ಹಾವೇರಿ

ಹಾವೇರಿ ಬಸ್ ನಿಲ್ದಾಣಕ್ಕೆ ಬಾಲಗ್ರಹ ಪೀಡೆ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 2
ಜಿಲ್ಲಾ ಕೇಂದ್ರ ಬಸ್ ನಿಲ್ದಾಣಕ್ಕೆ ಬಾಲಗ್ರಹ ಪೀಡೆಯೇ ಮುಗಿಯುತ್ತಿಲ್ಲ. ಮೂರು ವರ್ಷಗಳ ಹಿಂದೆ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು ಕೆಲಸ ಕೈಬಿಟ್ಟು ಹೋದರೆ, ಹೊಸದಾಗಿ ಟೆಂಡರ್ ಪಡೆದವರಿಗೆ ಮರಳು ಸಮಸ್ಯೆ ಎದುರಾಗಿದೆ. ಇದರಿಂದ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ತೆವಳುತ್ತಿದೆ.
'ಏನ್ರೀ, ಇದೇನಾ ಹಾವೇರಿ ಬಸ್ ನಿಲ್ದಾಣ?' ಎಂಬ ಉದ್ಗಾರ ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರ ಬಾಯಲ್ಲೂ ಬರುತ್ತದೆ. ಅನೇಕ ವರ್ಷಗಳಿಂದ ಹಾವೇರಿಗೆ ಬರುವ ಜನರಿಗಂತೂ ಬಸ್ ನಿಲ್ದಾಣದ ದುಸ್ಥಿತಿ ನೋಡಿ ಸಾಕಾಗಿದೆ. ನಿಲ್ದಾಣದ ಆವರಣದಲ್ಲಿ ಮಳೆಗಾಲದಲ್ಲಿ ಮೊಣಕಾಲ ವರೆಗೆ ರಾಡಿ ಮೆತ್ತಿದರೆ, ಈಗ ಧೂಳುಮಯ. ರಾಷ್ಟ್ರೀಯ ಹೆದ್ದಾರಿ ಮೇಲಿನ ಪ್ರಮುಖ ಸ್ಥಳವಾದರೂ ಇದುವರೆಗೆ ಸುಸಜ್ಜಿತ ನಿಲ್ದಾಣ ಆಗದಿರುವುದು ದೌರ್ಭಾಗ್ಯವೇ ಸರಿ. ನಿಲ್ದಾಣದಲ್ಲಿ ಸಮರ್ಪಕ ಆಸನ ವ್ಯವಸ್ಥೆಯಿಲ್ಲ. ಬಿಸಿಲಿಗೆ ನೆತ್ತಿ ಸುಡುತ್ತಿದ್ದರೂ ಟವೆಲ್, ಸೆರಗು ಹೊದ್ದು ನಿಂತಿರಬೇಕೇ ಹೊರತು ನೆರಳಿಲ್ಲ. ಇನ್ನು ಶೌಚಾಲಯ, ಕುಡಿವ ನೀರಿನ ವ್ಯವಸ್ಥೆಯಂತೂ ಸಾರಿಗೆ ಸಂಸ್ಥೆಗೇ ಪ್ರೀತಿ.
ಮರಳು ಸಮಸ್ಯೆ
2011ರಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿಗಾಗಿ ಶ್ರೀದೇವಿ ಕನ್‌ಸ್ಟ್ರಕ್ಷನ್ ಎಂಬ ಕಂಪನಿ ಟೆಂಡರ್ ಪಡೆದು ಆರಂಭಿಸಿತ್ತು. ರು. 6 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ ಆಗುತ್ತದೆ ಎಂದು ಎಲ್ಲರೂ ಖುಷಿ ಪಟ್ಟಿದ್ದರು. ಆದರೆ ಗುತ್ತಿಗೆದಾರರು ವೈಯಕ್ತಿಕ ಕಾರಣಕ್ಕಾಗಿ ಕಾಮಗಾರಿ ಬಿಟ್ಟು ಹೋದರು. ಕಾಮಗಾರಿ ಸ್ಥಗಿತಗೊಂಡಿತು. ಇದೇ ಸ್ಥಿತಿಯಲ್ಲಿ ಎರಡು ವರ್ಷ ತಳ್ಳಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮರು ಟೆಂಡರ್ ಕರೆದಿತ್ತು. ಈಗ ಮೈಕಾನ್ ನಿರ್ಮಾಣ ಸಂಸ್ಥೆ ಗುತ್ತಿಗೆ ಪಡೆದಿದ್ದು, ನಿಲ್ದಾಣದ ನಿರ್ಮಾಣ ವೆಚ್ಚ ರು. 7.40 ಕೋಟಿಗೆ ಏರಿದೆ. ಕಳೆದ ತಿಂಗಳು ಸ್ಥಳೀಯ ಶಾಸಕರು ನಿಲ್ದಾಣ ಕಾಮಗಾರಿಗೆ ಮತ್ತೆ ಗುದ್ದಲಿ ಪೂಜೆ ನೆರವೇರಿಸಿದರು. ಕಾಮಗಾರಿ ಇನ್ನಾದರೂ ಭರದಿಂದ ಸಾಗುತ್ತದೆ ಎಂದು ಜನ ಅಂದುಕೊಂಡಿದ್ದರು.
