ಸುಗಮ ಸಂಚಾರಕ್ಕೆ ಸಿದ್ಧಗೊಂಡ ಮೇಲ್ಸೇತುವೆ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 26
ನಗರದ ರೇಲ್ವೆ ನಿಲ್ದಾಣದ ಸಮೀಪ ಹಾದು ಹೋಗಿರುವ ಯಕ್ಕುಂಬಿ ಹಾಗೂ ಮೊಳಕಾಲ್ಮೂರು ರಾಜ್ಯ ಹೆದ್ದಾರಿ 2ರ ರೇಲ್ವೆ ಕೆಳ ಸೇತುವೆಯಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಹರಸಾಹಸಪಡುತ್ತಿದ್ದ ಸಾರ್ವಜನಿಕರು, ಪ್ರಯಾಣಿಕರ ಹಾಗೂ ರೈತರ ಬಹುದಿನದ ಕನಸು ಇದೀಗ ನನಸಾಗಿದೆ. ರೇಲ್ವೆ ಮೇಲ್ಸೇತುವೆ ಸಿದ್ಧಗೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ.
ಮಳೆ ಬಂದರೆ ಸಾಕು ಸಹಜವಾಗಿಯೇ ಈಜುಗೊಳವಾಗುತ್ತಿದ್ದ ಯಕ್ಕುಂಬಿ ಮೊಳಕಾಲ್ಮೂರು ರಾಜ್ಯ ಹೆದ್ದಾರಿ 2ರ ರೇಲ್ವೆ ಕೆಳ ಸೇತುವೆಗೆ ಪರ್ಯಾಯವಾಗಿ ಸುಮಾರು ರು. 37 ಕೋಟಿ ವೆಚ್ಚದಲ್ಲಿ (ಆರ್‌ಒಬಿ) ರೇಲ್ವೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಅಧಿಕೃತ ಉದ್ಘಾಟನೆಗೊಳ್ಳದಿದ್ದರೂ ಸಾರ್ವಜನಿಕರು ಸಂಚಾರಕ್ಕೆ ಬಳಕೆ ಮಾಡಲು ಆರಂಭಿಸಿದ್ದಾರೆ.
ಟ್ರಾಫಿಕ್ ಜಾಮ್
ಕೇಂದ್ರ ಹಾಗೂ ರಾಜ್ಯ ಸರ್ಕಾರದ 50-50 ಅನುದಾನದಲ್ಲಿ ನಿರ್ಮಾಣಗೊಂಡ ಸೇತುವೆ ಇದೀಗ ಜಿಲ್ಲೆಯ ಮೊದಲ ರೇಲ್ವೆ ಮೇಲ್ಸೇತುವೆ ಎಂಬ ಖ್ಯಾತಿಯನ್ನೂ ಪಡೆದಿದೆ. ರೇಲ್ವೆ ಕೆಳಸೇತುವೆ ಇಕ್ಕಟ್ಟಾದ ತಿರುವುಮುರುವು ಜಾಗದಲ್ಲಿದ್ದುದರಿಂದ ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಅಲ್ಲದೆ, ರಸ್ತೆಯೂ ಕೆಟ್ಟು ವಾಹನ ಸಂಚಾರಕ್ಕೆ ಅಯೋಗ್ಯವಾಗುತ್ತಿತ್ತು. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಸಾರ್ವಜನಿಕರು, ಪ್ರಯಾಣಿಕರು ಹಾಗೂ ರೈತರು ಪ್ರತಿಭಟನೆ ಮಾಡಿದಾಗೊಮ್ಮೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಾತ್ಕಾಲಿಕವಾಗಿ ರೇಲ್ವೆ ಕಳೆ ಸೇತುವೆ ರಸ್ತೆಯನ್ನು ದುರಸ್ತಿ ಮಾಡುವುದು ಸಾಮಾನ್ಯವಾಗಿತ್ತು. ಆರಂಭದಲ್ಲಿ ರು. 23 ಕೋಟಿ ಸಿದ್ಧಗೊಂಡಿದ್ದ ಕ್ರಿಯಾಯೋಜನೆ, ನಂತರ ರು. 28 ಕೋಟಿಗೆ ಹೆಚ್ಚಳಗೊಂಡು, ಭೂಸ್ವಾಧೀನ, ಸೇತುವೆ ಅಕ್ಕ ಪಕ್ಕದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ, ಬೀದಿ ದೀಪ ಸೇರಿ ಒಟ್ಟು ರು. 37 ಕೋಟಿ ವೆಚ್ಚ ತಗುಲಿದೆ.
