ಹಾವೇರಿ

ಭಕ್ತಿ ಸಿಂಚನಕ್ಕೆ ಸಾಕ್ಷಿಯಾದ ಶಿವರಾತ್ರಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 27
ಓ ನಮಃ ಶಿವಾಯ.. ಎಂಬ ಷಡಕ್ಷರಿ ಮಂತ್ರ ಗುರುವಾರ ಎಲ್ಲೆಡೆ ಪಠಣ ಮಾಡುವ ಮೂಲಕ ಶಿವನ ಭಕ್ತರು ದೈವಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಿದರು. ಇಲ್ಲಿನ ಈಶ್ವರ ದೇವಸ್ಥಾನ, ಪುರಸಿದ್ದೇಶ್ವರ ದೇವಸ್ಥಾನ, ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನಗಳ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶಿವಮೂರ್ತಿಗೆ ಜನತೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಿಂಚನದಲ್ಲಿ ಮಿಂದು ಪುಳಕಿತರಾದರು.
ಶಿವರಾತ್ರಿಯ ವಿಶೇಷ ಪೂಜೆಗೆ ಬಹುತೇಕ ಎಲ್ಲ ಕಡೆಗಳಲ್ಲೂ ದೇವಸ್ಥಾನಗಳು ವಿಶೇಷ ಪೂಜೆ ಆಯೋಜಿಸಿದ್ದವು. ಅದ್ಧೂರಿ ಶಿವರಾತ್ರಿ ಆಚರಣೆಗೆ ನಗರದ ಜನತೆ ಸಿದ್ಧತೆಯಲ್ಲಿ ತೊಡಗಿತ್ತು. ಬೆಳಗ್ಗೆಯಿಂದ ಶ್ವೇತ ವಸ್ತ್ರಧಾರಿಗಳ ದಂಡು ವಿಶೇಷವಾಗಿ ಶಿವದೇವಾಲಯಗಳಲ್ಲಿ ಕಂಡು ಬಂದಿತು.
ವಿಶೇಷ ಪೂಜೆ: ಶಿವ ದೇವಾಲಯಗಳಲ್ಲಿ ಮಹಿಳಾ ಮಣಿಗಳು ವಿಶೇಷ ಪೂಜಾ ಕಾರ್ಯಗಳಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿತ್ತು. ಅಲ್ಲಲ್ಲಿ ಸಿಗುವ ಬನ್ನಿಗಿಡ, ಪತ್ರಿ ಗಿಡಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಧನ್ಯತಾಭಾವ ಮೆರೆದರು. ದೇವಸ್ಥಾನಗಳಲ್ಲಿ ಬಿಲ್ವಾರ್ಚನೆ, ಲಕ್ಷ ಬಿಲ್ವಾರ್ಚನೆ, ಎಲೆಪೂಜೆ, ಕಂಕಣಪೂಜೆ, ಅಭಿಷೇಕ, ಕ್ಷೀರಾಭಿಷೇಕದಲ್ಲಿ ಭಕ್ತರು ತೊಡಗಿದ್ದರು.
ಬೆಳಗ್ಗೆಯಿಂದಲೇ ಶಿವ ದೇವಾಲಯಗಳತ್ತ ಬರಲು ಆರಂಭಿಸಿದ ಭಕ್ತ ಸಮುದಾಯ ಬರಬರುತ್ತಾ ಜನಸಾಗರವಾಯಿತು. ಮಧ್ಯಾಹ್ನದ ಸುಡು ಬಿಸಿಲಿಗೆ ಕೊಂಚ ವಿರಳ ಎನ್ನಿಸಿದರೂ ಮೂರು ಗಂಟೆ ಬಳಿಕ ಮತ್ತೆ ಜಾಗರಣೆ ಹಾಗೂ ಸಂಜೆಯ ವಿಶೇಷ ಪೂಜೆಗೆ ಸಿದ್ದತೆ ಜೋರಾಗಿ ಕಂಡು ಬಂದಿತು. ಶಿವರಾತ್ರಿಯಂದು ಬಿಲ್ವಪತ್ರೆಗೆ ವಿಶೇಷ ಬೇಡಿಕೆ. ಇದನ್ನು ಮಾರಾಟ ಮಾಡಬಾರದು ಎಂಬ ನಂಬಿಕೆ. ಹೀಗಾಗಿ ನಗರದಲ್ಲಿ ಬಿಲ್ವಪತ್ರೆ ಮರಗಳಿದ್ದಲ್ಲಿಗೆ ತೆರಳಿದ ಭಕ್ತರು ಕೈಗೆ ನಿಲುಕಿದಷ್ಟು ಬಿಲ್ವಪತ್ರೆ ಪಡೆದರು. ಕೆಲವರು ಏಣಿ ಹಿಡಿದು ಮರವೇರಿ ಪತ್ರೆ ಸಂಗ್ರಹಿಸಿದರು. ಸಿಂದಗಿ ಮಠದ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾಗರಣೆಯಲ್ಲೂ ಜನತೆ ಪಾಲ್ಗೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಹಿರಿಯರು ಶಿವಾನಂದಪ್ಪ ಹಾಲಪ್ಪನವರ, ಶಿವರಾತ್ರಿ ಆಚರಣೆ ಇಡೀ ವರ್ಷದ ಪಾಪ ತೊಳೆಯುವ, ಪಶ್ಚಾತ್ತಾಪದಿಂದ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ದಿನ. ಇಂದು ಶಿವಧ್ಯಾನದಲ್ಲಿ ತೊಡಗಿಸಿಕೊಂಡು ಮಾಡಿದ ಕೆಲಸ ಜೀವನಕ್ಕೆ ನಾಂದಿ ಹಾಡುತ್ತದೆ ಎಂದರು.
-ವೀರೇಶ ಮಡ್ಲೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.