ಹಾವೇರಿ

ಪತ್ರಕರ್ತರು ಸಾಹಿತ್ಯ ಕೃತಿ ಓದಿ: ವಾನಳ್ಳಿ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ. 14
ಅತ್ಯುತ್ತಮ ವಿಷಯಗಳು ಪರಿಣಾಮಕಾರಿ ಭಾಷೆ ಬಳಕೆಯಿಲ್ಲದೆ ಜನರನ್ನು ತಲುಪಲು ಸೋಲುತ್ತವೆ. ಅಧ್ಯಯನ, ಓದು, ಜನರ ಒಡನಾಟದ ಮೂಲಕ ಬರಹದ ಭಾಷೆ ಸುಧಾರಿಸಿಕೊಳ್ಳಬೇಕು. ಯುವ ಪತ್ರಕರ್ತರು ಮಹತ್ವದ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಸಾಮರ್ಥ್ಯ ಅಭಿವೃದ್ಧಿ ಕೇಂದ್ರದ ನಿರ್ದೇಶಕ, ಬರೆಹಗಾರ ಡಾ೤ ನಿರಂಜನ ವಾನಳ್ಳಿ ಹೇಳಿದ್ದಾರೆ.
ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಶಿರಸಿಯ ಕಳವೆಯಲ್ಲಿ 'ಅನ್ನದ ಚಿತ್ರಗಳು' ಕೃಷಿ ಪತ್ರಿಕೋದ್ಯಮ ಶಿಬಿರ ಏರ್ಪಡಿಸಿತ್ತು. ಶಿಬಿರಾರ್ಥಿಗಳಿಗೆ ಜಿಲ್ಲೆಯ ಶಿಗ್ಗಾಂವಿ ಬಳಿಯ ಉತ್ಸವ ರಾಕ್ ಗಾರ್ಡನ್‌ಗೆ ಅಧ್ಯಯನ ಪ್ರವಾಸ ಏರ್ಪಡಿಸಿತ್ತು. ಪ್ರವಾಸದ ಬಳಿಕ ರಾಕ್ ಗಾರ್ಡನ್‌ನ ಖ್ಯಾತ ಕಲಾವಿದ ಪ್ರೊ೤ ತಿಪ್ಪಣ್ಣ ಸೊಲಬಕ್ಕನವರ್ ಮನೆಯಲ್ಲಿ ಮಾಧ್ಯಮ ಉಪನ್ಯಾಸಗಳು ನಡೆದವು. ಪರಿಣಾಮಕಾರಿ ಭಾಷೆ, ಸಂವಹನ ಕಲೆಯ ಕುರಿತಾಗಿ ಡಾ೤ ವಾನಳ್ಳಿ ಉಪನ್ಯಾಸ ನೀಡಿದರು.
'ನಮ್ಮ ಗ್ರಾಮಗಳಿಗೆ ನಾವೇನು ಮಾಡಬಹುದು?' ಎಂಬ ಕುರಿತು ಪ್ರೊ೤ ಸೊಲಬಕ್ಕನವರ್ ಜತೆ ಮಾಧ್ಯಮ ಸಂವಾದ ನಡೆಯಿತು. ಅನ್ನಕ್ಕೆ ಚಿನ್ನದ ಮಹತ್ವ ನೀಡಿದವರು ನಮ್ಮ ಹಿರಿಯರು. ನಮ್ಮ ಹಸಿವನ್ನು ಅನ್ನ ಮಾತ್ರ ನೀಗಿಸುತ್ತದೆ. ಮುತ್ತಿನಂಥ ತೆನೆ, ಮುತ್ತಿನಂಥ ಕಾಳು ಎಂದು ಫಸಲನ್ನು ಗುರುತಿಸುತ್ತೇವೆ. ನಮ್ಮ ಭವಿಷ್ಯಕ್ಕಾಗಿ ಅನ್ನದ ಬೆಲೆ ಅರಿಯುವ ಕೆಲಸ ಹೆಚ್ಚಬೇಕಾಗಿದೆ. ಪ್ರತಿಯೊಬ್ಬರೂ ತಾವು ಹುಟ್ಟಿ ಬೆಳೆದ ಹಳ್ಳಿ ಪರಿಸರಕ್ಕೆ ಏನು ನೀಡಬಹುದೆಂದು ಯೋಚಿಸಬೇಕು. ಕೃಷಿಯ ಕುರಿತು ಜಾಗೃತಿ ಮೂಡಿಸುವ ಮೂಲಕ ನಮ್ಮ ನಾಳಿನ ಅನ್ನದ ಕುರಿತ ಚಿಂತನೆ ನಡೆಯಬೇಕು ಎಂದು ಸೊಲಬಕ್ಕನವರ್ ನುಡಿದರು. ರಾಜ್ಯದ ಆಯ್ದ 15 ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಬರಹಗಾರ ಅಡ್ಡೂರು ಕೃಷ್ಣರಾವ್, ಪೂರ್ಣಪ್ರಜ್ಞ ಬೇಳೂರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಉತ್ಸವ ರಾಕ್ ಗಾರ್ಡನ್‌ನ ವೇದಾರಾಣಿ ದಾಸನೂರು, ಕಲಾವಿದ ಹರ್ಷ ಸೊಲಬಕ್ಕನವರ್ ಸಹಕಾರ ನೀಡಿದರು.
ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ಸಂಚಾಲಕ ಶಿವಾನಂದ ಕಳವೆ ಸ್ವಾಗತಿಸಿದರು. ಹನ್ನೊಂದು ವರ್ಷಗಳಿಂದ ಕೇಂದ್ರವು ಪತ್ರಿಕೋದ್ಯಮ ಶಿಬಿರ ನಡೆಸುತ್ತಿದೆ. ಈವರೆಗೆ 500ಕ್ಕೂ ಹೆಚ್ಚು ಅಭ್ಯರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಕೃಷಿ ಬರವಣಿಗೆಯಲ್ಲಿ ಅಧ್ಯಯನಶೀಲತೆ ಹೆಚ್ಚಿಸುವ ಕಾರಣಕ್ಕಾಗಿ 'ಅನ್ನದ ಚಿತ್ರ' ಶಿಬಿರ ಆಯೋಜಿಸಲಾಗಿದೆ ಎಂದು ಕಳವೆ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.