ಹಾಲು ಸೇವಿಸಿ ವಿದ್ಯಾರ್ಥಿ ಅಸ್ವಸ್ಥ: ಪಾಲಕರಲ್ಲಿ ಆತಂಕ
ಹಾವೇರಿ: ಕ್ಷೀರಭಾಗ್ಯದ ಹಾಲು ಸೇವಿಸಿ ವಿದ್ಯಾರ್ಥಿಯೊಬ್ಬ ವಾಂತಿ ಮಾಡಿಕೊಂಡಿದ್ದಕ್ಕೆ ಗಾಬರಿಗೊಂಡ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಘಟನೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂದಿನಂತೆ ಬುಧವಾರ ಬೆಳಗ್ಗೆ ಮಕ್ಕಳಿಗೆ ಕುಡಿಯಲು ಕ್ಷೀರಭಾಗ್ಯದ ಹಾಲು ನೀಡಿದ್ದಾರೆ. ಹಾಲು ಕುಡಿದ ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿಯೊಬ್ಬ ವಾಂತಿ ಮಾಡಿಕೊಂಡಿದ್ದಾನೆ. ಇದನ್ನು ನೋಡಿದ ಕೆಲ ವಿದ್ಯಾರ್ಥಿಗಳು ಸಹ ನಮಗೂ ವಾಂತಿ ಬಂದಂತಾಗುತ್ತಿದೆ. ಹೊಟ್ಟೆ ನೋವು ಎಂದಿದ್ದಾರೆ.
ಆಗ ಶಿಕ್ಷಕರು ಸಿಕ್ಕ ಸಿಕ್ಕ ವಾಹನದಲ್ಲಿ ಮಕ್ಕಳನ್ನು ಹತ್ತಿಸಿಕೊಂಡು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷಿಸಿ ಚುಚ್ಚುಮದ್ದು ನೀಡಿದ ವೈದ್ಯರು, ಮಕ್ಕಳಿಗೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿ ವಾಪಸ್ ಊರಿಗೆ ಕಳುಹಿಸಿದರು.
ವಿದ್ಯಾರ್ಥಿ ಆರೋಗ್ಯ ಸರಿಯಾಗಿರಲಿಲ್ಲ
ಹಾಲು ಕುಡಿದು ವಾಂತಿ ಮಾಡಿಕೊಂಡ ವಿದ್ಯಾರ್ಥಿ ಜ್ವರದಿಂದ ಬಳಲುತ್ತಿದ್ದ. ಆರೋಗ್ಯ ಸರಿ ಇಲ್ಲದಾಗ ಏನನ್ನಾದರೂ ಸೇವಿಸಿದರೆ ಕೆಲವರಿಗೆ ವಾಂತಿಯಾಗುತ್ತದೆ. ಅದರಂತೆ ಹಾಲು ಸೇವಿಸಿದ ತಕ್ಷಣ ಆ ವಿದ್ಯಾರ್ಥಿಗೆ ವಾಂತಿ ಆಗಿದೆ. ಉಳಿದ ವಿದ್ಯಾರ್ಥಿಗಳಲ್ಲಿ ಅಂತಹ ಯಾವುದೇ ಲಕ್ಷಣಗಳಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.
ಶಿಕ್ಷಕಿ ತರಾಟೆ
ಶಾಲೆಯಲ್ಲಿ ಹಾಲು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಶಾಲೆಗೆ ದೌಡಾಯಿಸಿದ್ದಾರೆ. ತಮ್ಮ ಮಕ್ಕಳನ್ನು ಕಂಡು ಹಾಲು ಕುಡಿದಿದ್ದೀರಾ, ಏನಾದರೂ ಆಗುತ್ತಿದೆಯಾ ಎಂದು ವಿಚಾರಿಸಿದ್ದಾರೆ. ತಮ್ಮ ಸಹಪಾಠಿ ವಾಂತಿ ಮಾಡಿರುವುದನ್ನು ನೋಡಿರುವ ವಿದ್ಯಾರ್ಥಿಗಳು ತಮ್ಮ ಪಾಲಕರ ಎದುರು ನಮಗೂ ವಾಂತಿ ಬಂದಂತಾಗುತ್ತಿದೆ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪಾಲಕರು ಮುಖ್ಯ ಶಿಕ್ಷಕಿ ವಿ.ಎನ್. ಬಡಿಗೇರ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ನಮ್ಮ ಮಕ್ಕಳಿಗೆ ಏನಾದರೂ ಆದರೆ, ನಾವು ಸುಮ್ಮನೆ ಬಿಡುವುದಿಲ್ಲ ಎಂಬ ಬೆದರಿಕೆಯನ್ನು ಸಹ ಹಾಕಿದ್ದಾರೆ.
ಸ್ಥಳಕ್ಕೆ ಬಿಇಓ ಭೇಟಿ
ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಸುದ್ದಿ ತಿಳಿದ ತಕ್ಷಣವೇ ತಾಲೂಕು ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹಾಗೂ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಝೆಡ್.ಎಂ. ಖಾಜಿ, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಅಲ್ಲದೆ, ಅಳುತ್ತ ನಿಂತಿದ್ದ ಮುಖ್ಯ ಶಿಕ್ಷಕಿಗೆ ಸಮಾಧಾನ ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

