ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಶೀಘ್ರ ಸಭೆ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 12
ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲಾಗುವುದು. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಎಐಟಿಯುಸಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಒಕ್ಕೂಟಗಳ ಜತೆ ಸಂಸದರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕರ್ತೆಯರ ಸಮಸ್ಯೆ ಹಾಗೂ ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ತಾಯ್ತನದ ಸಂಕೇತ. ಮಕ್ಕಳ ದೈಹಿಕ, ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಅವರ ಶ್ರಮ ಶ್ಲಾಘನೀಯ. ಅಳುವ ಮಕ್ಕಳನ್ನು ಮುದ್ದುಮಾಡಿ, ಲಾಲನೆ-ಪಾಲನೆ ಮಾಡುವ, ಪೌಷ್ಟಿಕ ಆಹಾರ ಉಣಿಬಡಿಸುವ ಕಾಯಕಕ್ಕೆ ಸರ್ಕಾರ ಈಗ ನೀಡುತ್ತಿರುವ ವೇತನ ಸಾಲದು. ಪ್ರೋತ್ಸಾಹ ಧನ ನಿಗದಿಪಡಿಸುವ ನಿಟ್ಟಿನಲ್ಲಿ ಬರುವ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ವೇತನ, ಸೌಲಭ್ಯ ಹೆಚ್ಚಿಸಿ
ಕಾರ್ಯಕರ್ತೆಯರು ಕಡಿಮೆ ವೇತನದಲ್ಲಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದು, ಒಂದು ರೀತಿಯಲ್ಲಿ ದೌರ್ಜನ್ಯವೇ ಆಗಿದೆ. ಸರ್ಕಾರಿ ನೌಕರರ ಮಾದರಿಯಲ್ಲಿ ರಜೆಯ ಅಗತ್ಯವಿದೆ. ಅವರಿಗೆ ನೀಡಲಾಗುವ 15 ದಿನಗಳ ರಜೆಯನ್ನು ಒಂದು ತಿಂಗಳಿಗೆ ಹೆಚ್ಚಿಸುವ, ಪಡಿತರ ಚೀಟಿ, ವಸತಿ, ವೇತನ ಸೌಲಭ್ಯಗಳನ್ನು ಸಕಾಲಕ್ಕೆ ಪಾವತಿಸುವ, ಶಿಕ್ಷಕರ ಹಾಗೂ ಎಸ್ಡಿಎಂಸಿ ಸದಸ್ಯರಿಂದ ಆಗುವ ಕಿರುಕುಳ, ಐಸಿಡಿಎಸ್ ಯೋಜನೆ ಕೆಲಸದ ಬದಲು ಅನ್ಯ ಕೆಲಸಗಳಿಗೆ ನಿಯೋಜಿಸುವ ವ್ಯವಸ್ಥೆ ಬದಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಸಭೆಗೆ ಕಾರ್ಯಕರ್ತೆಯರನ್ನೂ ಆಹ್ವಾನಿಸಲಾಗುವುದು ಎಂದರು.
ಸರ್ಕಾರ ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರ ಸಾಲದು. ಇನ್ನೂ ಉತ್ತಮ ಆಹಾರ, ಅಂನವಾಡಿಗಳಿಗೆ ಸೌಲಭ್ಯ, ಶುದ್ಧ ಕುಡಿವ ನೀರು ಪೂರೈಸಿ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಾರ್ಮಿಕರಿಗೆ ಇಎಸ್ಐ ಸೌಲಭ್ಯಗಳು ಸಿಗುತ್ತಿಲ್ಲ. ಶೀಘ್ರದಲ್ಲಿ ಕಾರ್ಮಿಕರಿಗೆ ಆರೋಗ್ಯ ಸೇವೆ ಯೋಜನೆಗಳು ದೊರೆಯುವಂತೆ ಕ್ರಮ ಕೈಗೊಳ್ಳುವುದಾಗಿ ಸಂಸದ ಶಿವಕುಮಾರ ಉದಾಸಿ ತಿಳಿಸಿದರು.
ಸಮಸ್ಯೆ ಪರಿಹರಿಸಿ
ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಪ್ರಾಸ್ತಾವಿಕ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ಮಹಿಳೆಯರ ಸಮಸ್ಯೆಗಳ ಬಗ್ಗೆ ಪರಿಹಾರ ಚಿಂತಿಸಿಲ್ಲ. ಮಹಿಳೆಯರ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಹಾಗೂ ವಿಧಾನಸಭೆಯಲ್ಲಿ ಚರ್ಚಿಸುವಂಥ ಜನಪ್ರತಿನಿಗಳು ಬೇಕಾಗಿದ್ದಾರೆ. ಸಂವಾದಗಳ ಮೂಲಕ ಕಾರ್ಮಿಕ ಒಕ್ಕೂಟಗಳು ಎದುರಿಸುತ್ತಿರುವ ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ತಿಳಿಸಿದರು.
ಸಂಸದ ಶಿವಕುಮಾರ ಉದಾಸಿ ಅವರೊಂದಿಗೆ ನಡೆದ ಸಂವಾದದಲ್ಲಿ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಾದ ಹೇಮಾವತಿ ಆಸಾದಿ, ನೀಲಮ್ಮ ವಾಲಿ, ಸುನಿತಾ ಮಕರಳ್ಳಿ, ಸುನಂದಾ, ಸುಜಾತಾ ಹಿರೇಮಠ ಪಾಲ್ಗೊಂಡರು. ಸಂಸದರನ್ನು ಕಾರ್ಮಿಕ ಒಕ್ಕೂಟಗಳ ಪರವಾಗಿ ಸನ್ಮಾನಿಸಲಾಯಿತು. ಜಿ.ಡಿ. ಪೂಜಾರ, ಎಸ್.ಎ. ಪನ್ನೋಸಿ, ಮಂಜುನಾಥ ಹಲಗಣ್ಣನವರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

