ಅಧಿಕಾರಿಗಳೇ, ಶುದ್ಧ ನೀರು ಘಟಕಗಳೆಲ್ಲಿ?
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 1
ಜಿಲ್ಲೆಯಲ್ಲಿ ಇನ್ನೂ ಕುಡಿಯಲು ಅಶುದ್ಧ ನೀರನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ಭಾಗದ ಜನರ ಸ್ಥಿತಿ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ. ಫ್ಲೋರೈಡ್ಯುಕ್ತ ನೀರು ಬರುವ ಕಡೆಗಳಲ್ಲಿ ಡಿಸೆಂಬರ್ ಅಂತ್ಯದೊಳಗೆ ಶುದ್ಧ ನೀರಿನ ಘಟಕ ಆರಂಭಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವರೇ ಸೂಚಿಸಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ.
ಫ್ಲೋರೈಡ್ಯುಕ್ತ ನೀರಿನಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಎಚ್.ಕೆ.ಪಾಟೀಲರು ತೀವ್ರ ಆಸಕ್ತಿ ವಹಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಅನುಷ್ಠಾನಗೊಂಡಿಲ್ಲ. ಇದರಿಂದ ಜಿಲ್ಲೆಯ 196 ಗ್ರಾಮಗಳ ಜನರು ಅಶುದ್ಧ ಹಾಗೂ ರಾಸಾಯನಿಕಯುಕ್ತ ನೀರನ್ನು ಕುಡಿಯುವಂತಾಗಿದೆ. ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತಿದೆ.
196 ಹಳ್ಳಿಯಲ್ಲಿ ಅಶುದ್ಧ ನೀರು: ಜಿಲ್ಲೆಯಲ್ಲಿ 196 ಗ್ರಾಮಗಳಲ್ಲಿ ಫ್ಲೋರೈಡ್ಯುಕ್ತ ನೀರು ಪೂರೈಕೆಯಗುತ್ತಿದೆ. ಈ ಗ್ರಾಮಗಳಿಗೆ ಶುದ್ಧ ಕುಡಿವ ನೀರು ಘಟಕ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, 135 ಗ್ರಾಮಗಳಲ್ಲಿ ಘಟಕ ಆರಂಭಿಸಲು ಕಟ್ಟಡಗಳು ಸಿದ್ಧವಾಗಿವೆ ಎಂದು ಮಾಹಿತಿ ನೀಡಿದ್ದರು. ಆದರೆ ಘಟಕ ಆರಂಭಿಸಲು ಸುಸಜ್ಜಿತ ಕಟ್ಟಡಗಳನ್ನು ತೋರಿಸಲು ಅಧಿಕಾರಿಗಳು ಇನ್ನೂ ಹೆಣಗಾಡುತ್ತಿದ್ದಾರೆ. ಎಲ್ಲ ತಾಲೂಕುಗಳನಲ್ಲಿ ಕನಿಷ್ಠ 10 ಘಟಕ ಆರಂಭಿಸಲು ಹಳೆಯ ಕಟ್ಟಡಗಳನ್ನು ನವೀಕರಿಸಿ ವಾರದೊಳಗೆ ಮಾಹಿತಿ ನೀಡುವಂತೆ ಪಿಆರ್ಇ ಹಾವೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಲ್ಲ ತಾಲೂಕು ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಉಪವಿಭಾಗದ ಆಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಜಿಪಂ ಸಿಇಒಗೆ ಗ್ರಾಪಂಗಳಿಂದ ಗ್ರಾಮಗಳಲ್ಲಿ ಘಟಕ ಸ್ಥಾಪನೆಗೆ ಕಟ್ಟಡ ದೊರಕಿಸಿ ಕೊಡುವಂತೆ ನ. 8ರಂದು ಜಿಪಂ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಿಂದ ಪತ್ರ ಬರೆಯಲಾಗಿತ್ತು. ಹಾಗಾಗಿ ಜಿಪಂ ಸಿಇಒ ತಾಪಂ ಇಒಗಳಿಗೆ ನವೆಂಬರ್ ಅಂತ್ಯದೊಳಗೆ ಪ್ರತಿ ತಾಲೂಕಿನಲ್ಲಿ ಕನಿಷ್ಠ 10 ಘಟಕಗಳನ್ನು ಆರಂಭಿಸಲು ಕಟ್ಟಡ ಒದಗಿಸುವಂತೆ ಸೂಚಿಸಿದ್ದರು. ಆದರೆ ಕಟ್ಟಡ ನವೀಕರಿಸಿರುವ ಬಗ್ಗೆ ಮಾಹಿತಿ ನೀಡಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯದೊಳಗೆ ಶುದ್ಧ ನೀರಿನ ಘಟಕ ಆರಂಭಿಸುವ ಪ್ರಯತ್ನ ವಿಫಲವಾಗಿದೆ. ಅಧಿಕಾರಿಗಳು ಸಾರ್ವಜನಿಕರ ಆರೋಗ್ಯದ ಬಗ್ಗೆ ಎಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಇದರಲ್ಲೇ ಕಂಡುಬರುತ್ತದೆ.
