ಎಲ್ಲ ಬೆಳೆಗಳಿಗೂ ಬೆಳೆವಿಮೆ ನೀಡಿ
ಹಾವೇರಿ: ಹವಾಮಾನ ಆಧಾರಿತ ಬೆಳೆ ವಿಮೆ ಅವಧಿ ವಿಸ್ತರಿಸುವುದು ಹಾಗೂ ಮೆಕ್ಕೆಜೋಳ ಹೊರತುಪಡಿಸಿ ಉಳಿದ ಬೆಳೆಗಳಿಗೂ ಬೆಳೆ ವಿಮೆ ಮಾಡಿಸುವಂತೆ ಬ್ಯಾಂಕುಗಳಿಗೆ ಆದೇಶಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿ, ಸಂಸದರಿಗೆ ಮನವಿ ಸಲ್ಲಿಸಿದರು.
ಸರಿಯಾದ ಸಮಯಕ್ಕೆ ಮಳೆ ಆಗದ ಕಾರಣ ರಾಜ್ಯಾದ್ಯಂತ ಬರಗಾಲ ಸೃಷ್ಟಿಯಾಗಿದ್ದು, ವಿಶೇಷವಾಗಿ ಹಾವೇರಿ ಜಿಲ್ಲೆ ಜನರಿಗೆ ಮಳೆ ಅಭಾವದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ರೈತರು ಹಾಗೂ ದನಕರುಗಳ ಜೀವನ ದುಸ್ತರವಾಗಿದೆ. ಬಿತ್ತಿದ ಬೀಜ ಹೊಲದಲ್ಲೇ ಒಣಗಿದೆ. ಕೆಲವೆಡೆ ಹುಟ್ಟಿದ ಫಸಲಿಗೆ ಟ್ಯಾಂಕರ್ ಮೂಲಕ ನೀರುಣಿಸುವ ಪರಿಸ್ಥಿತಿ ಬಂದಿದೆ. ಇಂಥ ಸಂದರ್ಭ ರೈತರು ಬೆಳೆಗಳ ಮೇಲೆ ವಿಮೆ ತುಂಬಿ ಹಾಳಾದ ಫಸಲಿಗೆ ವಿಮೆಯಿಂದ ಬರುವ ಹಣದಿಂದ ಮುಂದಿನ ಜೀವನ ನಡೆಸುವ ಆಸೆಯೊಂದಿಗೆ ಎಲ್ಲೆಡೆ ಬೆಳೆ ವಿಮೆ ಮಾಡಿಸುತ್ತಿದ್ದಾರೆ. ಆದರೆ, 2013-14ನೇ ಸಾಲಿನಲ್ಲಿ ಹೊಸದಾಗಿ ಬೆಳೆವಿಮೆ ಮಾಡಲು ರಾಷ್ಟ್ರೀಕೃತ ಬ್ಯಾಂಕಿಗೆ ಹೋದರೆ ಹಿಂದಿನ ಬೆಳೆ ಮೇಲೆ ಇರುವಂಥ ಬೆಳೆ ಸಾಲವನ್ನು ಬ್ಯಾಂಕಿಗೆ ಭರಿಸಿದ ನಂತರ ಹೊಸ ಬೆಳೆವಿಮೆ ಮಾಡಿಸಿ ಎಂದು ರೈತರನ್ನು ಕೆಲವು ಬ್ಯಾಂಕಿನ ಸಿಬ್ಬಂದಿ ವಾಪಸ್ ಕಳಿಸುತ್ತಿದ್ದಾರೆ. ಹಿಂದಿನ ಬೆಳೆ ಕೂಡಾ ಬರಗಾಲಕ್ಕೆ ತುತ್ತಾಗಿ ಬೆಳೆ ಬಾರದೆ ರೈತರು ಕಷ್ಟ ಅನುಭವಿಸಿದ್ದಾರೆ. ಬೆಳೆ ಸಾಲ ತುಂಬುವುದರಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಇಂಥ ಸಮಯದಲ್ಲಿ ಬೆಳೆ ಸಾಲ ತುಂಬಲು ಕಷ್ಟಸಾಧ್ಯ. ಅಂಥದರಲ್ಲಿ ಮುಂಗಾರು ಮಳೆ ಬಾರದಿರುವುದರಿಂದ ರೈತರು ಉಸಿರಾಡಲು ಪ್ರಸಕ್ತ ಬಿತ್ತಿದ ಬೆಳೆಗೆ ಬೆಳೆವಿಮೆ ಮಾಡಿಸುವುದು ಬ್ಯಾಂಕಿನ ಅಧಿಕಾರಿಗಳ ತಪ್ಪು ನೀತಿಯಿಂದ ರೈತರು ಕಣ್ಣೀರಿಡುವಂಥ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಅಲ್ಲದೇ ಕೇವಲ ಮೆಕ್ಕೆಜೋಳದ ಮೇಲೆ ವಿಮೆ ತುಂಬಿಕೊಳ್ಳುತ್ತಿದ್ದು, ಉಳಿದ ಬೆಳೆಗಳು ವಿಮೆಯ ವ್ಯಾಪ್ತಿಗೆ ಬರುವಂತೆ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸೂಚನೆ ನೀಡಬೇಕು. ಸರ್ಕಾರ ಈಗಾಗಲೇ ರೈತರ ಬೆಳೆಸಾಲ ಬಾಕಿ ವಸೂಲಿಗೆ ಒತ್ತಾಯಿಸಬಾರದು ಎಂದು ಆದೇಶಿಸಿದ್ದರೂ ಬ್ಯಾಂಕಿನ ಅಧಿಕಾರಿಗಳು ಸಾಲ ವಸೂಲಿಗೆ ಇದೇ ಒಳ್ಳೆಯ ಅವಕಾಶ ಎಂದು ರೈತರನ್ನು ಪೀಡಿಸುವಂಥ ಕೆಲಸ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳೆಸಾಲ ಹಾಗೂ ವಿಮೆಯ ಅವಧಿ ಮುಗಿಯದಿರುವಂಥ ರೈತರಿಗೆ ಬೆಳೆವಿಮೆ ಮಾಡಲು ಅವಕಾಶವಾಗುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು. ರೈತರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕೆಂದು ವಿನಂತಿಸಿದರು. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಸದರಿಗೆ ಫ್ಯಾಕ್ಸ್ ಮೂಲಕ ಮನವಿ ನೀಡಲಾಯಿತು.
ಯುವಮೋರ್ಚಾದ ಸೋಮೇಶ್ವರ ಕುರ್ಡೇಕರ, ಉಪಾಧ್ಯಕ್ಷ ಹುಸೇನಸಾಬ್ ನದಾಫ್, ವೆಂಕಟೇಶ ದೈವಜ್ಞ, ಸಚಿನ ತೇಲಕರ, ಅಚ್ಯುತ್ ಹೆಸರೂರ, ವರುಣ ಆನವಟ್ಟಿ, ಲಕ್ಷ್ಮಣ ರಜಪೂತ, ಚೇತನ ಕುರುಬಗೊಂಡ, ಗಣೇಶ ಭದ್ರಶೆಟ್ಟಿ, ದ್ಯಾಮಣ್ಣ ಕೊಟ್ಟೂರ, ಸಿ.ಜಿ. ಪಾಟೀಲ, ಹನುಮರೆಡ್ಡಿ, ದೇವರೆಡ್ಡಿ ದೇಶಿ, ಎಂ.ಎಫ್. ಸುಂಕಾಪುರ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

