ಬಿಇಒ ದಿಟ್ಟತನಕ್ಕೆ ತಾಪಂ ಸದಸ್ಯರ ಶ್ಲಾಘನೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 20
ಕ್ಷೇತ್ರ ಶಿಕ್ಷಣಾಧಿಕಾರಿಗಳು ದಾಳಿ ಮಾಡಿ ಸ್ಥಗಿತಗೊಳಿಸಿರುವ ಅನಧಿಕೃತ ಟ್ಯುಟೋರಿಯಲ್ ವಿಚಾರ ಸೋಮವಾರ ಇಲ್ಲಿನ ಸುವರ್ಣ ಸೌಧದಲ್ಲಿ ಜರುಗಿದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲೂ ಗದ್ದಲ ಸೃಷ್ಟಿಸಿತು. ಟ್ಯುಟೋರಿಯಲ್‌ಗಳ ಮೇಲೆ ನಡೆದ ದಾಳಿಯನ್ನು ಸಮರ್ಥಿಸಿಕೊಂಡ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ್ ಅವರ ದಿಟ್ಟತನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ವಿಷಯದ ಮೇಲೆ ಗಮನ ಸೆಳೆದ ಸುಶೀಲಾ ಮೇಗಳಮನಿ, ಬಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ನವೋದಯ, ಕಿತ್ತೂರು ಚನ್ನಮ್ಮ ಹಾಗೂ ಮೊರಾರ್ಜಿ ವಸತಿ ಶಾಲೆಗಳ ಸೌಲಭ್ಯಗಳು ಯಾರಿಗೂ ತಿಳಿಯದಂತೆ ಉಳ್ಳವರ ಪಾಲಾಗುತ್ತಿವೆ ಎಂದು ಆರೋಪಿಸಿದರು. ಎಪಿಎಂಸಿ ಕಟ್ಟಡದಲ್ಲಿರುವ ತರಕಾರಿ ಮಾರುಕಟ್ಟೆಯನ್ನೇ ಅನಧಿಕೃತವಾಗಿ ವಸತಿ ನಿಲಯವನ್ನಾಗಿ ಪರಿವರ್ತಿಸಲಾಗಿದೆ. ವಿಷಜಂತುಗಳ ಭಯದಲ್ಲಿ, ಕೊರೆವ ಚಳಿಯಲ್ಲಿ ಮಕ್ಕಳು ಮಲಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಏನು ಕ್ರಮ ಕೈಗೊಂಡಿರಿ?
ಮಲ್ಲಿಕಾರ್ಜುನ ಕರಲಿಂಗಪ್ಪನವರ ಮಾತನಾಡಿ, ಶಾಲೆ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಬೇಕಾದ ಶಿಕ್ಷಕರೇ ಸಾವಿರಾರು ರುಪಾಯಿ ವ್ಯಯಿಸಿ ತಮ್ಮ ಮಕ್ಕಳನ್ನು ಅನಧಿಕೃತ ಟ್ಯುಟೋರಿಯಲ್‌ಗಳಿಗೆ ಸೇರಿಸುತ್ತಿರುವುದು ತಲೆ ತಗ್ಗಿಸುವ ವಿಚಾರ. ಟ್ಯುಟೋರಿಯಲ್ ನಡೆಸುತ್ತಿದ್ದವರ, ಮಕ್ಕಳನ್ನು ಕಳುಹಿಸಿದ ಶಿಕ್ಷಕರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, ಟ್ಯುಟೋರಿಯಲ್ ನಡೆಸುತ್ತಿದ್ದವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದೆ ನಡೆಸದಂತೆ ತಾಕೀತು ಮಾಡಲಾಗಿದೆ. ಈ ಮಕ್ಕಳು ಪ್ರವೇಶ ಪಡೆದಿರುವ ಶಾಲೆಗಳ ಮುಖ್ಯ ಶಿಕ್ಷಕರಿಗೂ ಮಾಹಿತಿ ರವಾನಿಸಲಾಗಿದೆ ಎಂದರು.
ಶಾಲೆಯಲ್ಲಿ ಚಿಕನ್, ಮಟನ್!
ಕಾಗಿನೆಲೆ ಡಿಪಿಈಪಿ ಶಾಲೆಯ ಶಿಕ್ಷಕರು ತಮ್ಮ ಊಟಕ್ಕೆ ಕೋಳಿ, ಕುರಿಗಳ ಮಾಂಸದಡಿಗೆ ಮಾಡುತ್ತಿದ್ದು, ಮಕ್ಕಳಿಗೆ ಬೇಳೆ, ತರಕಾರಿ ಇಲ್ಲದ ಸಾಂಬಾರ್ ಉಣಬಡಿಸುತ್ತಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳಿ ಎಂದು ಸದಸ್ಯರು ಒತ್ತಾಯಿಸಿದರು. ಅಕ್ಷರ ದಾಸೋಹದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಬಿಇಒ ತಿಳಿಸಿದರು.
ಅವಧಿ ಮೀರಿದ ಆಹಾರ ಪೂರೈಕೆ
ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಅವಧಿ ಮೀರಿದ ಆಹಾರ ಪೂರೈಕೆ ಆಗುತ್ತಿರುವ ಮಾಹಿತಿ ಇದ್ದು, ಮಕ್ಕಳ ಆರೋಗ್ಯ ಕೆಟ್ಟರೆ ಯಾರು ಹೊಣೆ ಎಂದು ಟಿಈಓ ಎಸ್. ಆರ್. ಪಾಟೀಲ ಸಿಡಿಪಿಒ ಶಿರೋಳಕರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೇ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಲಾಗುವುದು. ಅವಧಿ ಮೀರಿದ ಆಹಾರ ಕಂಡುಬಂದಲ್ಲಿ ಮರಳಿ ಪಡೆಯಲಾಗುವುದು ಎಂದು ಶಿರೋಳಕರ ಭರವಸೆ ನೀಡಿದರು. ತಾಪಂ ಅಧ್ಯಕ್ಷೆ ಚಿನ್ನವ್ವ ಪಾಸಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಪ್ಪ ಮುಚ್ಚಟ್ಟಿ, ಸದಸ್ಯರಾದ ನಿಂಗಪ್ಪ ದುಂಡಣ್ಣವರ, ನಾಗರಾಜ ಬಳ್ಳಾರಿ, ಚನ್ನಬಸಪ್ಪ ದೇಸಾಯಿ, ಗಿರಿಜವ್ವ ಮೆಣಿಸಿನಹಾಳ, ಕಮಲವ್ವ ಲಮಾಣಿ, ಚಮನಬೀ ಮುಲ್ಲಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

