ಜಾತಿ ವಿಷ ಬೀಜ ಬಿತ್ತಿದ್ದೇ ಕಾಂಗ್ರೆಸ್
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ. 25
ಜಾತಿ ವಿಷದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಸರ್ಕಾರ ನಡೆಸಿದ ಹತ್ತು ವರ್ಷಗಳ ಸಾಧನೆ. ಪರಿವರ್ತನೆ ಕಾಲ ಸನ್ನಿಹಿತವಾಗಿದ್ದು, ನರೇಂದ್ರ ಮೋದಿಯಂಥ ಸಮರ್ಥ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಲು ಸಂಕಲ್ಪ ತೊಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ಮಂಗಳವಾರ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿಗಾಗಿ ಮೋದಿ ಗೆಲ್ಲಿಸಿ:
ಬದ್ಧತೆಯಿಲ್ಲದ ಆಡಳಿತ ನಡೆಸಿದ ಕಾಂಗ್ರೆಸ್ನಿಂದ ದೇಶ ದಯನೀಯ ಸ್ಥಿತಿಗೆ ತಲುಪಿದೆ, ಆರ್ಥಿಕ ಹಿಂಜರಿತಕ್ಕೊಳಗಾದ ಭಾರತ ಸುಧಾರಿಸಿಕೊಳ್ಳಲು ದಶಕಗಳೇ ಬೇಕಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ನರೇಂದ್ರ ಮೋದಿ ಅವರನ್ನು ಬೆಂಬಲಿಸುವಂತೆ ಮನವಿಮಾಡಿದರು.
ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಅಮಾಯಕರ ಸಾವು-ನೋವಿಗೆ ಕಾರಣರಾದವರಿಗೆ ಕಾಂಗ್ರೆಸ್ ರಾಜಾಶ್ರಯ ನೀಡುತ್ತಿದೆ. ನರೇಂದ್ರ ಮೋದಿ ಅಭಿವೃದ್ಧಿಯ ಭಯ ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಿದ್ದು, ಅಧಿಕಾರಕ್ಕಾಗಿ ಅವರ ವೈಯಕ್ತಿಕ ಜೀವನದ ಕುರಿತು ಅಪಪ್ರಚಾರ ಮಾಡುತ್ತಿರುವುದು ಹಾಸ್ಯಾಸ್ಪದ ವಿಷಯ. ನಕ್ಸಲೈಟ್ ಸಮಸ್ಯೆ, ಭಯೋತ್ಪಾದಕರ ಅಟ್ಟಹಾಸದಿಂದ ದೇಶ ಆಂತರಿಕ ಭದ್ರತೆಯಿಲ್ಲದೇ ನಲುಗುತ್ತಿದೆ ಎಂದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮಲ್ಲಿನ ಒಡಕಿನ ಲಾಭ ಪಡೆದ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದೆ. ಆದರೆ, ಕಳೆದ ಹತ್ತು ತಿಂಗಳಲ್ಲಿ ಕಾಂಗ್ರೆಸ್ ನಡೆಸುತ್ತಿರುವ ದುರಾಡಳಿತದಿಂದ ಮತ ನೀಡಿದ ಜನರೇ ಪಶ್ಚಾತ್ತಾಪ ಪಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಸರ್ಕಾರ ಆಡಳಿತ ನಡೆಸುತ್ತಿದೆಯೇ.. ಎಂಬ ಸಂಶಯ ಜನರಲ್ಲಿದೆ. ದೇಶವು ಆರ್ಥಿಕವಾಗಿ ದಿವಾಳಿಯಾಗಿದ್ದು, ವಿಶ್ವದ ಐದನೇ ಜನಪ್ರಿಯ ವ್ಯಕ್ತಿ ಮೋದಿ ಗೆಲ್ಲಿಸುವ ಮೂಲಕ ರಾಷ್ಟ್ರದ ಗೌರವ ಕಾಪಾಡುವಂತೆ ಕರೆನೀಡಿದರು.
ಸಂಸದ ಶಿವಕುಮಾರ ಉದಾಸಿ, ಮನಮೋಹನ್ ಸಿಂಗ್ ಒಬ್ಬ ಉತ್ತಮ ಅರ್ಥಶಾಸ್ತ್ರಜ್ಞನನ್ನು ಪ್ರಧಾನಿಯನ್ನಾಗಿ ಮಾಡಿದ್ದರೂ ಸತತ 10 ವರ್ಷ ಅಧಿಕಾರ ನಡೆಸಿದ ಮನಮೋಹನ ಸಿಂಗ್ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಜನಪ್ರಿಯ ಯೋಜನೆಗಳಿಂದ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಜನರೇ ತೀರ್ಮಾನಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಪಕ್ಷದ ನೂರಾರು ಮುಖಂಡರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗುಜರಾತಿನಂತೆ ದೇಶ ಅಭಿವೃದ್ಧಿಯಾಗಲಿ
ಕಳೆದ 10 ವರ್ಷ ಕಾಂಗ್ರೆಸ್ ನಡೆಸಿದ ದುರಾಡಳಿತದಿಂದ ದೇಶ ಆಂತರಿಕ ಭದ್ರತೆ ಕಳೆದುಕೊಂಡಿದ್ದು, ನರೇಂದ್ರ ಮೋದಿಯಂಥ ಸಮರ್ಥ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ದೇಶ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಗುಜರಾತ್ ರಾಜ್ಯದಲ್ಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳು ಬಹುಶಃ ವಿಶ್ವಕ್ಕೆ ಮಾದರಿಯಾಗಿದ್ದು, ಮೋದಿ ಪ್ರಧಾನಿಯಾದ ಬಳಿಕ ಅದೇ ಮಾದರಿ ದೇಶದ ಅಭಿವೃದ್ಧಿ ಮಾಡುವ ವಿಶ್ವಾಸವಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

