ಹಾವೇರಿ

ಹೆಸ್ಕಾಂಗೆ ನೂರಾರು ಕೋಟಿ ರು. ಬಿಲ್ ಬಾಕಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 2
ಜಿಲ್ಲೆಯ ಗ್ರಾಮ ಪಂಚಾಯ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ಯೋಜನೆಗೆ ಹಾಗೂ ಬೀದಿ ದೀಪಕ್ಕಾಗಿ ಬಳಸಿದ ವಿದ್ಯುತ್ ಬಿಲ್‌ನ್ನು ಸರಿಯಾಗಿ ಪಾವತಿಸದೆ ಹೆಸ್ಕಾಂಗೆ ಕೋಟ್ಯಂತರ ರು. ಬಾಕಿ ಇಟ್ಟಿವೆ. ಸರ್ಕಾರದಿಂದಲೇ ಹೆಚ್ಚಿನ ಬಿಲ್ ಬಾಕಿ ಬರಬೇಕಿದ್ದು, ಇದರೊಂದಿಗೆ ಗೃಹ ಬಳಕೆ ವಿದ್ಯುತ್ ಬಿಲ್ ಕೂಡ ಬಾಕಿ ಇರುವುದರಿಂದ ಇಲಾಖೆಗೆ ತಲೆನೋವಾಗಿದೆ.
ಇದರಿಂದ ಇಲ್ಲಿಯ ಹೆಸ್ಕಾಂ ಉಪ ವಿಭಾಗ ಸಂಪನ್ಮೂಲ ಕೊರತೆ ಎದುರಿಸುವಂತಾಗಿದೆ. ವಿವಿಧ ಯೋಜನೆ ಹಾಗೂ ವಿಭಾಗದಡಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ ಒಟ್ಟು ರು. 247 ಕೋಟಿ ಬಿಲ್ ಕಳೆದ ಡಿಸೆಂಬರ್ ಅಂತ್ಯದವರೆಗೆ ಬಾಕಿಯಿದೆ. ಜಿಲ್ಲೆಯ ಗ್ರಾಪಂ, ತಾಪಂ, ನಗರಸಭೆ, ಪುರಸಭೆ, ಪಪಂ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳು ಆಯಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಬೀದಿ ದೀಪಕ್ಕಾಗಿ ಬಳಸಿದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಗ್ರಾಮೀಣ ಭಾಗದ ಕುಡಿಯುವ ನೀರು ಮತ್ತು ಬೀದಿ ದೀಪದ ಬಳಕೆಯ ರು. 101.02 ಕೋಟಿ ಬಿಲ್ ಬಾಕಿಯಿದೆ. ಇನ್ನು ನಗರ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಬಳಸಿದ ವಿದ್ಯುತ್ ಬಿಲ್ ರು. 7.39 ಕೋಟಿ ಪಾವತಿಸುವುದು ಬಾಕಿಯಿದೆ.
ಐಪಿ ಸೆಟ್ ರು. 129 ಕೋಟಿ ಬಾಕಿ:
ಜಿಲ್ಲೆಯಲ್ಲಿ 53,582 ನೀರಾವರಿ ಪಂಪ್‌ಸೆಟ್‌ಗಳಿದ್ದು, 10 ಎಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದ್ದರಿಂದ ಸರ್ಕಾರ ಪಂಪ್‌ಸೆಟ್ ವಿದ್ಯುತ್ ಬಿಲ್ ಅನ್ನು ಹೆಸ್ಕಾಂಗೆ ಪಾವತಿಸಬೇಕಿದೆ.