ಆದರೆ, ಈಗ ಮರಳು ಸಮಸ್ಯೆ ಎದುರಾಗಿದೆ. ಒಂದು ಲೋಡ್ ಮರಳಿನ ಬೆಲೆ ರು. 40- 45 ಸಾವಿರಕ್ಕೆ ಏರಿದೆ. ಸದ್ಯಕ್ಕೆ ಕಾಮಗಾರಿ ನಿಂತಿದೆ. ನಿಲ್ದಾಣ ಆವರಣದಲ್ಲಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರೂ ಕಾಮಗಾರಿ ಚುರುಕು ಪಡೆದುಕೊಂಡಿಲ್ಲ. ಮರಳು ಕೊರತೆಯಿಂದ ಕಟ್ಟಡ ಮೇಲೇಳುತ್ತಿಲ್ಲ. ಕೈತುಂಬ ಕೆಲಸವಿಲ್ಲದೆ ಕಾರ್ಮಿಕರು ಕೂತಿದ್ದರೆ, ಗುತ್ತಿಗೆದಾರರು ನಷ್ಟ ಅನುಭವಿಸುವಂತಾಗಿದೆ.
ಪ್ರಯಾಣಿಕರ ಗೋಳು
ಬಸ್ಸಿಗಾಗಿ ಇಲ್ಲಿಯ ನಿಲ್ದಾಣದಲ್ಲಿ ಕಾಯುವವರ ಗೋಳು ಹೇಳತೀರದು. ದೂರದ ಹಳ್ಳಿಗಳಿಂದ ಬರುವವರು, ಶಾಲಾ ಕಾಲೇಜು ವಿದ್ಯಾರ್ಥಿಗಳು ನಿಲ್ದಾಣದಲ್ಲಿ ಮೂಲಸೌಲಭ್ಯ ಇಲ್ಲದ್ದರಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲಲ್ಲಿ ನಾಲ್ಕು ಶೆಡ್ ಕಟ್ಟಿದ್ದು, ಅದರಲ್ಲಿ ಆಸನ ವ್ಯವಸ್ಥೆಯೂ ಸರಿಯಿಲ್ಲ. ಪ್ರಯಾಣಿಕರು ಅನಿವಾರ್ಯವಾಗಿ ಬಿಸಿಲಲ್ಲೇ ನಿಲ್ಲುತ್ತಿದ್ದರೆ, ಧೂಳಿನ ಸಮಸ್ಯೆಯಿಂದ ಮತ್ತಷ್ಟು ಹೈರಾಣಾಗಿದ್ದಾರೆ. ಧೂಳು ನಿವಾರಣೆಗೆ ನೀರು ಚಿಮುಕಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಅದು ಸಾಲುತ್ತಿಲ್ಲ. ಬಸ್ ಬಂತೆಂದರೆ ಧೂಳು ಹಿಂಬಾಲಿಸುತ್ತದೆ. ಶೌಚಾಲಯ, ಕುಡಿವ ನೀರಿನ ಸೌಲಭ್ಯವೂ ಸರಿಯಾಗಿಲ್ಲದೆ ವಿದ್ಯಾರ್ಥಿನಿಯರು, ಮಹಿಳೆಯರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಹಾವೇರಿ ಮೂಲಕ ಹಾದುಹೋಗುವ ದೂರ ಪ್ರಯಾಣದ ಬಸ್‌ಗಳಲ್ಲಿ ಬರುವ ಪ್ರಯಾಣಿಕರು ಇಲ್ಲಿನ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತ ಹೋಗುತ್ತಾರೆ.
-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.