ಹಾವೇರಿ

ಗ್ರಾಮಸಭೆ ನಡೆಸದ ಪಿಡಿಒಗಳಿಗೆ ನೋಟಿಸ್

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ. 5
ಮನೆ ಹಂಚಿಕೆ ಫಲಾನುಭವಿಗಳ ಆಯ್ಕೆಗೆ ಸರ್ಕಾರ ಮೂರು ಬಾರಿ ಅವಧಿ ವಿಸ್ತರಿಸಿ, ಡಿ. 28ರ ಗಡವು ನೀಡಿತ್ತು. ಆದರೆ, ಇನ್ನೂ ಕೆಲವೆಡೆ ಗ್ರಾಮಸಭೆ ಜರುಗದೆ, ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಅಂತಹ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗೆ ನೋಟೀಸ್ ನೀಡುವಂತೆ ತಾಪಂ ಇಒಗೆ ಶಾಸಕ ಬಸವರಾಜ ಬೊಮ್ಮಾಯಿ ಖಡಕ್ಕಾಗಿ ಸೂಚಿಸಿದರು.
ತಾಪಂ ಸಭಾಭವನದಲ್ಲಿ ಜರುಗಿದ ಶಿಗ್ಗಾಂವಿ-ಸವಣೂರು ತಾಲೂಕುಗಳ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದ ಅವರು, ಕೋಳಿ ಕೇಳಿ ಸಾಂಬಾರ ಅರೆಯಬೇಡಿ ಎಂದು ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು. ಕಾನೂನು ಪಾಲಿಸಿ, ಅರ್ಹ ಬಡವರಿಗೆ ಮನೆ ಕೊಡ್ತೀರೋ ಅಥವಾ ಮನೆಗೆ ಹೋಗಲು ಸಿದ್ಧರಾಗ್ತೀರೋ ಎಂದು ಪ್ರಶ್ನಿಸಿ, ಸರ್ಕಾರದ ಯೋಜನೆಗಳ ಫಲವನ್ನು ಅರ್ಹರಿಗೆ ತಲುಪಿಸಿ. ಗ್ರಾಪಂ ಅಧ್ಯಕ್ಷರು, ಸದಸ್ಯರ ಒತ್ತಡಕ್ಕೆ ಮಣಿಯದೆ ನಿಯಮಾನುಸಾರ ತಕ್ಷಣ ಆಯ್ಕೆ ಪಟ್ಟಿ ಅಂತಿಮಗೊಳಿಸಬೇಕು. ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಜ. 31ರ ಒಳಗಾಗಿ ಪೂರ್ಣಗೊಳಿಸಿ, ವರದಿ ಸಲ್ಲಿಸುವಂತೆ ಸೂಚಿಸಿದರು.
ಪ್ರಗತಿ ಕುಂಠಿತ: ಕಳೆದ ಅವಧಿಯಲ್ಲಿ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವ ಮಹತ್ತರ ಉದ್ದೇಶದಿಂದ ಆಂದೋಲನದ ರೀತಿಯಲ್ಲಿ ಮನೆಗಳು ಮಂಜೂರಾಗಿದ್ದವು. ಅದರಲ್ಲಿ ಶೇ. 80ರಷ್ಟು ಪ್ರಗತಿ ಮಾತ್ರ ಸಾಧ್ಯವಾಗಿದೆ. ಕಾನೂನಿನ ತೊಡಕು, ಜಾಗೆ ಸಮಸ್ಯೆ, ಫಲಾನುಭವಿ ಆಯ್ಕೆಯಲ್ಲಿ ಗೊಂದಲ ಹಾಗೂ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಶೇ. 100 ಪ್ರಗತಿ ಸಾಧ್ಯವಾಗಿಲ್ಲ. ಪಿಡಿಒಗಳು ಬಡಜನರ ಪರವಾಗಿ ಕೆಲಸ ಮಾಡಬೇಕು ಎಂದರು.