 ಹೀಗೆ ಜಿಲ್ಲೆಯ ನೀರಾವರಿ ಪಂಪ್‌ಸೆಟ್‌ಗಳಿಗೆ ಬಳಕೆ ಮಾಡಿದ ವಿದ್ಯುತ್ ಬಿಲ್ ರು. 129.29 ಕೋಟಿ ಹೆಸ್ಕಾಂಗೆ ಬಾಕಿಯಿದೆ. ಹೀಗೆ ಬಾಕಿ ಬಿಲ್ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದ್ದು, ಸರ್ಕಾರ ಹಣ ಬಿಡುಗಡೆ ಮಾಡುವರೆಗೆ ಹೆಸ್ಕಾಂ ಕಾಯಬೇಕಾಗಿದೆ. ಇದಲ್ಲದೇ ಭಾಗ್ಯಜ್ಯೋತಿ ಯೋಜನೆಯಡಿ ರು. 119 ಲಕ್ಷ, ಗೃಹ ಬಳಕೆಯ ರು. 363 ಲಕ್ಷ, ವಾಣಿಜ್ಯ ಬಳಕೆಯ ರು. 53 ಲಕ್ಷ, ಕೈಗಾರಿಕೆ ಬಳಕೆಯ ರು. 56.92 ಲಕ್ಷ, ಏತ ನೀರಾವರಿ ಯೋಜನೆಯ ರು. 404 ಲಕ್ಷ ಬಿಲ್ ಬಾಕಿ ಇದೆ.
ಗಾಳಿ ಬೀಸಿದರೂ ಕರೆಂಟ್ ಕಟ್:
ವಿದ್ಯುತ್ ಮೂಲಸೌಲಭ್ಯ ಜಿಲ್ಲೆಯಲ್ಲಿ ಎಷ್ಟು ದುರ್ಬಲವಾಗಿದೆ ಎಂದರೆ ಜೋರಾಗಿ ಗಾಳಿ ಬೀಸಿದರೂ ತಾಳಿಕೊಳ್ಳುವ ಸಾಮರ್ಥ್ಯವಿಲ್ಲ. ಬೇಸಿಗೆ ಮಳೆಯನ್ನೂ ಎದುರಿಸುವ ತಾಕತ್ತಿಲ್ಲ. ಮುಂಗಾರು ಪೂರ್ವ ಬೀಸುವ ಗಾಳಿಗೆ ಕರೆಂಟ್ ಸ್ಥಗಿತಗೊಳ್ಳುತ್ತದೆ. ಗುಡುಗು, ಮಿಂಚು ಆರಂಭವಾದ ತಕ್ಷಣ ಕತ್ತಲಾದರೆ ಮತ್ತೆ ಕರೆಂಟ್ ಬರುವುದು ಮರುದಿನ ಎಂಬಂತಾಗಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಜನತೆ ಇದೇ ಸ್ಥಿತಿ ಎದುರಿಸುತ್ತಿದ್ದಾರೆ. ಮಳೆ ಬಂತೆಂದು ಖುಷಿ ಪಡುವಂತಿಲ್ಲ. ಜತೆಯಲ್ಲೇ ಕತ್ತಲೆ ಕೂಡ ಆವರಿಸುತ್ತದೆ. ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ತುಂಡಾಗಿ ಬೀಳುವ ಹಳೆಯ ವೈರ್‌ಗಳು, ವಿದ್ಯುತ್ ಲೋಡ್ ತಾಳಿಕೊಳ್ಳದ ಪರಿವರ್ತಕಗಳಿಂದಾಗಿ ಗ್ರಾಹಕರು ಪರದಾಡುವಂತಾಗಿದೆ.
