ಹಾವೇರಿ

ಗುಡ್ಡಪ್ಪ ಸಾವಿಗೆ ಸರ್ಕಾರವೇ ಹೊಣೆ

Published On :

ಬ್ಯಾಡಗಿ: ಅಮಾಯಕ ರೈತ ಗುಡ್ಡಪ್ಪ ಕೆಪ್ಪಲಿಂಗಣ್ಣನವರ ಸಾವಿಗೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆಯಾಗಿದ್ದು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಮತ್ತು ಆತನ ಮೇಲಿರುವ ಎಲ್ಲ ಸಾಲ ಮನ್ನಾ ಮಾಡುವಂತೆ ರೈತ ಸಂಘ ಮತ್ತು ಹಸಿರುಸೇನೆ ಮುಖಂಡ ಗಂಗಣ್ಣ ಎಲಿ ಆಗ್ರಹಿಸಿದರು.
ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯ ಹಿಂದೆಂದೂ ಕಂಡರಿಯದ ಬರಗಾಲ ಸ್ಥಿತಿ ಎದುರಿಸಬೇಕಾಗಿದೆ. ಕೂಡಿಟ್ಟಿದ್ದ ಅಲ್ಪಸ್ವಲ್ಪ ಹಣವನ್ನು ಬಿತ್ತನೆಗೆ ವೆಚ್ಚ ಮಾಡಿ ರೈತ ಕೈಚೆಲ್ಲಿ ಕುಳಿತಿದ್ದಾನೆ.
ಸುಮಾರು 2 ಎಕರೆ ಪ್ರದೇಶದಲ್ಲಿ ಕ್ಯಾಬೀಜ ಬಿತ್ತನೆ ಮಾಡಿದ್ದ ಗುಡ್ಡಪ್ಪನಿಗೆ ಪ್ರಸಕ್ತ ವರ್ಷ ಕೈಕೊಟ್ಟ ಮಳೆ ನುಂಗಲಾರದ ಬಿಸಿ ತುಪ್ಪವಾಗಿದೆ. ಮಾಡಿದ ಸಾಲ ಮತ್ತು ಬಾರದ ಬೆಳೆಯಿಂದ ಆತ್ಮಸ್ಥೈರ್ಯ ಕಳೆದುಕೊಂಡು ನೇಣಿಗೆ ಶರಣಾಗಿದ್ದಾನೆ. ಆದರೆ, ಪ್ರಸಕ್ತ ಅಧಿವೇಶನದಲ್ಲಿ ಈ ಬಗ್ಗೆ ಚಕಾರವೆತ್ತದ ಸಿಎಂ ಸಿದ್ದರಾಮಯ್ಯ ರಾಜ್ಯದ ಕೃಷಿಯನ್ನು ಸರ್ವನಾಶ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದರು.
ವೈಜ್ಞಾನಿಕ ಬೆಲೆ ನಿಗದಿ ಮಾಡಿ: ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಹಳೇ ಮೈಸೂರು ಪ್ರಾಂತದ ರೈತರಿಗೆ ಸರ್ಕಾರ ಎಲ್ಲ ಸೌಲಭ್ಯ ನೀಡುತ್ತಿದೆ. ಆದರೆ, ಉ-ಕದ ರೈತರಿಗೆ ರು. 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡದೇ ತಾರತಮ್ಯ ಮಾಡಿದ್ದಾರೆ ಎಂದರು.
ಇನ್ನೆಷ್ಟು ರೈತರು ಸಾಯಬೇಕು?: ಬಸವರಾಜ ಸಂಕಣ್ಣನವರ ಮಾತನಾಡಿ, ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ನೀರಾವರಿ ಕ್ಷೇತ್ರವಿದ್ದರೂ ಬೆಳೆ ತೆಗೆಯಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಕೇಳಿದರೆ ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ ದೇವರ ಮೇಲೆ ಭಾರ ಹಾಕುತ್ತಿದ್ದಾರೆ. ಇದರಿಂದ ಕೃಷಿ ಮೇಲಿನ ಅವರ ಕಾಳಜಿ ತೋರಿಸುತ್ತದೆ. ಹಾಗಿದ್ದರೆ ರೈತರ ಜೀವ ಇನ್ನೆಷ್ಟು ಬಲಿಯಾಗಬೇಕಾಗಿದೆ? ಎಂದರು. ನಾಗರಾಜ ದೇಸೂರ ಮಾತನಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.