ಹಾವೇರಿ

ಕಬ್ಬು ಬೆಳೆಗಾರರಿಂದ ಡಿಸಿ ಕಚೇರಿ ಮುತ್ತಿಗೆ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 23
ಕಬ್ಬಿನ ಬಾಕಿ ಹಣ ಪಾವತಿಗಾಗಿ ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ಇಡೀ ದಿನ ಜಿಲ್ಲಾಡಳಿತ ಭವನ ಆವರಣದ ಮುಖ್ಯ ಗೇಟಿಗೆ ಬೀಗ ಹಾಕಿ ಪ್ರತಿಭಟಿಸಿದರು. ಸಂಜೆವರೆಗೂ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮಂಗಳವಾರವೂ ಪ್ರತಿಭಟನೆ ಮುಂದುವರಿಸಲು ರೈತರು ನಿರ್ಧರಿಸಿದರು.
ಜಿಲ್ಲಾಡಳಿತ ಭವನದ ಎದುರು ಬೆಳಗ್ಗೆ 9 ಗಂಟೆಗೆ ಜಮಾಯಿಸಿದ ರೈತರು ಮುಖ್ಯ ಗೇಟಿಗೆ ಬೀಗ ಹಾಕಿದರು. ಕಬ್ಬು ಬೆಳೆಗಾರರಿಗೆ ಸರ್ಕಾರ ನಿಗದಿಪಡಿಸಿದಂತೆ ಟನ್ ಕಬ್ಬಿಗೆ ರು. 2,500 ನೀಡದ ಕಾರ್ಖಾನೆ ಮಾಲೀಕರ ವಿರುದ್ಧ ಹಾಗೂ ರೈತರಿಗೆ ಹಣ ಕೊಡಿಸಲು ವಿಫಲವಾದ ಸರ್ಕಾರದ ವಿರುದ್ಧ ರೈತರು ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಎಂ. ಮಂಜುನಾಥ ನಾಯಕ ಅವರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಕಾರರ ಮನವಿ ಆಲಿಸಿದರು. ನ್ಯಾಯ ಸಿಗುವವರೆಗೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಸಂಜೆ 5 ಗಂಟೆ ವರೆಗೂ ಕಾಯುತ್ತೇವೆ. ಒಂದು ವೇಳೆ ಉತ್ತರ ನೀಡದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು. ಇದಕ್ಕೆ ಒಪ್ಪಿದ ಜಿಲ್ಲಾಧಿಕಾರಿ ಪ್ರತಿಭಟನಕಾರರು ಸರ್ಕಾರಕ್ಕೆ ಬರೆದ ಮನವಿಯನ್ನು ಪಡೆದರು.
ಸ್ಪಂದಿಸದ ಸರ್ಕಾರ: ಮಧ್ಯಾಹ್ನ ರೈತರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ. ಮಂಜುನಾಥ ಅವರು ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುತ್ತೇನೆ. ಅಲ್ಲಿಂದ ಬಂದ ಉತ್ತರವನ್ನು ರೈತರಿಗೆ ತಿಳಿಸುತ್ತೇನೆ ಎಂದು ಹೇಳಿದ್ದರು. ಸಂಜೆ 6 ಗಂಟೆಯಾದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಇತರ ಅಧಿಕಾರಿಗಳನ್ನು ಕೇಳಿದರೆ ವಿಧಾನ ಪರಿಷತ್ ಮತ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಧಾರವಾಡಕ್ಕೆ ಹೋಗಿದ್ದಾರೆ ಎಂದು ತಿಳಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು, ಈಗ ಪ್ರತಿಭಟನೆ ಮೊಟಕುಗೊಳಿಸಿ, ಮಂಗಳವಾರ ಬೆಳಗ್ಗೆಯಿಂದ ಮತ್ತೆ ಉಗ್ರ ಪ್ರತಿಭಟನೆ ಮುಂದುವರಿಸುವ ಘೋಷಣೆ ಮಾಡಿದರು. ಯಾವ ನೌಕರರಿಗೂ ಜಿಲ್ಲಾಡಳಿತ ಭವನವನ್ನು ಪ್ರವೇಶಿಸಲು ಅವಕಾಶ ನೀಡದಂತೆ ಪ್ರತಿಭಟನೆ ಮಾಡಲಾಗುವುದು ಎಂದು ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ತಿಳಿಸಿದರು. ಸಂಘಟನೆ ಅಧ್ಯಕ್ಷ ಅಶೋಕರಡ್ಡಿ ಮರಚರಡ್ಡಿ, ಬಿಜೆಪಿ ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ರೈತ ಮುಖಂಡರಾದ ಗಂಗಾಧರ ಕನವಳ್ಳಿ, ಬಸವರಾಜ ಮಾಸೂರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮುಳ್ಳೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.