ಹಾವೇರಿ

ಸಚಿವ ಸಂಪುಟದಲ್ಲಿ ಉತ್ತರಕ್ಕೆ ಅನ್ಯಾಯ: ಕೋಳಿವಾಡ

Published On :

ಹಾವೇರಿ: ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಉ-ಕಕ್ಕೆ ಅನ್ಯಾಯವಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಇದನ್ನು ಸರಿಪಡಿಸದಿದ್ದರೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಚುನಾವಣೆಗೂ ಮೊದಲು ಇರುವ ಮೂರು ಮಂತ್ರಿ ಸ್ಥಾನವನ್ನು ಈ ಭಾಗದ ಶಾಸಕರಿಗೆ ನೀಡಬೇಕು ಎಂದು ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ಆಗ್ರಹಿಸಿದರು.
ಇಲ್ಲಿಯ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿಮಂಡಲ ರಚನೆಯಲ್ಲಿ ಈ ಭಾಗಕ್ಕೆ ಅನ್ಯಾಯವಾಗಿದೆ. ಬೆಳಗಾವಿ ಹಾಗೂ ಗುಲ್ಬರ್ಗ ವಿಭಾಗದ ಒಟ್ಟು 97 ವಿಧಾನಸಭೆ ಕ್ಷೇತ್ರಗಳ ಪೈಕಿ 57 ಕಡೆ ಕಾಂಗ್ರೆಸ್ ಶಾಸಕರಿದ್ದು, ಒಬ್ಬರು ಎಂಎಲ್‌ಸಿ ಸೇರಿದಂತೆ ಕೇವಲ 12 ಜನರಿಗೆ ಮಂತ್ರಿ ಸ್ಥಾನ ಕಲ್ಪಿಸಲಾಗಿದೆ. ದಕ್ಷಿಣ ಕರ್ನಾಟಕದ 128 ಕ್ಷೇತ್ರಗಳಲ್ಲಿ 65 ಕಾಂಗ್ರೆಸ್ ಎಂಎಲ್‌ಎಗಳಿದ್ದು, 19 ಮಂತ್ರಿಗಳು, ಸ್ಪೀಕರ್, ಉಪ ಸಭಾಪತಿ ಸೇರಿದಂತೆ 21 ಜನರಿಗೆ ಸ್ಥಾನ ಕಲ್ಪಿಸಲಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದರು.
ಶಾಸಕರಲ್ಲಿ ನಾನೇ ಹಿರಿಯ: ಮಂತ್ರಿ ಮಂಡಲ ರಚನೆಯಲ್ಲಿ ಈ ಭಾಗಕ್ಕೆ ಆಗಿರುವ ಅನ್ಯಾಯವನ್ನು ಶೀಘ್ರ ಸರಿಪಡಿಸಬೇಕು. ಬಾಕಿ ಉಳಿದ 3 ಸಚಿವ ಸ್ಥಾನವನ್ನು ಈ ಭಾಗದವರಿಗೆ ನೀಡಬೇಕು. ಲೋಕಸಭೆ ಚುನಾವಣೆಗೂ ಮೊದಲು ಈ ಕೆಲಸವಾಗಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟವಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಆಗಿರುವ ಅನ್ಯಾಯ ಸರಿಪಡಿಸುವ ವಿಶ್ವಾಸವಿದೆ. ರಾಜ್ಯದ 224 ಶಾಸಕರ ಪೈಕಿ ನಾನೇ ಹಿರಿಯ ಶಾಸಕ. ಈ ಹಿಂದೆ ಸಚಿವನಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಆದ್ದರಿಂದ ನನಗೂ ಮಂತ್ರಿಮಂಡಲದಲ್ಲಿ ಸ್ಥಾನ ಕಲ್ಪಿಸುವಂತೆ ಕೋಳಿವಾಡ ಆಗ್ರಹಿಸಿದರು.
ಮೋದಿ ಮೋಡಿ ನಡೆಯದು: ರಾಜ್ಯದಲ್ಲಿ ಕಾಂಗ್ರೆಸ್ ಜನಪರ ಯೋಜನೆ ಜಾರಿಗೆ ತಂದು ಅಬಿವೃದ್ಧಿ ಕಾರ್ಯಗಳಲ್ಲಿ ತೊಡಗಿದೆ. ಕಾಂಗ್ರೆಸ್‌ನ ಜನಪರ ಕಾರ್ಯಕ್ರಮಗಳ ಮುಂದೆ ಮೋದಿ ಮೋಡಿ ನಡೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 20ರಿಂದ 25 ಸ್ಥಾನ ಗೆಲ್ಲಲಿದೆ. ಹಾವೇರಿ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ. ಸಂಸದ ಶಿವಕುಮಾರ ಉದಾಸಿ ಅವರು ಜನಪ್ರಿಯತೆ ಕಳೆದುಕೊಂಡಿದ್ದು, ಅವರು ತಮ್ಮ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದರು.
ಪ್ರಮುಖರಾದ ಕೊಟ್ರೇಶ ಬಸೇಗಣ್ಣಿ, ಸಂಜೀವಕುಮಾರ ನೀರಲಗಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.