ಪಠ್ಯಪೂರಕ ಸ್ಪರ್ಧೆಗಳಿಂದ ಕಲಿಕೆ ಅಭಿವೃದ್ಧಿ
ಹಾವೇರಿ: ರಸಪ್ರಶ್ನೆ, ಪ್ರಬಂಧ, ಭಾಷಣ, ಪ್ರದರ್ಶನ, ಪ್ರಾತ್ಯಕ್ಷಿಕೆಗಳಂತಹ ಹಲವಾರು ಸ್ಪರ್ಧಾ ಅವಕಾಶಗಳು ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವರದಾನದಂತಿವೆ. ಇದರಿಂದ ಕಲಿಕೆ ಸುಲಭವಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕವು ನಗರದ ಹುಕ್ಕೇರಿಮಠ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಈ ಎಲ್ಲ ಅವಕಾಶಗಳು ಪಠ್ಯಪೂರಕವಾಗಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಉತ್ಸುಕತೆಯಿಂದ ಭಾಗಿಯಾಗುವುದರಿಂದ ಕಲಿಕೆ ಗಟ್ಟಿಗೊಳ್ಳುತ್ತದೆ ಎಂದರು.
ರಸಪ್ರಶ್ನೆ ಸ್ಪರ್ಧೆ ರಾಜ್ಯ ಸಂಯೋಜಕ ಆರ್.ಎಸ್. ಪಾಟೀಲ ಮಾತನಾಡಿ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಲಿಖಿತ ಸುತ್ತಿನ ಸ್ಪರ್ಧೆ ನಡೆಸಲಾಗಿದ್ದು, ಈ ಸುತ್ತಿನಲ್ಲಿ ಅತ್ಯುತ್ತಮ ಸಾಧನೆಗೈದ ಗ್ರಾಮೀಣ ಭಾಗದ 4 ತಂಡ ಹಾಗೂ ನಗರದ ವಿಭಾಗದ 4 ತಂಡಗಳಿಗೆ ಮೌಖಿಕ ಸುತ್ತಿನ ಸ್ಪರ್ಧೆ ನಡೆಸಲಾಗುವುದು. ಅದರಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಮಟ್ಟದ ಸ್ಪರ್ಧೆಯು ಮಾ. 1ರಂದು ಬೆಂಗಳೂರಿನ ರೀಜಿನಲ್ ಇನ್ಸ್‌ಟಿಟ್ಯೂಟ್ ಆಫ್ ಕೋಲಿಪೆರೇಟಿವ್ ಮ್ಯಾನೇಜ್‌ಮೆಂಟ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಮಾದರಿಯಂತೆಯೇ ರಾಜ್ಯ ಮಟ್ಟದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಪ್ರತಿ ವಿಭಾಗದಿಂದ 4 ತಂಡಗಳನ್ನು ಮೌಖಿಕ ಸುತ್ತಿಗೆ ಪುರಸ್ಕರಿಸಲಾಗುವುದು. ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಪ್ರತಿ ವಿಭಾಗದ ತಂಡಗಳಿಗೆ ಕ್ರಮವಾಗಿ ರು. 10, 7 ಹಾಗೂ 5 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಒಟ್ಟು 88 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿ.ಎಂ. ಗಡ್ಡದೇವರಮಠ ಸ್ವಾಗತಿಸಿದರು. ಜಿ.ಎಂ. ಹತ್ತಿಮತ್ತೂರ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ. ಹಿರೇಮಠ ವಂದಿಸಿದರು. ಪಿ.ಬಿ. ಮುದ್ದಿ ಹಾಗೂ ವಿ.ಎಂ. ಗಡ್ಡದೇವರಮಠ ರಸಪ್ರಶ್ನೆ ನಡೆಸಿಕೊಟ್ಟರು.
ರಾಜ್ಯ ಮಟ್ಟಕ್ಕೆ ಆಯ್ಕೆ: ಶಹರ ವಿಭಾಗದಿಂದ ರಾಣಿಬೆನ್ನೂರು ಬಿ.ಕೆ. ಗುಪ್ತಾ ಹೈಸ್ಕೂಲಿನ ಕಿರಣ ಕಡೂರ, ಪ್ರಶಾಂತ ಬಿಡೆಮರಹಳ್ಳಿ ಹಾಗೂ ಗ್ರಾಮೀಣ ವಿಭಾಗದಿಂದ ಹಿರೇಕೆರೂರು ತಾಲೂಕಿನ ನೂಲಗೇರಿ ಸರ್ಕಾರಿ ಹೈಸ್ಕೂಲ್‌ನ ಮಧು ಮಳವಳ್ಳಿ, ಕಾವೇರಿ ಮುದಿಗೌಡ್ರ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬ್ಯಾಡಗಿಯ ಎಂಡಿಎಚ್ ಹೈಸ್ಕೂಲಿನ ಎಂ.ಎಂ. ಹಕ್ಕಿಪಿಕ್ಕಿ, ಎಸ್.ಎಸ್. ಹಾವೇರಿ ಹಾಗೂ ನರೇಗಲ್ಲಿನ ಎಸ್‌ಎಸ್‌ಪಿಎಚ್ ಹೈಸ್ಕೂಲಿನ ಶಾಂಭವಿ ಭಾಗವಾನರ, ರೂಪಾ ಕೊಪ್ಪದ ಕ್ರಮವಾಗಿ ಶಹರ ಹಾಗೂ ಗ್ರಾಮೀಣ ವಿಭಾಗದಿಂದ ದ್ವಿತೀಯ ಸ್ಥಾನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

