ತಾಂಡಾಗಳ ಮೂಲಸೌಕರ್ಯಕ್ಕೆ ಸರ್ಕಾರ ಬದ್ಧ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ. 24
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಮೂಲಕ ಸಮಾಜದ ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಸ್ಥಳೀಯ ತಾಲೂಕು ಪಂಚಾಯಿತಿಯ ಸುವರ್ಣ ಸೌಧದಲ್ಲಿ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ, ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಆಶ್ರಯದಲ್ಲಿ ಏರ್ಪಡಿಸಿದ್ದ ತಾಂಡಾ ನಿವಾಸಿಗಳಿಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ಕುರಿತು ವಿಧಾನಸಭೆಯ ಒಳಗೂ, ಹೊರಗೂ ಚರ್ಚೆಗಳು ನಡೆದಿದ್ದು, ಶೀಘ್ರದಲ್ಲೇ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಕಂದಾಯ ಗ್ರಾಮಗಳನ್ನಾಗಿ ಘೋಷಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಸುಮಾರು 10 ತಾಂಡಾಗಳಿದ್ದು ಇದರಲ್ಲಿ ಕೇವಲ 3 ತಾಂಡಾಗಳು ಮಾತ್ರ ಕಂದಾಯ ಗ್ರಾಮಗಳಾಗಿ ಘೋಷಣೆಯಾಗಿದ್ದು, ಇನ್ನೂ 7 ತಾಂಡಾಗಳು ಬಾಕಿ ಉಳಿದಿವೆ ಎಂದರು.
ಆತ್ಮಾವಲೋಕನ ಅಗತ್ಯ: ಸ್ವಾತಂತ್ರ್ಯ ದೊರೆತು ಆರೂವರೆ ದಶಕಗಳಾಗಿದ್ದರೂ ಒಂದು ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕದಿರುವುದು ವಿಪರ್ಯಾಸ. ಬಂಜಾರ ಸಮುದಾಯ ಇಂಥ ದಯನೀಯ ಸ್ಥಿತಿ ತಲುಪಲು ಸರ್ಕಾರ ಕೂಡ ಒಂದೆಡೆ ಕಾರಣ. ಈ ಹಿನ್ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ದುಶ್ಚಟಕ್ಕೆ ಖೇದ: ಬಂಜಾರ ಸಮುದಾಯ ಮೊದಲಿನಿಂದಲೂ ಶಿಕ್ಷಣದಿಂದ ವಂಚಿತವಾಗಿದೆ. ಈ ಕುರಿತು ಅಲ್ಲಿನ ಜನರಿಗೆ ಇಂದಿಗೂ ಸ್ಪಷ್ಟ ಅರಿವು ಮೂಡಿಲ್ಲ. ಶೈಕ್ಷಣಿಕವಾಗಿ ಮುಂದುವರಿಯುವುದರಿಂದ ಸುಶಿಕ್ಷಿತ ಸಮಾಜ ನಿರ್ಮಾಣ ಕಾಣಲು ಸಾಧ್ಯ. ಆದರೆ, ಮಾನಸಿಕವಾಗಿ ಪರಿವರ್ತನೆಯಾಗದ ಲಂಬಾಣಿಗಳು ಇಂದಿಗೂ ದುಶ್ಚಟಗಳ ದಾಸರಾಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. ಜಿಪಂ ಮಾಜಿ ಉಪಾಧ್ಯಕ್ಷೆ ಕಮಲಾ ನಾಯ್ಕ ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸುಮಾರು 100ಕ್ಕೂ ಉಪ ಜಾತಿಗಳಿವೆ. ಅದರಲ್ಲಿ ಬಂಜಾರ ಸಮಾಜವೂ ಸಹ ಒಂದಾಗಿದ್ದು, ಕೆನೆಪದರದ ಕುಟುಂಬಗಳಷ್ಟೇ ಸರ್ಕಾರದ ಸೌಲಭ್ಯಗಳು ಪಡೆಯುತ್ತಿವೆ. ಯಾವುದೇ ನೆಲೆ ಕಾಣದ ಬಹುತೇಕ ಕುಟುಂಬಗಳು ಕೂಲಿ ನೆಚ್ಚಿ ಬದುಕುವಂತಾಗಿದೆ ಎಂದರು.
ರಮೇಶ್ ಲಮಾಣಿ ಮಾತನಾಡಿ, ತಾಂಡಾಗಳಿಗೆ ಬೇಕಾಗಿರುವ ಅಗತ್ಯ ಮೂಲಸೌಕರ್ಯಗಳ ಪ್ರತ್ಯೇಕ ಮಾಹಿತಿಗಳೊಂದಿಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಂಡಾದಲ್ಲಿರುವ ಎಲ್ಲ ಸಮಸ್ಯೆಗಳನ್ನು ಕೂಲಂಕಷವಾಗಿ ವರದಿ ರೂಪದಲ್ಲಿ ಸಲ್ಲಿಸುವಂತೆ ಮನವಿ ಮಾಡಿದರು.
ನಿವೃತ್ತ ಜಿಲ್ಲಾ ನೋಂದಾಣಾಧಿಕಾರಿ ಎಲ್.ಎಲ್. ನಾಯ್ಕ, ಟಿಇಒ ಎಸ್.ಆರ್. ಪಾಟೀಲ, ಸುರೇಶಗೌಡ ಪಾಟೀಲ, ಚಂದ್ರು ಲಮಾಣಿ, ತಿರಕಪ್ಪ ಲಮಾಣಿ, ಡಾ. ಬಿ.ಆರ್. ಲಮಾಣಿ, ಅರ್ಜುನಪ್ಪ ಲಮಾಣಿ ಇನ್ನಿತರರು ಉಪಸ್ಥಿತರಿದ್ದರು. ನ್ಯಾಯವಾದಿ ಹನುಮಂತ ಲಮಾಣಿ ಸ್ವಾಗತಿಸಿ, ನಿರೂಪಿಸಿದರು. ಎಚ್.ಎಸ್. ಲಮಾಣಿ ವಂದಿಸಿದರು.
ರಾಜ್ಯದಲ್ಲಿರುವ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ಕುರಿತು ವಿಧಾನಸಭೆಯ ಒಳಗೂ, ಹೊರಗೂ ಚರ್ಚೆಗಳು ನಡೆದಿದ್ದು, ಶೀಘ್ರದಲ್ಲೇ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುವುದು. ತಾಲೂಕಿನಲ್ಲಿ ಸುಮಾರು 10 ತಾಂಡಾಗಳಿದ್ದು ಇದರಲ್ಲಿ ಕೇವಲ 3 ತಾಂಡಾಗಳು ಮಾತ್ರ ಕಂದಾಯ ಗ್ರಾಮಗಳಾಗಿ ಘೋಷಣೆಯಾಗಿದ್ದು, ಇನ್ನೂ 7 ತಾಂಡಾಗಳು ಬಾಕಿ ಉಳಿದಿವೆ.
- ಬಸವರಾಜ ಶಿವಣ್ಣನವರ,
ಬ್ಯಾಡಗಿ ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

