ಪೊಲೀಸರಿಗೂ ಮಿಲಿಟರಿ ಮಾದರಿ ಕ್ಯಾಂಟೀನ್
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 24
ಮಿಲಿಟರಿ ಮಾದರಿಯಲ್ಲಿ ಪೊಲೀಸ್ ಸಿಬ್ಬಂದಿಗೂ ಶೀಘ್ರದಲ್ಲೇ ಕ್ಯಾಂಟೀನ್ಗಳನ್ನು ಪ್ರಾರಂಭಿಸುವುದಾಗಿ ಉತ್ತರ ವಲಯ ಐಜಿಪಿ ಭಾಸ್ಕರ ರಾವ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಕ್ಷಣಾ ಇಲಾಖೆಗೆ ಕೇಂದ್ರ ಸರ್ಕಾರ ತೆರಿಗೆ ರಹಿತ ಮಾರಾಟ ಮಳಿಗೆ ಪ್ರಾರಂಭಿಸಿದೆ. ಅದೇ ಮಾದರಿಯಲ್ಲಿ ಉತ್ತರ ವಲಯ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಇಂತಹ ಕ್ಯಾಂಟೀನ್ಗಳನ್ನು ಪ್ರಾರಂಭಿಸುವ ಮೂಲಕ ಪೊಲೀಸ್ ಸಿಬ್ಬಂದಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.
ಬೆಳಗಾವಿ ತಣ್ಣಗಿದೆ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೆಲ ಪ್ರಚಾರಪ್ರಿಯ ವ್ಯಕ್ತಿಗಳು ಪ್ರತಿಭಟನೆ ನಡೆಸುತ್ತಾರೆ. ಅರ್ಥವಿಲ್ಲದೆ ಕೇವಲ ಪ್ರಚಾರಕ್ಕಾಗಿ ನಡೆಯುವ ಪ್ರತಿಭಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕನ್ನಡ ಹಾಗೂ ಮರಾಠಿ ಭಾಷಿಕರು ಸಾಮರಸ್ಯದಿಂದ ಇದ್ದಾರೆ. ಶಾಸಕ ಸಂಭಾಜಿ ಪಾಟೀಲ ಭಾಷಣದ ಧ್ವನಿಮುದ್ರಣವನ್ನು ಸರ್ಕಾರಕ್ಕೆ ನೀಡಲಾಗಿದೆ. ಅದರಲ್ಲಿ ಕಾನೂನಿಗೆ ವಿರುದ್ಧವಾದ ಅಂಶಗಳಿದ್ದರೆ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಅಲ್ಲದೆ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಅಪಘಾತಗಳಿಗೆ ಕಡಿವಾಣ
ರಸ್ತೆ ಅಪಘಾತಗಳಿಂದ ಉತ್ತರ ಕರ್ನಾಟಕ ತತ್ತರಿಸಿದೆ. ಬೆಂಗಳೂರಿಗಿಂತ ಹೆಚ್ಚು ಜನರು ಪ್ರತಿ ವರ್ಷ ಇಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಇವುಗಳ ಕಡಿವಾಣಕ್ಕೆ ತಮಿಳುನಾಡು, ಮಹಾರಾಷ್ಟ್ರ ಮಾದರಿಯಲ್ಲಿ ಜೀವನ ರಕ್ಷಾ ಠಾಣೆಗಳನ್ನು ಹೆಚ್ಚಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.
ಕೆಲಸವನ್ನು ಪ್ರೀತಿಸಿ
ಶೂನ್ಯ ಡಿಗ್ರಿಗಿಂತಲೂ ಕಡಿಮೆ ಉಷ್ಣಾಂಶದಲ್ಲಿ ದೇಶದ ಗಡಿ ಕಾಯುತ್ತಿರುವ ಸೈನಿಕರು ಪೋಲಿಸರಿಗೆ ಮಾದರಿಯಾಗಬೇಕು. ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವ ಮೂಲಕ ಇಲಾಖೆಯ ಗೌರವಕ್ಕೆ ಧಕ್ಕೆ ತಾರದಂತೆ ಕಾರ್ಯ ನಿರ್ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಠಾಣೆಯಲ್ಲೂ ಪರೀಕ್ಷೆಗಳನ್ನು ನಡೆಸಲು ಕ್ರಮ ಜರುಗಿಸಲಾಗಿದೆ ಎಂದರು.
ಬ್ಯಾಡಗಿ ಠಾಣೆ ಪ್ರಶಂಸಾರ್ಹ
1968ರಲ್ಲಿ ನಡೆದಿದ್ದ ಕಳ್ಳತನದ ಪ್ರಕರಣದಲ್ಲಿ ಪತ್ತೆಯಾಗಿರುವ ನಾಣ್ಯ, ನಗದು, ಬೆಳ್ಳಿ ಹಾಗೂ ಚಿನ್ನವನ್ನು ಬ್ಯಾಡಗಿ ಠಾಣೆಯಲ್ಲಿ ಇಂದಿಗೂ ಕಾಯ್ದಿಟ್ಟಿರುವುದು ಪ್ರಶಂಸಾರ್ಹ. ಜಿಲ್ಲೆಯಲ್ಲೇ ಅತಿ ಕಡಿಮೆ ಅಪರಾಧ ಪ್ರಕರಣ ಸಂಖ್ಯೆಗಳಿದ್ದು, ಕೇವಲ 200 ಆಸುಪಾಸಿನಲ್ಲಿ ಸಿ.ಆರ್. ನಂಬರ್ಗಳಿವೆ ಎಂದರು.
