ಹಾವೇರಿ

ತೃತೀಯ ರಂಗಕ್ಕೆ ಶೀಘ್ರ ಚಾಲನೆ: ಹೊರಟ್ಟಿ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 11
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೃತೀಯ ರಂಗ ರಚನೆಗೆ ಮಾಜಿ ಪ್ರಧಾನಿ ದೇವೇಗೌಡರು ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಬಸವರಾಜ ಹೊರಟ್ಟಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷ ಬಹುಮತ ಪಡೆಯಲು ಸಾಧ್ಯವಿಲ್ಲ. ಯುಪಿಏ ಮತ್ತು ಎನ್ಡಿಎ ಕನಸು ಭಗ್ನವಾಗಲಿದೆ. ತೃತೀಯ ರಂಗ ರಚನೆ ಕುರಿತು ಜ. 16ರಂದು ಸಭೆ ಸೇರಲಿದ್ದು, ಅಂತಿಮ ರೂಪುರೇಷೆ ಆಗಲಿದೆ ಎಂದರು.
ಆಮ್ ಆದ್ಮಿ ಯಶಸ್ಸು
ಕೇವಲ ಭ್ರಷ್ಟಾಚಾರದ ಅಜೆಂಡಾದ ಮೇಲೆ ಗೆದ್ದು ಬಂದಿರುವ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿದೆ. ರಾಜಕಾರಣದಲ್ಲಿ ಪ್ರಾಮಾಣಿಕತೆಯೇ ಫಲಿತಾಂಶ ನೀಡುವ ಸ್ಥಿತಿ ಬಂದಿದೆ ಎಂದರು.
ಹಕ್ಕುಚ್ಯುತಿ ಮಂಡನೆ
ರೈತರಿಗೆ ಅನ್ಯಾಯವಾದರೆ ಸಹಿಸಲು ಸಾಧ್ಯವಿಲ್ಲ. ಪ್ರತಿ ಟನ್ ಕಬ್ಬಿಗೆ ರು. 2650 ನೀಡದಿದ್ದರೆ ಬರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್ ಹಕ್ಕುಚ್ಯುತಿ ಮಂಡನೆ ಮಾಡಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿದ್ದು, ಬಹುತೇಕ ಸಕ್ಕರೆ ಕಾರ್ಖಾನೆಗಳು ಎರಡೂ ಪಕ್ಷಗಳ ನಾಯಕರ ಹಿಡಿತದಲ್ಲಿವೆ. ಸರ್ಕಾರ ರೈತನ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರೆ ಜೆಡಿಎಸ್ ಸರ್ಕಾರದ ಕಿವಿ ಹಿಂಡಲಿದೆ ಎಂದರು.
ಬಿಎಸ್ವೈ ಶಕ್ತಿ ಕುಗ್ಗಿದೆ
ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಮರಳಿದ್ದರಿಂದ ಪ್ರಾದೇಶಿಕ ಪಕ್ಷವೊಂದು ಕಡಿಮೆಯಾಯಿತು. ಆದರೆ ಬಿಎಸ್ವೈ ಶಕ್ತಿ ಕುಂದಿದ್ದು, ಮೊದಲಿನ ಗಡುಸುತನ ಉಳಿದಿಲ್ಲ. ಅವರ ಸ್ವಯಂಕೃತ ಅಪರಾಧದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿದ್ದಾಗ ಗರಿಷ್ಠ ಪ್ರಮಾಣದ ಭ್ರಷ್ಟಾಚಾರ ಮಾಡಿದ್ದ ಯಡಿಯೂರಪ್ಪ ಈಗ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಅವರು ಬಿಜೆಪಿಗೆ ಬಂದಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಆಡಳಿತವೇ ಚೆನ್ನಾಗಿತ್ತು ಎಂಬ ಭಾವನೆ ಜನರಲ್ಲಿ ಮೂಡುತ್ತಿವೆ ಎಂದರು.
ತಾಯಿ-ಮಗನ ಕಾಲಿಂಗ್ ಬೆಲ್
ಆರು ಬಾರಿ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ತಾಯಿ-ಮಗನ ಕಾಲಿಂಗ್ ಬೆಲ್ನಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದೆ ಎಂದೇ ಜನರಿಗೆ ಅನ್ನಿಸುತ್ತಿಲ್ಲ. ಚುನಾವಣೆಗೂ ಮುನ್ನ ಡೋಲು ಬಡಿದು ಬಳ್ಳಾರಿಗೆ ಹೋದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಮೇಲೆ ದಿನಕ್ಕೊಂದು ಭಾಗ್ಯ ನೀಡುವ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.