ವಿದ್ಯಾರ್ಥಿಗಳ ವಾಕ್ಚಾತುರ್ಯ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 7
ಶಾಲೆ ಹಾಗೂ ಹಾಸ್ಟೆಲ್ಗಳಲ್ಲಿ ನೀಡುವ ಆಹಾರ ಗುಣಮಟ್ಟದಲ್ಲಿಲ್ಲ. ಸರ್ಕಾರ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ ನೀಡಬೇಕು. ರೈತರ ಬೆಳೆಗಳಿಗೆ ಯೋಗ್ಯ ಬೆಂಬಲ ಬೆಲೆ ನೀಡಬೇಕು. ಕಳಪೆ ಹತ್ತಿ ಬೀಜ ಬಿತ್ತಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಿ. ಕಬ್ಬಿಗೆ ಹೆಚ್ಚಿನ ದರ ನಿಗದಿ ಮಾಡಿ.
- ಇದು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಹರಿಹಾಯ್ದ ಪರಿ. ಆದರೆ ಇದಕ್ಕೆ ಅಷ್ಟೇ ಸ್ಪಷ್ಟವಾಗಿ ಉತ್ತರಿಸಿದ ಸಚಿವರು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು, ಹಾಸ್ಟೆಲ್ಗಳಲ್ಲಿ ಮೂಲಸೌಲಭ್ಯ ಹೆಚ್ಚಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕಬ್ಬಿಗೆ ಹೆಚ್ಚಿನ ದರ ನಿಗದಿ, ಬೆಂಬಲ ಬೆಲೆ ಹೆಚ್ಚಿಸುವ ಸಂಬಂಧ ವಾರದೊಳಗೆ ನಿರ್ಧಾರ ಕೈಗೊಳ್ಳುವ ಭರವಸೆಯನ್ನೂ ನೀಡಿದರು. ಭರವಸೆ ಕೇಳಿ ಕೇಳಿ ಸಾಕಾಗಿದೆ ಎನ್ನುವ ಮೂಲಕ ಪ್ರತಿಪಕ್ಷದ ಸದಸ್ಯರು ಮಾತಿನ ಚಾಟಿ ಬೀಸಿದರೆ, ಆಡಳಿತ ಪಕ್ಷದ ಸದಸ್ಯರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದರು.
ಇದೇನು? ಹಾವೇರಿಯಲ್ಲಿ ಅಧಿವೇಶನ ಯಾವಾಗ ನಡೆಯಿತು? ಎಂದು ಕೇಳಬೇಡಿ. ಇದು ಯುವ ಸಂಸತ್ ಸ್ಪರ್ಧೆಯ ಅಂಗವಾಗಿ ನಡೆದ ಅಣಕು ಶಾಸನ ಸಭೆಯ ಝಲಕ್.
ಅಣುಕು ಸ್ಪರ್ಧೆ ವಿಧಾನಸಭೆ ಅಧಿವೇಶನವನ್ನು ನೆನಪಿಸುವಂತಿತ್ತು. ವಿಧಾನಸಭಾಧ್ಯಕ್ಷರ ಸಾಂಪ್ರಾದಾಯಿಕ ಪ್ರವೇಶದೊಂದಿಗೆ ಆರಂಭಗೊಂಡ ಕಲಾಪದಲ್ಲಿ ಅಗಲಿದ ಗಣ್ಯರಾದ ಜಿ.ಎಸ್. ಶಿವರುದ್ರಪ್ಪ, ನೆಲ್ಸನ್ ಮಂಡೇಲಾ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಬಳಿಕ ಪ್ರಶ್ನೋತ್ತರ ನಡೆಯಿತು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ಜಿಪಂ ಸಭಾಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ನೋಡುಗರ ಗಮನ ಸೆಳೆಯಿತು.
7 ತಾಲೂಕು, 70 ಮಕ್ಕಳು: ಜಿಲ್ಲೆಯ ಏಳು ತಾಲೂಕುಗಳಿಂದ ಆಗಮಿಸಿದ 70 ವಿದ್ಯಾರ್ಥಿಗಳು ಅಣುಕು ಶಾಸನ ಸಭೆಯಲ್ಲಿ ಪಾಲ್ಗೊಂಡು, ಪ್ರಜಾಸತ್ತೆಯಲ್ಲಿ ಶಾಸನ ಸಭೆಗಳ ಕಾರ್ಯನಿರ್ವಹಣೆ ಹೇಗಿರುತ್ತದೆ ಎಂಬುದನ್ನು ಪ್ರಭಾವಪೂರ್ವವಾಗಿ ಬಿಂಬಿಸುವಲ್ಲಿ ಯಶಸ್ವಿಯಾದರು. ಅಣುಕು ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿದ ಜಿಪಂ ಉಪಾಧ್ಯಕ್ಷೆ ಡಾ ಶೋಭಾ ನಿಸ್ಸೀಮಗೌಡ್ರ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಜನಸೇವೆಗೆ ಅಪಾರ ಅವಕಾಶವಿದ್ದು, ಯುವಜನರು ಇವುಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಜಿಪಂ ಸಿಇಒ ಕೆ.ಬಿ.ಆಂಜನಪ್ಪ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ಉಗ್ರಪ್ಪ ಹಿರೇಕೆರೂರು, ಜಿಪಂ ಸದಸ್ಯರಾದ ಸುಜಾತಾ ಮಾತನಾಡಿದರು. ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಉಪಕಾರ್ಯದರ್ಶಿ ಆರ್. ಅಂಜನಿ ಪ್ರಾಸ್ತಾವಿಕ ಮಾತನಾಡಿ, ಯುವ ಜನರಲ್ಲಿ ಸಂಸದೀಯ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಿ ಅವರ ಭಾಗವಹಿಸುವಿಕೆಯನ್ನು ಉತ್ತಮಪಡಿಸಲು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಹಣಕಾಸಿನ ನೆರವು ನೀಡುತ್ತಿದೆ. ಈ ನೆರವಿನಡಿ ಸರ್ಕಾರ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರತಿ ವರ್ಷ ಪ್ರೌಢಶಾಲಾ ಮಕ್ಕಳಿಗಾಗಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಯುವ ಸಂಸತ್ ಸ್ಪರ್ಧೆ ಏರ್ಪಡಿಸುತ್ತಿದೆ. ಅಣುಕು ಪ್ರದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