ಎಸ್ಪಿ ಎನ್. ಶಶಿಕುಮಾರ, ಎಎಸ್ಪಿ ಜಗಮಯ್ಯ, ಡಿವೈಎಸ್ಪಿ ಗೋಪಾಲ ಬ್ಯಾಕೋಡ, ಸಿಪಿಐ ಹಾಲಮೂರ್ತಿರಾವ್, ಪಿಎಸ್ಐಗಳಾದ ಗಿರೀಶ್, ಮಹಾಂತೇಶ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಇದ್ದರು.
ಹೊಸ ಪೊಲೀಸ್ ವಸತಿ ಗೃಹಗಳಿಗೆ ಪ್ರಸ್ತಾವನೆ
ಜಿಲ್ಲೆಗೆ ಎರಡು ಬೆಡ್ರೂಮ್ಗಳಿರುವ ಹೊಸ ವಿನ್ಯಾಸದ 206 ವಸತಿ ಗೃಹಗಳ ನಿರ್ಮಾಣಕ್ಕೆ ಇಲಾಖೆ ಅನುಮೋದನೆ ನೀಡಿದೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ವಸತಿ ಗೃಹಗಳ ನಿರ್ಮಾಣಕ್ಕೆ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕನ್ನಡಪ್ರಭ ಜ. 24ರ ಸಂಚಿಕೆಯಲ್ಲಿ 'ಪೊಲೀಸರಿಗೆ ಸೋರುವ ಮನೆ' ಶೀರ್ಷಿಕೆಯಲ್ಲಿ ಪೊಲೀಸರ ವಸತಿ ಗೃಹಗಳ ಕುರಿತಾಗಿ ಸಚಿತ್ರ ವಿಶೇಷ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಪೊಲೀಸರಿಗೆ ರಕ್ಷಣೆ, ಸೌಲಭ್ಯ: ಐಜಿಪಿಗೆ ಮನವಿ
ಬ್ಯಾಡಗಿ: ಪೊಲೀಸ್ ಸಿಬ್ಬಂದಿಗೆ ರಕ್ಷಣೆ ಹಾಗೂ ಸೌಲಭ್ಯ ನೀಡುವಂತೆ ಆಗ್ರಹಿಸಿ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಜಿಲ್ಲಾ ಘಟಕದ ಕಾರ್ಯಕರ್ತರು ಉತ್ತರ ವಲಯ ಐಜಿಪಿ ಭಾಸ್ಕರರಾವ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಅಧ್ಯಕ್ಷೆ ಮಾಧುರಿ ದೇವಧರ ಮಾತನಾಡಿ, ಸಿಬ್ಬಂದಿಯನ್ನು 12 ತಾಸಿಗೂ ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ. ದಿನವಿಡೀ ಕೆಲಸ ಮಾಡಬೇಕಾಗುತ್ತದೆ. ಬೇಡಿಕೊಂಡರೂ ಪೊಲೀಸರಿಗೆ ಅಧಿಕಾರಿಗಳು ರಜೆ ನೀಡುತ್ತಿಲ್ಲ. 2000ನೇ ಇಸ್ವಿ ತನಕ ಜಾರಿಯಲ್ಲಿದ್ದ 8 ತಾಸು ರೊಟೇಶನ್ ಪದ್ಧತಿ ಮುಂದುವರಿಸಬೇಕು. ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಸೈನ್ಯದಲ್ಲಿರುವಂತೆ ವರ್ಷದಲ್ಲಿ ಎರಡು ತಿಂಗಳು ಕಡ್ಡಾಯ ರಜೆ ಕೊಡಬೇಕು. ಜಾರಿಗೆ ಬರಬೇಕು. ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ವೈಯಕ್ತಿಕ ಕೆಲಸ ಬೇಡ: ಸಂಕಮ್ಮ ಸಂಕಣ್ಣನವರ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಉನ್ನತ ಅಧಿಕಾರಿಗಳು ಸಿಬ್ಬಂದಿಯನ್ನು ತಮ್ಮ ವೈಯಕ್ತಿಕ ಕೆಲಸಕ್ಕೆ ನಿಯೋಜಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಬ್ಯಾಡಗಿಯಲ್ಲಿ ವಾಸಕ್ಕೆ ಯೋಗ್ಯವಲ್ಲದ ಮನೆಗಳಲ್ಲಿ ಪೊಲೀಸರ ಕುಟುಂಬಗಳಿದ್ದು, ಕೂಡಲೇ ನವೀಕರಿಸಬೇಕು. 500 ಜನರಿಗೆ ಒಬ್ಬರಂತೆ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.
ಬಸವರಾಜ ಪೂಜಾರ, ಜ್ಯೋತಿ ಕುಲಕರ್ಣಿ, ಪ್ರಕಾಶ ಬಳಿಗಾರ, ಅಶ್ವಿನಿ ಛಡಾ, ಪರಶುರಾಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