ಯೋಜನೆ ಗಣಕೀಕೃತ ಆಗುತ್ತಿರುವ ಕಾರಣ ಹಣ ಮಂಜೂರಾತಿ ತಡವಾಗುತ್ತಿದೆ. ಅಧಿಕಾರಿಗಳು ಸಮಯಪ್ರಜ್ಞೆಯಿಂದ ಕೆಲಸ ಮಾಡಿದರೆ, ಫಲಾನುಭವಿಗೆ ಸಮಯಕ್ಕೆ ಸರಿಯಾಗಿ ಹಣ ತಲುಪಲು ಸಾಧ್ಯ. ಒಬ್ಬ ಬಡ ಫಲಾನುಭವಿಗೆ ಅನ್ಯಾಯವಾದರೂ ತಮ್ಮ ಮೇಲೆ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಇಓಗೆ ಎಚ್ಚರಿಸಿದರು.
ಹೊರಗಡೆ ಕೂಲಿ ಜಾಸ್ತಿ
ನರೇಗಾ ಯೋಜನೆಯಲ್ಲಿ ದೊಡ್ಡ ಮೊತ್ತದ ಕ್ರಿಯಾಯೋಜನೆ ತಯಾರಿಸಿ, ಮಂಜೂರಾದ ಅನುದಾನದಲ್ಲಿ ಶೇ. 1ರಷ್ಟು ಹಣ ಮಾತ್ರ ಖರ್ಚು ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬೊಮ್ಮಾಯಿ, ಪಿಡಿಒಗಳು ಬಡ ಕೂಲಿಕಾರರನ್ನು ಯೋಜನೆಯ ಮಹತ್ವ ತಿಳಿಸಿ ಕಾಮಗಾರಿಯತ್ತ ಕರೆತರಬೇಕು ಎಂದರು.
ಹೊರಗಡೆ ಕೂಲಿ ಹೆಚ್ಚಿದೆ. ಸರ್ಕಾರ ನೀಡುವ ರು. 174 ಕಡೆ ಕೂಲಿಕಾರರು ಮನಸ್ಸು ಮಾಡುತ್ತಿಲ್ಲ. ತಿಂಗಳಾದರೂ ಪಗಾರ ನೀಡದ ನಮ್ಮ ಕಡೆ ಯಾರು ನೋಡ್ತಾರೆ? ಹೀಗಾಗಿ ಪ್ರಗತಿ ಕುಂಠಿತವಾಗಿದೆ ಎಂದು ಪಿಡಿಒಗಳು ಉತ್ತರಿಸಿದರು. ಗ್ರಾಪಂ. ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳೊಂದಿಗೆ ಸೇರಿ ಕೂಲಿಕಾರರ ಸಭೆ ನಡೆಸಿ, ಅವರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ತಾವೇ ಖುದ್ದು ಬರುವುದಾಗಿ ಶಾಸಕ ಬೊಮ್ಮಾಯಿ ತಿಳಿಸಿದರು.
ನಮ್ಮ ಹೊಲ, ನಮ್ಮ ರಸ್ತೆ ಯೋಜನೆಗೆ ಪ್ರಾಮುಖ್ಯ ನೀಡಬೇಕು. ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ಅತಿ ಹೆಚ್ಚು ಸಾಧನೆ ಮಾಡಿದ ಪಿಡಿಒಗಳಿಗೆ ಬಹುಮಾನ ವಿತರಿಸುವ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಜಿಪಂ ಉಪಾಧ್ಯಕ್ಷೆ ಡಾ೤ ಶೋಭಾ ನಿಸ್ಸೀಮಗೌಡರ, ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ, ಸವಣೂರು ತಾಪಂ ಅಧ್ಯಕ್ಷ ರಮೇಶ ಅರಗೋಳ, ಜಿಪಂ ಸದಸ್ಯರಾದ ಬಿ.ಟಿ. ಇನಾಮತಿ, ಸಿ.ಎಸ್. ಪಾಟೀಲ, ಶಶಿಧರ ಹೊನ್ನಣ್ಣವರ, ಸರೋಜವ್ವ ಆಡಿನ, ತಾಪಂ ಉಪಾಧ್ಯಕ್ಷರಾದ ನಿಂಗಪ್ಪ ಹರಿಜನ, ಪ್ರೇಮಾ ಶಿಗ್ಲಿ, ಇಒಗಳಾದ ಎನ್.ಎಸ್. ಕುರ್ತುಕೋಟಿ, ಎಸ್.ಎಂ. ರುದ್ರಸ್ವಾಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.