ಹಾವೇರಿ

ಭೂ ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

Published On :

ಹಿರೇಕೆರೂರು: ರೈತರಿಗೆ ಭೂ ಪರಿಹಾರ ಹಾಗೂ ಕಾಲುವೆ ಒಡೆದು ನಷ್ಟವಾದ ಬೆಳೆಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ಸದಸ್ಯರು ತಾಲೂಕಿನ ತುಂಗಾ ಮೇಲ್ದಂಡೆ ಕಚೇರಿ ಎದುರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ, ತುಂಗಾ ಮೇಲ್ದಂಡೆ ಕಾಲುವೆಗೆ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ನೀಡಿಲ್ಲ. ಸಿಗಬೇಕಾದ ನಷ್ಟ ಪರಿಹಾರ ದೊರೆಯದೆ ರೈತರು ಕಚೇರಿಗೆ ಆಲೆದಾಡುವಂತಾಗಿದೆ. ರೈತರ ಗೋಳನ್ನು ಕೇಳುವವರಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ. ಆದ್ದರಿಂದ ನೀರಾವರಿ ಸಚಿವರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ನೀಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ. ಬೇಡಿಕೆ ಈಡೇರಿಸುವರೆಗೂ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಸುಭಾಸ ಗವಿಯಪ್ಪನವರ ಮಾತನಾಡಿ, ಮಕರಿ ಗ್ರಾಮದಲ್ಲಿ ಮಳೆಗಾಲದಲ್ಲಿ ಮುಖ್ಯ ಕಾಲುವೆ ಒಡದ ಪರಿಣಾಮವಾಗಿ ರೈತರಿಗೆ ಭಾರಿ ನಷ್ಟ ಆಗಿದೆ. ಆದರೆ ಇಲಾಖೆಯ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸದೆ ಉದ್ಧಟತನ ಮಾಡುತ್ತಿದ್ದಾರೆ. ತಾಲೂಕಿನ ಕಮಲಾಪುರದಿಂದ ನೇಶ್ವಿ ಗ್ರಾಮದವರೆಗೂ 21 ಗ್ರಾಮಗಳ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಣಿಬೆನ್ನೂರು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ರೈತರಿಗೆ ಭೂ ಪರಿಹಾರದ ಚೆಕ್ ವಿತರಿಸಿದೆ ಇದ್ದಲ್ಲಿ ಮುಂಬರುವ ಲೋಕ ಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಗದಿಗಪ್ಪ ದಾನಮ್ಮನವರ, ಚಂದ್ರು ಜೋಗಿಹಳ್ಳಿ, ಶಿವನಗೌಡ ಪಾಟೀಲ, ಮಲ್ಲನಗೌಡ ಸೊರಟೂರ, ಹನುಮಂತಗೌಡ ಭರಮಣ್ಣನವರ, ವೀರಣ್ಣ ಹಲಗೇರಿ, ನಾಗಮ್ಮ ಅಂಗಡಿ, ಕಾಮವ್ವ ಹಿರೇಕುರುಬರ, ಸರೋಜಾ ಮರಡಿ, ಎಚ್.ಎ. ಮುಲ್ಲಾ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.