ಯೋಜನೆ ಆರಂಭ
ಮೊದಲು ರೇಲ್ವೆ ಇಲಾಖೆ ಕರೆದಿದ್ದ ಮೇಲ್ಸೇತುವೆ ಕಾಮಗಾರಿ ಟೆಂಡರ್‌ನ್ನು ಬಾಗಲಕೋಟೆ ವಿಜಯ್ ಕನ್‌ಸ್ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದು, ರು. 17ಕೋಟಿ ಕಾಮಗಾರಿ ಪೂರ್ಣಗೊಳಿಸಿತ್ತು. ನಂತರ ಮೇಲ್ಸೇತುವೆ ಅಕ್ಕ ಪಕ್ಕದಲ್ಲಿ ಸರ್ವೀಸ್ ರಸ್ತೆ, ಬೀದಿ ದೀಪ ಸೇರಿ ರು. 20 ಕೋಟಿ ಗುತ್ತಿಗೆ ಕಾಮಗಾರಿಯನ್ನು ದಾವಣಗೆರೆ ಗುತ್ತಿಗೆದಾರ ಶಿವಕುಮಾರ ಪಡೆದು ಕೆಲಸ ಆರಂಭಿಸಿದರು. ಆದರೆ, ಈ ಪೈಕಿ ರಾಜ್ಯ ಸರ್ಕಾರದ ರು. 6 ಕೋಟಿ ಬಾಕಿ ಹಣ ಬಿಡುಗಡೆಯಾಗಬೇಕಿದೆ.
ಅಕ್ಕಮಹಾದೇವಿ ಸರ್ಕಲ್‌ನಿಂದ ಎಪಿಎಂಸಿ ಮಾರುಕಟ್ಟೆ ವರೆಗೆ 600 ಮೀಟರ್ ಹೆದ್ದಾರಿ ನಿರ್ಮಿಸಲಾಗಿದೆ. ಹೆದ್ದಾರಿಯ ಎಡ, ಬಲ ಬದಿಗಳಲ್ಲಿ 50 ಬೀದಿ ದೀಪಗಳನ್ನು ಅಳವಡಿಸಿದೆ. ರಾತ್ರಿ ಸಂಚಾರದ ಅನುಕೂಲಕ್ಕಾಗಿ ಮೇಲ್ಸೇತುವೆ ಕೆಳಗೆ 400 ಮೆಗಾ ವ್ಯಾಟ್‌ನ ಫ್ಲಡ್‌ಲೈಟ್ಸ್‌ಗಳನ್ನು ಅಳವಡಿಸಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ವಿಜಯಕುಮಾರ.
ಯಕ್ಕುಂಬಿ ಹಾಗೂ ಮೊಳಕಾಲ್ಮೂರ ರಾಜ್ಯ ಹೆದ್ದಾರಿಯ ರೇಲ್ವೆ ಕೆಳ ಸೇತುವೆ ಮಳೆಗಾಲದಲ್ಲಿ ಸದಾ ನೀರಿನಿಂದ ಆವೃತ್ತಗೊಳ್ಳುತ್ತಿದ್ದ ಕಾರಣ ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸುವುದು ಸವಾಲಿನ ಕೆಲಸವಾಗಿತ್ತು. ಇದೀಗ ಮೇಲ್ಸೇತುವೆ ನಿರ್ಮಿಸಿದ್ದರಿಂದ ಯಾವುದೇ ಅಡ್ಡಿ, ಆತಂಕವಿಲ್ಲದೇ ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗಿದೆ ಎಂದು ಹೇಳುತ್ತಾರೆ ರೈತ ಶರಣಪ್ಪ ಗುತ್ತಲ.
ಶೀಘ್ರದಲ್ಲಿ ಬಾಕಿ ಉಳಿದ ಸಣ್ಣಪುಟ್ಟ ಕಾಮಗಾರಿ ಮುಗಿಸಿ ಅಧಿಕೃತವಾಗಿ ಮೇಲ್ಸೇತುವ ಮುಕ್ತಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
- ವೀರೇಶ ಮಡ್ಲೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

