ಹಾವೇರಿ

ರಸ್ತೆ ದುರಸ್ತಿಗಾಗಿ ನಾಗರಿಕರ ಪ್ರತಿಭಟನೆ

Published On :

ಬ್ಯಾಡಗಿ:  ಹದಗೆಟ್ಟ ರಸ್ತೆ ದುರಸ್ತಿಪಡಿಸದ ಸ್ಥಳೀಯ ಪುರಸಭೆ ಆಡಳಿತ ಕಾರ್ಯ ವೈಖರಿ ಖಂಡಿಸಿದ ಪಟ್ಟಣದ ನಾಗರಿಕರು ಶನಿವಾರ ರಸ್ತೆಯ ತಗ್ಗು-ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.
ಸ್ಥಳೀಯ ಪುರಸಭೆ ಅಧ್ಯಕ್ಷರ ವಾರ್ಡ್‌ನಲ್ಲಿ ಇಂಥ ಪ್ರತಿಭಟನೆ ನಡೆದಿದ್ದು ವಿಶೇಷ. ಪಾಂಡು ಸುತಾರ ಮಾತನಾಡಿ, ಮೇಲಗಿರಿ ಪ್ಲಾಟ್‌ಗೆ ಹೊಂದಿಕೊಂಡ ವಾರ್ಡ್ ನಂ. 23ರಲ್ಲಿನ ರಸ್ತೆ ಹದಗೆಟ್ಟಿದ್ದರೂ ದುರಸ್ತಿ ಮಾಡಿಸುವಲ್ಲಿ ಪುರಸಭೆ ಸದಸ್ಯರು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪಟ್ಟಣದ ಬಹುತೇಕ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಲಾಗಿದೆ. ಬಹುತೇಕ ಕಡೆ ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಆದರೂ ಈ ರಸ್ತೆಯನ್ನು ನಿರ್ಲಕ್ಷಿಸಿದ್ದಾರೆಂದು ಆರೋಪಿಸಿದರು.
ತಗ್ಗು-ಗುಂಡಿಗಳಿಂದ ಕೂಡಿದ ಸದರಿ ರಸ್ತೆಯಲ್ಲಿ ಮೂರು ವರ್ಷಗಳಿಂದ ಆಟೋಗಳ ಸಂಚಾರ ಸ್ಥಗಿತವಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲರೂ ಹಂಸಬಾವಿ ರಸ್ತೆಯಲ್ಲಿ ಇಳಿದು ಅರ್ಧ ಕಿ.ಮೀ. ನಡೆದುಕೊಂಡು ತೆರಳಬೇಕಾಗಿದೆ. ವಿದ್ಯಾರ್ಥಿಗಳನ್ನು ಕರೆದೊಯ್ಯಲು ಆಟೋ ಚಾಲಕರು ನಿರಾಕರಿಸುತ್ತಿದ್ದಾರೆ. ಇದರಿಂದ ಪಾಲಕರು ಪರದಾಡುತ್ತಿದ್ದಾರೆ. ಇಷ್ಟಕ್ಕೆಲ್ಲ ಪುರಸಭೆ ಕಾರಣ. ಕೂಡಲೇ ನೈತಿಕ ಹೊಣೆ ಹೊತ್ತು ಪುರಸಭೆ ಅಧ್ಯಕ್ಷರು ರಾಜಿನಾಮೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ಜಿ.ಟಿ. ವೀರೇಶಕುಮಾರ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಇಂದಿನಿಂದಲೇ ರಸ್ತೆ ಕಾಮಗಾರಿ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು.
ಯಾಸೀನ್ ಹೊಸಪೇಟೆ, ರಾಮಣ್ಣ ಕಂಬಳಿ, ಬಸವಣ್ಣೆಪ್ಪ ಪೂಜಾರ, ಚಂದ್ರು ಕ:ಕವಿ, ಸುರೇಶ್ ಭರಡಿ, ನಾಗಪ್ಪ ಕಂಬಳಿ, ಮಹಾದೇವಪ್ಪ ಕೆಂಚನಗೌಡ್ರ, ಸುಭಾಸ್ ದಾವಣಗೆರೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.