ಆದೇಶಕ್ಕೆ ಕಿಮ್ಮತ್ತಿಲ್ಲ: ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತ ಸಚಿವರು ಈಚೆಗೆ ಜಿಲ್ಲೆಗೆ ಭೇಟಿ ನೀಡಿದ ಸಮಯದಲ್ಲಿ ಡಿಸೆಂಬರ್ ಅಂತ್ಯಕ್ಕೆ ಕನಿಷ್ಠ 70 ಗ್ರಾಮಗಳಲ್ಲಾದರೂ ಘಟಕ ಸ್ಥಾಪಿಸಲು ಸೂಚಿಸಿದ್ದರು. ಆದರೆ 70 ಗ್ರಾಮಗಳ ಪಟ್ಟಿಯನ್ನು ತಯಾರಿಸುವಲ್ಲೂ ಅಧಿಕಾರಿಗಳು ಅಸಡ್ಡೆ ತೋರಿದ್ದಾರೆ. ಫ್ಲೋರೈಡ್, ಅರ್ಸೆನಿಕ್, ನೈಟ್ರೇಟ್ನಂತಹ ಹಾನಿಕಾರಕ ಅಂಶಗಳು ನೀರಿನಲ್ಲಿರುವ ಗ್ರಾಮಗಳಿಗೆ ಪ್ರಥಮ ಆದ್ಯತೆ ನೀಡಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ ಜನತೆಗೆ ಕುಡಿಯಲು ಶುದ್ಧ ನೀರು ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಅಧಿಕಾರಿಗಳು ಮಾತ್ರ ಸರ್ಕಾರದ ಆಶಯಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿರುವುದು ಜಿಲ್ಲೆಯ ಗ್ರಾಮೀಣ ಜನರ ದೌರ್ಭಾಗ್ಯವೆಂದೇ ಹೇಳಬೇಕು.
ಈ ಕುರಿತು ಜಿಪಂ ಸಿಇಒ ಕೆ.ಬಿ. ಆಂಜನಪ್ಪ ಅವರನ್ನು ಕೇಳಿದಾಗ, ಜಿಲ್ಲೆಯಲ್ಲಿ ಅಶುದ್ಧ ಕುಡಿವ ನೀರು ಪೂರೈಕೆ ಆಗುತ್ತಿರುವ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಆರಂಭಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪಿಆರ್ಇ ಇಲಾಖೆಯಿಂದ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲಿ ಪ್ರತಿ ತಾಲೂಕಿನಲ್ಲಿ ತಲಾ 10ರಂತೆ ನೀರಿನ ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಸೂಚನೆ ನೀಡಿದ್ದ ಸಚಿವ ಪಾಟೀಲ್
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲರು 2013ರ ಸೆ. 5ರಂದು ಹಾವೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಶುದ್ಧ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ತಲಾ 25ರಂತೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಅದಕ್ಕಾಗಿ ಆಯಾ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಡಿಸೆಂಬರ್ ಅಂತ್ಯದೊಳಗೆ ಗ್ರಾಮೀಣ ಜನರಿಗೆ ಶುದ್ಧ ಕುಡಿವ ನೀರು ಒದಗಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದರು. ಗ್ರಾಪಂ ಹಾಗೂ ಸರ್ಕಾರಕ್ಕೆ ಸೇರಿದ ಖಾಲಿ ಇರುವ ಹಳೆಯ ಕಟ್ಟಡಗಳನ್ನು ನೀರಿನ ಘಟಕ ಸ್ಥಾಪನೆಗೆ ಗುರುತಿಸಬೇಕು. ಹಳೆಯ ಕಟ್ಟಡಗಳು ಇಲ್ಲದ ಕಡೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಬೇಕು ಎಂದೂ ಸಚಿವರು ಆದೇಶಿಸಿದ್ದರು.
- ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