ಸೂಕ್ತ ಸಮಯಕ್ಕೆ ಬಿಲ್ ತುಂಬಿ:
ರು. 66.21 ಕೋಟಿ ವೆಚ್ಚದಲ್ಲಿ ವಿದ್ಯುತ್ ಜಾಲದ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿಯಲ್ಲಿ ಶಿಥಿಲಗೊಂಡಿರುವ 541 ಕಿ.ಮೀ. ಉದ್ದದ ಎಚ್‌ಡಿ ಮಾರ್ಗ ಹಾಗೂ 381 ಕಿ.ಮೀ. ಉದ್ದದ ಎಲ್‌ಟಿ ಮಾರ್ಗದ ತಂತಿ ಬದಲಾವಣೆ ಮಾಡಲಾಗುತ್ತಿದೆ. ವೈರ್ ಶಿಥಿಲಗೊಂಡು ಹರಿದು ಬೀಳುವುದರಿಂದ ಆಗುವ ಅನಾಹುತ ತಪ್ಪಿಸುವುದು, ವೋಲ್ಟೇಜ್ ಸುಧಾರಿಸುವುದು ಹಾಗೂ ವಿದ್ಯುತ್ ನಷ್ಟ ಕಡಿಮೆ ಮಾಡಲಾಗುವುದು. ಅಲ್ಲದೇ ಈ ಯೋಜನೆಯಲ್ಲಿ ಓವರ್‌ಲೋಡ್ ಆಗಿರುವ ಫೀಡರ್‌ಗಳ ಒತ್ತಡ ಕಡಿಮೆ ಮಾಡಲು 113 ಕಿ.ಮೀ. ಉದ್ದದ ಲಿಂಕ್‌ಲೈನ್ ಕಾಮಗಾರಿ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರದ ಯೋಜನೆಗಳಿಗೆ ಬಳಕೆ ಮಾಡಿದ ವಿದ್ಯುತ್ ಬಿಲ್ ಕಾಲಕಾಲಕ್ಕೆ ಅನುದಾನ ಬರುತ್ತದೆ. ಆದರೆ, ಗೃಹ ಬಳಕೆ ವಿದ್ಯುತ್ ಬಿಲ್‌ನ್ನು ಗ್ರಾಹಕರು ಸರಿಯಾಗಿ ತುಂಬಬೇಕು ಎಂದು ಹೆಸ್ಕಾಂ ಹಾವೇರಿ ವಿಭಾಗದ ಅಧೀಕ್ಷಕ ಎಂಜಿನಿಯರ್ ನಾಗೇಶ ಕಟಕೋಳ ಮನವಿ ಮಾಡಿದ್ದಾರೆ.
ಸಿಬ್ಬಂದಿ ಕೊರತೆ
25 ವರ್ಷಗಳ ಹಿಂದೆ ವಿದ್ಯುತ್ ಬಳಕೆ ಪ್ರಮಾಣ ಕಡಿಮೆ ಇದ್ದ ಸಂದರ್ಭ ಮಂಜೂರಾಗಿರುವ ಹುದ್ದೆಯೇ ಈಗಲೂ ಇದೆ. ಈಗ ಇಲಾಖೆ ಕಾರ್ಯಭಾರ ಹೆಚ್ಚಿದ್ದು, ಹೆಚ್ಚಿನ ಹುದ್ದೆ ಅಗತ್ಯವಿದೆ. ಸದ್ಯ ಮಂಜೂರಾಗಿರುವ 1473 ಹುದ್ದೆಗಳ ಪೈಕಿ 721 ಹುದ್ದೆ ಖಾಲಿಯಿದೆ. ಮುಖ್ಯವಾಗಿ 249 ಲೈನ್‌ಮನ್ ಹುದ್ದೆಗಳಲ್ಲಿ 102 ಹುದ್ದೆ ಖಾಲಿಯಿದೆ. ಸಮರ್ಪಕವಾಗಿ ಬಿಲ್ ತುಂಬುವುದು, ವಿದ್ಯುತ್ ಕಳ್ಳತನ ಮಾಡದೇ ಗ್ರಾಹಕರು ಸಹಕರಿಸಬೇಕು ಎಂದು ಕಟಕೋಳ ಮನವಿ ಮಾಡಿದ್ದಾರೆ.
ಸುಧಾರಣೆಗೆ ಕ್ರಮ
ಹೆಸ್ಕಾಂನ ಹಾವೇರಿ ವಿಭಾಗವು ರು. 23.14 ಕೋಟಿ ವೆಚ್ಚದಲ್ಲಿ ಜಿಲ್ಲೆಯ ವಿದ್ಯುತ್ ಜಾಲದ ಸುಧಾರಣೆಗೆ ಕ್ರಮ ಕೈಗೊಂಡಿದ್ದು, ರು. 66.21 ಕೋಟಿ ವೆಚ್ಚದಲ್ಲಿ ನಿರಂತರ ಜ್ಯೋತಿ ಯೋಜನೆಯಲ್ಲಿ ಸುಮಾರು 500 ಹಳ್ಳಿಗಳಿಗೆ ನಿರಂತರ ವಿದ್ಯುತ್ ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೆಸ್ಕಾಂ ಹಾವೇರಿ ವಿಭಾಗದ ಅಧೀಕ್ಷಕ ಎಂಜಿನಿಯರ್ ನಾಗೇಶ ಕಟಕೋಳತಿಳಿಸಿದ್ದಾರೆ.


-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.