕೋರಿದ್ದಾರೆ.
ಕಮಲಾ ಜೆಡಿಎಸ್ ಜಿಲ್ಲಾಧ್ಯಕ್ಷೆ
ಹಾವೇರಿ: ಕರ್ನಾಟಕ ಪ್ರದೇಶ ಜನತಾದಳದ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆಯನ್ನಾಗಿ ಕಮಲಾ ನಾಯಕ್ ಅವರನ್ನು ನೇಮಕ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸೂಚನೆ ಮೇರೆಗೆ ಜೆಡಿಎಸ್ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಶೀಲಾ ನಾಯಕ್ ಅವರು ಕಮಲಾ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿ ಆದೇಶಿದ್ದಾರೆ. ಗುರುತರ ಜವಾಬ್ದಾರಿ ವಹಿಸಿಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಹಾಗೂ ಮಹಿಳಾ ವಿಭಾಗವನ್ನು ಪರಿಣಾಮಕಾರಿಯಾಗಿ ಸಂಘಟಿಸುವಂತೆ ಆದೇಶಪತ್ರದಲ್ಲಿ ತಿಳಿಸಲಾಗಿದೆ.
ಲಕಮಾಪುರ ನೇಮಕ
ಹಾನಗಲ್ಲ: ಹಾನಗಲ್ಲ ನ್ಯಾಯಾಲಯದಲ್ಲಿ ನೋಟರಿ ಪಬ್ಲಿಕ್ ಎಂದು ತಾಲೂಕಿನ ಕಂಚಿನೆಗಳೂರು ಗ್ರಾಮದ ನ್ಯಾಯವಾದಿ ದಿನೇಶ ನಾರಾಯಣಪ್ಪ ಲಕಮಾಪುರ ಅವರನ್ನು ಕರ್ನಾಟಕ ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳ ಇಲಾಖೆಯಿಂದ ಹಾನಗಲ್ಲ ಕಂದಾಯ ತಾಲೂಕಿಗೆ ನೇಮಕ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

