ಅಧಿಕಾರಿಗಳ ವೈಖರಿಗೆ ಸವಣೂರು ತಾಪಂ ಗರಂ
ಸವಣೂರು: ಗ್ರಾಮ ಸಭೆಗೆ ಅಧಿಕಾರಿಗಳು ಹಾಜರಾಗದೆ ಸಿಬ್ಬಂದಿಯನ್ನು ಕಳುಹಿಸುತ್ತಿರುವ ವಿಷಯ ಇಲ್ಲಿನ ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ವಿಷಯ ಪ್ರಸ್ತಾಪಿಸಿದ ಸದಸ್ಯ ರಾಜು ಮಾದರ, ಹಿರೇಮುಗದೂರ ಗ್ರಾಮಸಭೆಗೆ ನೋಡಲ್ ಅಧಿಕಾರಿ ಗೈರು ಹಾಜರಾಗುತ್ತಿದ್ದಾರೆ. ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಮ್ಮ ಬದಲು ಸಿಬ್ಬಂದಿಯನ್ನು ಕಳಿಸಿ, ಸಭೆ ನಡೆಸಿದ್ದಾರೆ. ಸರ್ಕಾರದ ಯೋಜನೆಗಳ ಮಾಹಿತಿ ಗ್ರಾಮಸ್ಥರಿಗೆ ಲಭ್ಯವಾಗುವುದು ಹೇಗೆ ಸಾಧ್ಯ? ಲೋಪ ಎಸಗಿದ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಿರೇಮುಗದೂರ ಶಾಲೆಯ ಕಟ್ಟಡ ಹಾಗೂ ಇತರ ಕಾಮಗಾರಿಗಳು ಯಾವ ಆಧಾರದಲ್ಲಿ ನಡೆದಿವೆ ಎಂದು ಪ್ರಶ್ನಿಸಿದ ರಾಜು ಮಾದರ, ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ರು. 74 ಲಕ್ಷ ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿತ್ತು. ಆದರೆ ಇನ್ನೂ ನೀರು ಪೂರೈಸುತ್ತಿಲ್ಲ. ಇದಕ್ಕೆ ಯಾರು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯೆ ಅಕ್ಕಮ್ಮ ಸೂರಣಗಿ ಮಾತನಾಡಿ, ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿಕಾರರು ಸಾರ್ವಜನಿಕರಿಗೆ ಅಕ್ಕಿ, ಗೋದಿ, ಸಕ್ಕರೆ ವಿತರಿಸಬೇಕೆಂದರೆ ಹಲವು ವಸ್ತುಗಳನ್ನು ತೆಗೆದುಕೊಳ್ಳುವುದು ಕಡ್ಡಾಯ ಎನ್ನುತ್ತಿದ್ದಾರೆ. ಬಡವರ ಪರದಾಟ ತಪ್ಪಿಸಿ ಎಂದು ಕಂದಾಯ ಅಧಿಕಾರಿಗಳನ್ನು ಆಗ್ರಹಿಸಿದರು.
ಜಲಾನಯನ ಇಲಾಖೆ ವತಿಯಿಂದ ಕೈಗೊಳ್ಳುವ 100ಕ್ಕೂ ಹೆಚ್ಚು ಕಾಮಗಾರಿಗಳ ಅಂದಾಜು ಪತ್ರಿಕೆಗಳನ್ನು ಎಂಜಿನಿಯರ್‌ಗಳು ತಯಾರಿಸಿ ಹಲವು ತಿಂಗಳೇ ಕಳೆದಿವೆ. ಆದರೂ ಕಾಮಗಾರಿ ಆರಂಭಿಸದೆ, ಸೌಲಭ್ಯದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಾಪಂ ಇಒ, ಈ ಎಲ್ಲ ವಿಷಯಗಳ ಕುರಿತು ವರದಿ ತರಿಸಿಕೊಂಡು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ತಾಪಂ ಅಧ್ಯಕ್ಷ ರಮೇಶ ಅರಗೋಳ, ಉಪಾಧ್ಯಕ್ಷೆ ಪ್ರೇಮಾ ಶಿಗ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

